
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ದೆಹಲಿ ಹೈಕಮಾಂಡ್ ಭೇಟಿ ಬೆನ್ನಲ್ಲೇ ಆಪ್ತ ಸಚಿವ ಕೆ.ಎನ್.ರಾಜಣ್ಣ ಅವರು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಯಾರೂ ಊಹಿಸಲಾಗದ ರಾಜಕೀಯ ಬೆಳವಣಿಗೆ ನಡೆಯಲಿದೆ ಎಂಬ ಭವಿಷ್ಯ ನುಡಿದಿರುವುದು ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.
ಏಕೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿ ಭೇಟಿ ವೇಳೆ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಸೇರಿ ಹಲವು ವಿಚಾರಗಳನ್ನು ಹೈಕಮಾಂಡ್ ಮುಂದೆ ಪ್ರಸ್ತಾಪಿಸಿದ್ದು, ಇದಕ್ಕೆ ಹೈಕಮಾಂಡ್ ಕಾದು ನೋಡುವಂತೆ ಸೂಚಿಸಿದೆ ಎನ್ನಲಾಗಿದೆ.
ಆದರೆ, ಹೈಕಮಾಂಡ್‌ನ ಈ ಕಾದು ನೋಡುವ ತಂತ್ರಗಾರಿಕೆ ರಾಜಣ್ಣ ಸೇರಿ ಹಿರಿಯ ಸಚಿವರ ತಾಳ್ಮೆಗೆಡಿಸಿದೆ ಎನ್ನಲಾಗಿದ್ದು, ಹೀಗಾಗಿಯೇ ಸೆಪ್ಟೆಂಬರ್‌ನಲ್ಲಿ ಭಾರೀ ಬೆಳವಣಿಗೆಗೆ ನಾಂದಿ ಹಾಡುವಂತಹ ಪ್ರಯತ್ನಗಳನ್ನು ಕೆಲ ಹಿರಿಯ ಸಚಿವರು ಆರಂಭಿಸಲಿದ್ದಾರೆಯೇ ಎಂಬ ಕುತೂಹಲಕರ ಪ್ರಶ್ನೆ ರಾಜಣ್ಣ ಹೇಳಿಕೆಯಿಂದ ಸೃಷ್ಟಿಯಾಗಿದೆ.
ಅಧ್ಯಕ್ಷರ ಬದಲಾವಣೆಗೆ ಒತ್ತಡ?:
ಮೂಲಗಳ ಪ್ರಕಾರ, ಹಿರಿಯ ಸಚಿವರಾದ ಸತೀಶ್ ಜಾರಕಿಹೊಳಿ, ಮಹದೇವಪ್ಪ, ಡಾ.ಜಿ.ಪರಮೇಶ್ವರ್, ರಾಜಣ್ಣ ಸೇರಿ ಹಲವು ಸಚಿವರು ಕೆಪಿಸಿಸಿ ಅಧ್ಯಕ್ಷ ಗಾದಿಯ ಬದಲಾವಣೆಗೆ ಒತ್ತಡ ನಿರ್ಮಾಣ ಮಾಡುತ್ತಿದ್ದಾರೆ. ಈ ಒತ್ತಡ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಹೈಕಮಾಂಡ್ ಮುಂದೆ ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಆದರೆ, ಹೈಕಮಾಂಡ್ ಈ ಬಗ್ಗೆ ಕಾದು ನೋಡೋಣ ಎಂಬ ಸೂಚನೆ ನೀಡಿದ್ದು ಈ ಮಾಹಿತಿಯನ್ನು ಮುಖ್ಯಮಂತ್ರಿಯವರು ಹಿರಿಯ ಸಚಿವರಿಗೆ ನೀಡಿದ್ದಾರೆ. ಆದರೆ, ಹೈಕಮಾಂಡ್‌ನ ಈ ಧೋರಣೆ ರುಚಿಸದ ಹಿನ್ನೆಲೆಯಲ್ಲಿ ಹಿರಿಯ ಸಚಿವರ ತಂಡವೊಂದು ಕೆಪಿಸಿಸಿ ಬದಲಾವಣೆಗೆ ಒತ್ತಡವನ್ನು ಮತ್ತಷ್ಟು ತೀವ್ರಗೊಳಿಸಲು ಹಾಗೂ ನೇರವಾಗಿ ಹೈಕಮಾಂಡ್ ಮೇಲೆ ಒತ್ತಡ ನಿರ್ಮಿಸುವ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.
