Latest Videos

ಕಾವೇರಿ ವಿಚಾರದಲ್ಲಿ ರಾಜ್ಯ, ಜಿಲ್ಲೆಗಾಗಿರುವ ಅನ್ಯಾಯ ಸರಿಪಡಿಸುವೆ: ಎಚ್.ಡಿ.ಕುಮಾರಸ್ವಾಮಿ

By Govindaraj SFirst Published Jun 16, 2024, 11:42 AM IST
Highlights

ಕಾವೇರಿ ವಿಚಾರದಲ್ಲಿ ರಾಜ್ಯ ಮತ್ತು ಮಂಡ್ಯ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮೊದಲು ಕಾರ್ಯೋನ್ಮುಖನಾಗುವುದಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. 

ಮದ್ದೂರು (ಜೂ.16): ಕಾವೇರಿ ವಿಚಾರದಲ್ಲಿ ರಾಜ್ಯ ಮತ್ತು ಮಂಡ್ಯ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮೊದಲು ಕಾರ್ಯೋನ್ಮುಖನಾಗುವುದಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಂಡ್ಯ ಜಿಲ್ಲೆಗೆ ಮೊದಲ ಬಾರಿಗೆ ಜಿಲ್ಲೆಯ ಗಡಿಭಾಗ ನಿಡಘಟ್ಟಕ್ಕೆ ಆಗಮಿಸಿದಾಗ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ ರೋಡ್‌ಶೋ ಮೂಲಕ ಪಟ್ಟಣಕ್ಕೆ ಆಗಮಿಸಿದ ಅವರು, ಪ್ರವಾಸಿ ಮಂದಿರ ವೃತ್ತದಲ್ಲಿ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಲೋಕಸಭಾ ಚುನಾವಣಾ ವೇಳೆ ನಾನು ಕೊಟ್ಟ ಮಾತಿನಂತೆ ಕಾವೇರಿ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಲಹೆ ಮೇರೆಗೆ ಕಾವೇರಿ ವಿಚಾರವಾಗಿ ಸಂಬಂಧಿಸಿದಂತೆ ನೀವು ಕೊಟ್ಟ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.

ಕಾಡು ಬೆಳೆಸಲು ಸರ್ಕಾರದಿಂದ ಗಂಭೀರ ಪ್ರಯತ್ನ ನಡೆದಿದೆ: ಸಿಎಂ ಸಿದ್ದರಾಮಯ್ಯ

ಅಭಿವೃದ್ಧಿಗೆ ಕಾಲಾಕಾವಕಾಶ ನೀಡಿ: ಮಂಡ್ಯ ಜಿಲ್ಲೆ 50 ವರ್ಷಗಳ ಹಿಂದೆ ಹೇಗಿತ್ತೋ ಹಾಗೆಯೇ ಇದೆ. ಎಲ್ಲವನ್ನೂ ಸರಿಪಡಿಸಲು ನನಗೆ ಸ್ವಲ್ಪ ಸಮಯ ಅಂದರೆ, ಎರಡು ಮೂರು ತಿಂಗಳು ಕಾಲಾವಕಾಶ ಕೊಡಬೇಕು. ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸಿ, ನನ್ನ ಮೇಲೆ ಜಿಲ್ಲೆಯ ಜನತೆ ಇಟ್ಟಿರುವ ವಿಶ್ವಾಸದ ಋಣವನ್ನು ತೀರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಯುವಜನರ ಉದ್ಯೋಗ ಸೃಷ್ಟಿಗೆ ಒತ್ತು: ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಬದುಕಿನಲ್ಲಿ ಬೆಳಕು ಕಾಣುವಂತಹ ಪ್ರಯತ್ನ ಮಾಡಿದ್ದೇನೆ. ಅದೇ ರೀತಿ ಈಗ ಯುವಜನರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು. ಪ್ರಧಾನಿ ನರೇಂದ್ರಮೋದಿಯವರು ನಮ್ಮ ತಂದೆಯವರ ಮೇಲೆ ಇಟ್ಟಿರುವ ಗೌರವ ಮತ್ತು ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಲವು ರೀತಿಯಲ್ಲಿ ಆರ್ಥಿಕ ಶಕ್ತಿಯನ್ನು ಬಲಪಡಿಸುವ ಅವಕಾಶಗಳು ನನ್ನ ಮುಂದಿವೆ. ಎಲ್ಲ ವಿಚಾರಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಿ ರೂಪುರೇಷೆ ಸಿದ್ಧಪಡಿಸುವುದಾಗಿ ಭರವಸೆ ನೀಡಿದರು.

ಮಂಡ್ಯ ಜಿಲ್ಲೆಗೂ ನಮಗೂ ಯಾವುದೋ ಒಂದು ಪೂರ್ವಜನ್ಮದ ಸಂಬಂಧ ಇದೆ. ಅದಕ್ಕಾಗಿ ನಾನು ಮತ್ತು ನನ್ನ ಕುಟುಂಬ ಈ ಜಿಲ್ಲೆಯ ಜನರನ್ನು ಹೃದಯದಲ್ಲಿಟ್ಟುಕೊಂಡು ಪೂಜಿಸುತ್ತಿದ್ದೇವೆ ಎಂದು ಹೇಳಿದರು. ಪ್ರಧಾನಿ ನರೇಂದ್ರಮೋದಿಯವರ ನಾಯಕತ್ವದಲ್ಲಿ ನಿಮ್ಮ ಆಶೀರ್ವಾದದ ಬಲದಿಂದ ಎರಡು ದೊಡ್ಡ ಇಲಾಖೆಗಳನ್ನು ನೀಡಿದ್ದಾರೆ. ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವನಾಗಿ ಕೆಲಸ ನಿರ್ವಹಣೆ ಮಾಡುವಂತಹ ಜವಾಬ್ದಾರಿ ಕೊಟ್ಟಿದ್ದಾರೆ. ರೈತರ ಬದುಕನ್ನು ಸರಿಪಡಿಸಬೇಕೆಂಬುದು ನನ್ನ ಆಸೆಯಾಗಿದೆ ಎಂದರು.

ಬಿಬಿಎಂಪಿ ಚುನಾವಣೆಗೆ ಸಜ್ಜಾಗಿ: ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಸೂಚನೆ

ಜಿಲ್ಲೆಯ ಜವಾಬ್ದಾರಿ ನಿಖಿಲ್‌ಗೆ: ನಾನು ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಬೇಕಿರುವುದರಿಂದ ಜಿಲ್ಲೆಯಲ್ಲಿನ ಜನರು, ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ನಿಖಿಲ್‌ ಕುಮಾರಸ್ವಾಮಿ ಅವರಿಗೆ ಜವಾಬ್ದಾರಿ ನೀಡಿದ್ದೇನೆ. ಜಿಲ್ಲೆಯಲ್ಲಿ ಪ್ರವಾಸ ಮಾಡಿ ಜನರ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು. ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಖಾತೆ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಅಗತ್ಯವಿದೆ. ಹೀಗಾಗಿ ನಾನು 15 ದಿನಗಳ ಕಾಲ ಸತತವಾಗಿ ಅದನ್ನು ತಿಳಿಯುವ ಪ್ರಯತ್ನ ಮಾಡುತ್ತೇನೆ. ಅಲ್ಲಿಯವರೆಗೆ ಕಾಲಾವಕಾಶ ಬೇಕಾಗುತ್ತದೆ. ನಂತರ ನಾನು ಸಮಯ ಸಿಕ್ಕಾಗಲೆಲ್ಲಾ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

click me!