ಕೇಂದ್ರ ಸರ್ಕಾರ ಕೆಲ ಉನ್ನತ ಹುದ್ದೆಗಳಿಗೆ ವಿವಿಧ ವಲಯಗಳ ತಜ್ಞರನ್ನು ನೇರವಾಗಿ ನೇಮಕ ಮಾಡಲು ಮುಂದಾಗಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಆ.18): ಕೇಂದ್ರ ಸರ್ಕಾರ ಕೆಲ ಉನ್ನತ ಹುದ್ದೆಗಳಿಗೆ ವಿವಿಧ ವಲಯಗಳ ತಜ್ಞರನ್ನು ನೇರವಾಗಿ ನೇಮಕ ಮಾಡಲು ಮುಂದಾಗಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಸಮುದಾಯಗಳನ್ನು ಮೀಸಲಾತಿಯಿಂದ ದೂರವಿಡುವ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.
ಈ ಕುರಿತು ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಖರ್ಗೆ, ‘ಸಂವಿಧಾನವನ್ನು ಕಿತ್ತು ಹಾಕಿದ ಬಿಜೆಪಿ ಮೀಸಲಾತಿ ಮೇಲೆ ದುಪ್ಪಟ್ಟು ದಾಳಿ ಮಾಡುತ್ತಿದೆ. ಮೋದಿ ಸರ್ಕಾರ, ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿ, ನಿರ್ದೇಶಕರು, ಉಪ ಕಾರ್ಯದರ್ಶಿ ಹುದ್ದೆ ಸೇರಿದಂತೆ ಸುಮಾರು 45 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಜಾಹೀರಾತು ನೀಡಿದೆ. ಇದರಲ್ಲಿ ಎಸ್‌ಸಿ. ಎಸ್ಟಿ, ಆರ್ಥಿಕ ಹಿಂದುಳಿದವರಿಗೆ ಮೀಸಲಾತಿ ಇದೆಯೇ? ’ ಎಂದು ಪ್ರಶ್ನಿಸಿದ್ದಾರೆ.
ಸಂವಿಧಾನ ರಕ್ಷಣೆಗೆ ತ್ಯಾಗಕ್ಕೆ ಸಿದ್ಧರಾಗಿ: ‘ಕೆಲವು ಶಕ್ತಿಗಳು’ ತಮ್ಮ ಅಭಿಪ್ರಾಯಗಳನ್ನು ಬಲವಂತವಾಗಿ ಹೇರುವ ಮೂಲಕ ನಮ್ಮ ಸಹೋದರತ್ವವನ್ನು ನಾಶಮಾಡಲು ಪ್ರಯತ್ನಿಸುತ್ತಿವೆ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂವಿಧಾನವನ್ನು ರಕ್ಷಿಸಲು ಜನರು ತ್ಯಾಗ ಮಾಡಲು ಸಿದ್ಧರಾಗಿರಬೇಕು ಎಂದು ಒತ್ತಾಯಿಸಿದರು. ‘ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಗಳನ್ನು ಸರ್ಕಾರವು ‘ಗೊಂಬೆಗಳಾಗಿ’ ಪರಿವರ್ತಿಸಿರುವುದು ಕಳವಳಕಾರಿ ಸಂಗತಿ’ ಎಂದರು.
ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮೇಲ್ಪಂಕ್ತಿ ಹಾಕಬೇಕು: ಸಿ.ಟಿ.ರವಿ
ಇದೇ ವೇಳೆ, ಆ.14 ಅನ್ನು ದೇಶ ವಿಭಜನೆ ಸಂಸ್ಮರಣಾ ದಿನ ಎಂದು ಆಚರಿಸುತ್ತಿರುವ ಮೋದಿ ಸರ್ಕಾರವನ್ನು ಟೀಕಿಸಿದ ‘ಆಡಳಿತಗಾರರು ಒಡೆದು ಆಳುವ ಚಿಂತನೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ದ್ವೇಷವನ್ನು ಹರಡುವ ಉದ್ದೇಶದಿಂದ ‘ವಿಭಜನೆ ಸಂಸ್ಮರಣಾ ದಿನ’ ಆಚರಿಸುತ್ತಿದ್ದಾರೆ. ಎಂದು ಟೀಕಿಸಿದರು.