ಹೈಕಮಾಂಡ್ ಭೇಟಿಗೆ ಹಿರಿಯರ ತಂಡ:
ಹೈಕಮಾಂಡ್ ಮೇಲೆ ಒತ್ತಡ ಹೇರುವ ಉದ್ದೇಶದಿಂದಲೇ ಹಿರಿಯ ಸಚಿವರು ನಿಯೋಗವೊಂದು ಶೀಘ್ರದಲ್ಲೇ ದೆಹಲಿಗೆ ತೆರಳಲಿದ್ದು, ನೇರವಾಗಿ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರ ಭೇಟಿ ತಮ್ಮ ಅಹವಾಲು ಮಂಡಿಸಲಿದ್ದಾರೆ ಎನ್ನಲಾಗುತ್ತಿದೆ.
ಒಂದು ವೇಳೆ ಹೈಕಮಾಂಡ್ ಈ ಒತ್ತಡಕ್ಕೆ ಮಣಿಯದಿದ್ದರೆ ಮಹತ್ವದ ತೀರ್ಮಾನವೊಂದನ್ನು ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಆ ತೀರ್ಮಾನ ಏನು ಎಂಬ ಸುಳಿವನ್ನು ಈ ಬಣ ನೀಡುತ್ತಿಲ್ಲ.
ಏನಿದು ಲೆಕ್ಕಾಚಾರ?
- ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ನಂತರ, ಅಂದರೆ ಅಕ್ಟೋಬರ್-ನವೆಂಬರ್‌ನಲ್ಲಿ ಭಾರಿ ಬದಲಾವಣೆ ನಡೆವ ನಿರೀಕ್ಷೆ ಕಾಂಗ್ರೆಸ್ಸಲ್ಲಿದೆ
- ಹೈಕಮಾಂಡ್ ಭೇಟಿ ಮುಗಿಸಿ ಸಿಎಂ ಮರಳಿದ ಮಾರನೇ ದಿನವೇ ರಾಜಣ್ಣ ಹೇಳಿಕೆ ನೀಡಿರುವುದು ವಿಪ್ಲವದ ಸೂಚನೆಯೇ ಎಂಬ ಪ್ರಶ್ನೆ ಎದ್ದಿದೆ
- ಜಾರಕಿಹೊಳಿ, ಮಹದೇವಪ್ಪ, ಪರಂ, ರಾಜಣ್ಣ ಸೇರಿ ಹಿರಿಯ ಸಚಿವರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ
- ದಿಲ್ಲಿ ಭೇಟಿ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿ ಹಲವು ವಿಚಾರವನ್ನು ಸಿಎಂ ಪ್ರಸ್ತಾಪಿಸಿದ್ದಾರೆ. ಕಾಯುವಂತೆ ಸೂಚನೆ ಸಿಕ್ಕಿದೆ ಎನ್ನಲಾಗಿದೆ
- ಈ ಕಾದು ನೋಡುವ ತಂತ್ರಗಾರಿಕೆ ರಾಜಣ್ಣ ಸೇರಿ ಹಿರಿಯ ಸಚಿವರ ತಾಳ್ಮೆಗೆಡಿಸಿದೆ. ಅದರ ಭಾಗವೇ ರಾಜಣ್ಣ ಹೇಳಿಕೆ ಎಂದು ಹೇಳಲಾಗುತ್ತಿದೆ
- ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಮತ್ತಷ್ಟು ಒತ್ತಡ ತೀವ್ರಗೊಳಿಸಲು, ನೇರ ಹೈಕಮಾಂಡ್ ಭೇಟಿಯಾಗಲು ಈ ತಂಡ ನಿರ್ಧರಿಸಿದೆ ಎನ್ನಲಾಗಿದೆ
- ಹೈಕಮಾಂಡ್ ಈ ಒತ್ತಡಕ್ಕೆ ಮಣಿಯದಿದ್ದರೆ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಳ್ಳಲಿದೆ ಎನ್ನಲಾಗುತ್ತಿದೆ. ಅದು ಏನೆಂದು ಗೊತ್ತಾಗುತ್ತಿಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.