ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಆಡಳಿತ ವಿಫಲ: ಭಾಸ್ಕರ್‌ ರಾವ್‌

By Kannadaprabha News  |  First Published Nov 3, 2023, 1:39 PM IST

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಮುಖಂಡ ಭಾಸ್ಕರ್‌ರಾವ್‌ ಟೀಕಿಸಿದರು. 


ಬೆಳಗಾವಿ (ನ.03): ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಮುಖಂಡ ಭಾಸ್ಕರ್‌ರಾವ್‌ ಟೀಕಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿಲ್ಲ. ಅಧಿಕಾರಕ್ಕೆ ಬಂದ ಐದು ತಿಂಗಳಲ್ಲೇ ಕಾಂಗ್ರೆಸ್‌ನಲ್ಲಿ ಆಂತರಿಕ ಕಿತ್ತಾಟ ನಡೆಯುತ್ತಿದೆ. ಬೆಂಗಳೂರಿನಲ್ಲಿ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಪತ್ತೆಯಾದ ಅಕ್ರಮ ಹಣದ ಬಗ್ಗೆ ಉತ್ತರಿಸಲು ಸಚಿವರು ಹಿಂದೇಟು ಹಾಕುತ್ತಿದ್ದಾರೆ. ಬರ ನಿರ್ವಹಣೆಗಿಂತ ಪಂಚರಾಜ್ಯ ಚುನಾವಣೆ ಮುಖ್ಯವಾಗಿದೆ ಎಂದು ಟೀಕಿಸಿದರು.

ಚುನಾವಣೆಯಲ್ಲಿ ಜನಸಾಮಾನ್ಯರಿಗೆ ಪಂಚ ಗ್ಯಾರಂಟಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ, ಈಗ ಆಶ್ವಾಸನೆ ಈಡೇರಿಸಲು ಪರದಾಡುತ್ತಿದೆ. ಕಾಂಗ್ರೆಸ್‌ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ತಂದಿಲ್ಲ. ಕೇವಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಗೃಹಲಕ್ಷ್ಮಿ ಬಿಟ್ಟರೆ ಯಾವುದೇ ಮಹತ್ವದ ಯೋಜನೆ ಅನುಷ್ಠಾನಗೊಳಿಸಿಲ್ಲ. ಶಕ್ತಿ ಯೋಜನೆಯಿಂದ ಬಸ್‌ಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಆರೋಪಿಸಿದರು.

Tap to resize

Latest Videos

ಬಿಜೆಪಿಯವರದ್ದು ತಲೆಬುಡವಿಲ್ಲದ ಕಾನೂನುಗಳು: ಡಿಕೆಶಿ ವಾಗ್ದಾಳಿ

ಗೃಹಜ್ಯೋತಿ ಯೋಜನೆಯಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಎಲ್ಲರಿಗೂ 200 ಯುನಿಟ್‌ ವಿದ್ಯುತ್‌ ಸಿಗುತ್ತಿಲ್ಲ. ಅನ್ನಭಾಗ್ಯ ಯೋಜನೆ ಕೂಡ ವಿಫಲವಾಗಿದೆ. ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆಜಿ ಅಕ್ಕಿಯನ್ನಷ್ಟೇ ಕೊಡಲಾಗುತ್ತಿದೆ. ಉಚಿತ ವಿದ್ಯುತ್‌ ನೀಡುವುದಾಗಿ ಹೇಳಿ ವಿದ್ಯುತ್‌ ದರ ಹೆಚ್ಚಳ ಮಾಡಿದ್ದಾರೆ. ಆದರೆ, ಸರ್ಕಾರ ನುಡಿದಂತೆ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪಕ್ಷದ ಮೇಲೆ ಹಿಡಿತ, ಸರ್ಕಾರದ ಮೇಲೆ ನಿಯಂತ್ರಣ ಇಲ್ಲ. ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಎಂದು ಆರೋಪಿಸಿದರು.

ಸಿಎಂ ಬದಲಾವಣೆ ಅನಿವಾರ್ಯವಾದರೆ ಡಿಕೆಶಿಗೆ ಬೆಂಬಲ: ಶಾಸಕ ಕೆ.ಎಂ.ಉದಯ್

ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಇದೆ. ಸಚಿವರು ಬರ ಪೀಡಿತ ಪ್ರದೇಶಗಳಿಗೆ ಹೋಗುತ್ತಿಲ್ಲ. ಬರ ಪರಿಹಾರಕ್ಕೆ ಮಾತುಕತೆ ನಡೆಸುವ ನಿಟ್ಟಿನಲ್ಲಿ ಪ್ರಧಾನಿ ಭೇಟಿಗೆ ಅವಕಾಶ ಸಿಗುತ್ತಿಲ್ಲ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಪ್ರಧಾನಿ ಬಗ್ಗೆ ಅಗೌರವವಾಗುವಂತಹ ಮಾತುಗಳನ್ನಾಡುತ್ತಾರೆ. ಹಿಂದಿನ, ಇಂದಿನ ಕಾಲದ ಸಿದ್ದರಾಮಯ್ಯ ಆಡಳಿತಕ್ಕೆ ತುಂಬಾ ವ್ಯತ್ಯಾಸವಿದೆ. ಅವರೊಬ್ಬ ದುರ್ಬಲ ಮುಖ್ಯಮಂತ್ರಿಯಾಗಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಜಿರಲಿ, ಬಿಜೆಪಿ ಜಿಲ್ಲಾ ವಕ್ತಾರ ಶರದ ಪಾಟೀಲ ಉಪಸ್ಥಿತರಿದ್ದರು.

click me!