ತೆರಿಗೆ ವಂಚನೆ ಪ್ರಕರಣ: ಡಿಕೆಶಿಗೆ ಬಿಗ್ ರಿಲೀಫ್, ಐಟಿಗೆ ಮುಖಭಂಗ!

By Suvarna NewsFirst Published Apr 5, 2021, 5:05 PM IST
Highlights

ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ಕೊಟ್ಟಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಡಿಕೆ ಶಿವಕುಮಾರ್‌ಗೂ ಕೋರ್ಟ್‌ನಿಂದ ರಿಲೀಫ್ ಸಿಕ್ಕಿದೆ.

ಬೆಂಗಳೂರು, (ಏ.05): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ದದ ತೆರಿಗೆ ತೆರಿಗೆ ವಂಚನೆ ಮತ್ತು ಸಾಕ್ಷ್ಯ ನಾಶ ಪ್ರಕರಣ ವಜಾಗೊಳಿಸಿ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪುನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಈ ಮೂಲಕ ಡಿಕೆಶಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಡಿ.ಕೆ. ಶಿವಕುಮಾರ್ ಅವರ ವಿರುದ್ಧದ ತೆರಿಗೆ ವಂಚನೆಗೆ ಸಂಬಂಧಿಸಿದ ಮೂರು ಪ್ರಕರಣಗಳನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಕೆಳ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.

ಆ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರು, ಈ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿವಕುಮಾರ್ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿ, ವಿಶೇಷ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿದೆ.

ಡಿನೋಟಿಫಿಕೇಷನ್ ಪ್ರಕರಣ: ಮುಖ್ಯಮಂತ್ರಿ ಯಡಿಯೂರಪ್ಪಗೆ ಸುಪ್ರೀಂ ಬಿಗ್ ರಿಲೀಫ್

ಡಿಕೆ ಶಿವಕುಮಾರ್ ಅವರಿಂದ ತೆರಿಗೆ ವಂಚನೆ ನಡೆದಿದೆ ಎಂದು ಆರೋಪಿಸಿದ್ದ ಐಟಿ ಇಲಾಖೆ ಅಧಿಕಾರಿಗಳು, ದಾಳಿ ನಡೆದಾಗ ಮಾಜಿ ಸಚಿವರು ಕಾಗದ ಪತ್ರಗಳನ್ನು ಹರಿದು ದಾಖಲೆ ನಾಶ ಮಾಡಿದ್ದಾರೆಂದು ಆರೋಪಿಸಿತ್ತು. ಅಲ್ಲದೆ ವಿಶೇಷ ನ್ಯಾಯಾಲಯ ತನ್ನ ವ್ಯಾಪ್ತಿ ಮೀರಿ ಆರೋಪಿಯನ್ನು ದೊಷಮುಕ್ತರಾಗಿ ಘೋಷಿಸಿದೆ ಎಂದು ದೂರಿತ್ತು.

ಐಟಿ ಅಧಿಕಾರಿಗಳು ಸಲ್ಲಿಸಿರುವ ದೂರಿನ ಅನುಸಾರ 2015-16ರ ಅವಧಿಗೆ 3.14 ಕೋಟಿ ರೂ ತೆರಿಗೆ ವಂಚಿಸಲಾಗಿದೆ. 2016-17ರಲ್ಲಿ ಅಂದಾಜು 2.56 ಕೋಟಿ ರೂ. ಹಾಗೂ 2017-18ರ ಅಂದಾಜು 7.08 ಕೋಟಿ ರೂ. ತೆರಿಗೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿತ್ತು.

click me!