
ಬಾಗಲಕೋಟೆ (ನ.02): ದಲಿತ ಸಿಎಂ ಬಗ್ಗೆ ಒಂದು ಬೇಡಿಕೆ ಇಟ್ಟಿದ್ದಾರೆ, ಅದು ತಪ್ಪೇನಿಲ್ಲ. ಎಲ್ಲ ಜಾತಿಯವರಿಗೂ ತಮ್ಮವರು ಮುಖ್ಯಮಂತ್ರಿ ಆಗಬೇಕು ಎಂಬ ಬೇಡಿಕೆಯಿದೆ. ಕಾಂಗ್ರೆಸ್‌ನಲ್ಲಿ ನಾವು ಬಹಳ ಜನ ದಲಿತರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದೇವೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ನಾವು ಕಾಂಗ್ರೆಸ್‌ನವರು ಹೆಚ್ಚು ದಲಿತರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದೇವೆ. ಬಿಜೆಪಿಯವರು ಈಗ ಭಯಂಕರ ಎಚ್ಚರವಾಗಿ ಬಿಟ್ಟಿದ್ದಾರೆ. ರಮೇಶ ಜಿಗಜಿಣಗಿ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿ ಅಂತ ಹೇಳಿ ನೋಡೋಣ?
ಅವರು ಕೂಡ ಸಮರ್ಥ ನಾಯಕರಿದಾರಲ್ಲ ಮಾಡಿ. ಎಲ್ಲದಕ್ಕೂ ಒಂದು ವ್ಯವಸ್ಥೆಯಿದೆ, ಆ ವ್ಯವಸ್ಥೆ ಪ್ರಕಾರ ನಡೆಯುತ್ತದೆ ಎಂದು ತಿಳಿಸಿದರು. ರಾಜ್ಯದಲ್ಲಿ ದಲಿತ ಸಿಎಂ ಚರ್ಚೆ ನಡೆದಿರುವ ಈ ಸಮಯದಲ್ಲಿ ನಿಮ್ಮನ್ನು ಸಿಎಂ ಮಾಡ್ತೀನಿ ಅಂದರೆ ಬೇಡ ಅಂತೀರಾ ಎಂಬ ಪ್ರಶ್ನೆಗೆ, ಅವಕಾಶ ಕೊಟ್ಟರೆ ದಲಿತ ಕೋಟಾದಲ್ಲಿ ಸಿಎಂ ಆಗ್ತೀನಿ ಎಂದು ಪರೋಕ್ಷವಾಗಿ ಹೇಳಿದರು. ನ.21ರಂದು ಡಿಕೆ ಶಿವಕುಮಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ವಿಷಯಕ್ಕೆ, ಕೇಳೋಣ ಅವರಿಗೆ ಎಂದರು. ಡಿಕೆಶಿ ಸಿಎಂ ಆದರೆ ನಿಮ್ಮ ಪಾತ್ರ ಏನು ಎಂಬ ಪ್ರಶ್ನೆಗೆ, ನನಗೆ ಗೊತ್ತಿರುವ ಹಾಗೇ ಇದರಲ್ಲಿ ನಮ್ಮ ಪಾತ್ರ ಏನು ಇಲ್ಲ.
ಸಿಎಲ್‌ಪಿ ಹಾಗೂ ಎಐಸಿಸಿ ಅವರು ಏನು ನಿರ್ಧಾರ ಮಾಡುತ್ತಾರೆ ಅದು ಆಗುತ್ತದೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಅದನ್ನು ನಾನು ಒಪ್ಪುತ್ತೇನೆ. ನಮ್ಮ ಮುಖ್ಯಮಂತ್ರಿಗಳು ಹೇಳಿದ್ದಾರೆ, ಹೈಕಮಾಂಡ್ ತೀರ್ಮಾನವೇ ಅಂತಿಮ ಅಂತ. ಇನ್ನು ಇದರಲ್ಲಿ ಮತ್ತೆ ಪ್ರಶ್ನೆ ಮಾಡುವಂತದು ಏನು ಇಲ್ಲ ಎಂದರು. 2028ಕ್ಕೆ ಮತ್ತೆ ಸಿಎಂ ಸಿದ್ದರಾಮಯ್ಯನವರು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ವಿಷಯಕ್ಕೆ, ಈ ಬಗ್ಗೆ ಚರ್ಚೆ ನಿಮ್ಮಲ್ಲಿ ಆಗ್ತಾ ಇವೆ. ಶಾಸಕರು, ಸಚಿವರು ಅವರವರ ಅಭಿಪ್ರಾಯ ಹೇಳುತ್ತಿರಬಹುದು. ಸಿದ್ದರಾಮಯ್ಯನವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡೋಣ ಎಂದು ಹೇಳಿದರು.
ಒಳ ಮೀಸಲಾತಿ ಜಾರಿ ವಿಚಾರವಾಗಿ ಸಂಪುಟದಿಂದ ಸುಗ್ರೀವಾಜ್ಞೆ ಹೊರಡಿಸುವಲ್ಲಿ ಕಾಂಗ್ರೆಸ್‌ನಲ್ಲೇ ಗೊಂದಲ ಇದೆ. ಕೆಲವರು ಅಪಸ್ವರ ಎತ್ತಿದ್ದಾರೆ. ಅದಕ್ಕೆ ಹೊಂದಾಣಿಕೆ ಆಗುತ್ತಿಲ್ಲ, ಒಮ್ಮತ ಮೂಡುತ್ತಿಲ್ಲ ಎಂಬ ಪ್ರಶ್ನೆಗೆ, ಇದರಲ್ಲಿ ನೀವು ದ್ವಂದ್ವ ಇಟ್ಟುಕೊಂಡಿದ್ದೀರೋ ಅಥವಾ ನಾವು ಸರ್ಕಾರದವರು ದ್ವಂದ್ವ ಇಟ್ಟುಕೊಂಡಿದ್ದೇವೋ ನನಗೆ ತಿಳಿಯದು. ಆ ಜನತೆಗೆ ಯಾವುದು ಹಿತ ಎಂಬುದನ್ನು ನಾವು ನೋಡಿಕೊಂಡು ಕಾನೂನು ತರುವುದರ ಬಗ್ಗೆ ಏನೇನು ಮಾಡಬೇಕು ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಕೆಲವೊಂದಿಷ್ಟು ವಿಷಯಗಳನ್ನು ಹೇಳೋದಕ್ಕೆ ಆಗೋದಿಲ್ಲ. ಎಲ್ಲವನ್ನು ಚರ್ಚೆ ಮಾಡಿ ಈ ಕಾನೂನನ್ನು ಚಳಿಗಾಲದ ಅಧಿವೇಶನದಲ್ಲಿ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಹಾಗೂ ಸಿಪಿಐ ಜೊತೆ ಎಂಇಎಸ್ ಪುಂಡರ ಸೆಲ್ಫಿ ಹಾಗೂ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ ಪ್ರಕರಣಕ್ಕೆ ಸಚಿವರು ಕಿಡಿಕಾರಿ, ಕೆಲವು ಕಿಡಿಗೇಡಿಗಳು ಮಾಡಿರುತ್ತಾರೆ. ಅಂತವರ ಮೇಲೆ ಕ್ರಮ ಆಗುತ್ತದೆ. ಅದನ್ನು ಸರ್ಕಾರ ಗಮನಿಸುತ್ತದೆ ಅಂತವರ ಮೇಲೆ ಕ್ರಮ ಆಗುತ್ತದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.