ರಾಹುಲ್‌ ಗಾಂಧಿ ಲಿಂಗಾಯತ ಮತ ಬೇಟೆ: ಬಸವಣ್ಣ ಬಗ್ಗೆ ಶ್ರೀಗಳಿಂದ ಮಾಹಿತಿ ಸಂಗ್ರಹ

Published : Apr 24, 2023, 05:34 AM IST
ರಾಹುಲ್‌ ಗಾಂಧಿ ಲಿಂಗಾಯತ ಮತ ಬೇಟೆ: ಬಸವಣ್ಣ ಬಗ್ಗೆ ಶ್ರೀಗಳಿಂದ ಮಾಹಿತಿ ಸಂಗ್ರಹ

ಸಾರಾಂಶ

ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಸವ ಜಯಂತಿಯಂದೇ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು ಲಿಂಗಾಯತರ ಪ್ರಮುಖ ಶ್ರದ್ಧಾಕೇಂದ್ರ ಕೂಡಲಸಂಗಮಕ್ಕೆ ಭೇಟಿ ನೀಡಿದರು.

ಬಾಗಲಕೋಟೆ (ಏ.24): ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಸವ ಜಯಂತಿಯಂದೇ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು ಲಿಂಗಾಯತರ ಪ್ರಮುಖ ಶ್ರದ್ಧಾಕೇಂದ್ರ ಕೂಡಲಸಂಗಮಕ್ಕೆ ಭೇಟಿ ನೀಡಿದರು. ಜತೆಗೆ ವಿಭೂತಿ ಹಚ್ಚಿಕೊಂಡು ಸಂಗಮನಾಥ ದೇವರಿಗೆ ಆರತಿ ಬೆಳಗಿದ ಅವರು, ಐಕ್ಯಮಂಟಪದಲ್ಲಿ ಕೆಲಕಾಲ ಧ್ಯಾನವನ್ನೂ ಮಾಡಿದರು. ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿಯಂಥ ಪ್ರಮುಖ ನಾಯಕರು ಪಕ್ಷ ತೊರೆದಿದ್ದರಿಂದ ಬಿಜೆಪಿಯ ಲಿಂಗಾಯತ ಕೋಟೆಯಲ್ಲಿ ಬಿರುಕು ಬಿದ್ದಿರುವ ಹೊತ್ತಿನಲ್ಲೇ ರಾಹುಲ್‌ ಗಾಂಧಿ ಅವರ ಈ ಭೇಟಿ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಬಿಜೆಪಿಯ ಲಿಂಗಾಯತ ಮತಬುಟ್ಟಿಗೆ ಕೈಹಾಕುವ ಪ್ರಯತ್ನ ಇದರ ಹಿಂದಿದೆ.

ಹುಬ್ಬಳ್ಳಿಯಿಂದ ಹೆಲಿಕಾಪ್ಟರ್‌ ಮೂಲಕ ಕೂಡಲಸಂಗಮಕ್ಕೆ ಆಗಮಿಸಿದ ರಾಹುಲ್‌ ಗಾಂಧಿ ​ಅವರು ಮೊದಲಿಗೆ ಸಂಗಮನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಅಲ್ಲೇ ವಿಭೂತಿ ಧರಿಸಿ, ಬಳಿಕ ಬಸವಣ್ಣನವರ ಐಕ್ಯಮಂಟಪಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಇದೇ ವೇಳೆ, ಬಸವ ಯುವ ವೇದಿಕೆ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಮಧ್ಯಾಹ್ನ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಿದರು. ಈ ವೇಳೆ ರಾಹುಲ್‌ ಗಾಂಧಿ​ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ಮುಖಂಡರಾದ ಎಂ.ಬಿ.ಪಾಟೀಲ, ವಿಜಯಾನಂದ ಕಾಶಪ್ಪನವರ್‌, ಎಚ್‌.ವೈ.ಮೇಟಿ ಸೇರಿ ಅನೇಕ ಮುಖಂಡರು ಸಾಥ್‌ ನೀಡಿದರು.

ನಾನು ಲಿಂಗಾಯತ ವಿರೋಧಿ ಅಲ್ಲ: ಸಿದ್ದರಾಮಯ್ಯ

ಈ ವೇಳೆ ಮಾತನಾಡಿದ ರಾಹುಲ್‌ ಗಾಂಧಿ, ಬಸವಣ್ಣನವರು ಲೋಕತಂತ್ರದ ದಾರಿಯನ್ನು ಭಾರತ ಹಾಗೂ ಪ್ರಪಂಚಕ್ಕೆ ಪರಿಚಯಿಸಿದವರು. ಬಸವಣ್ಣನವರು ನಮಗೆ ಯಾವತ್ತೂ ಹೆದರಬೇಡಿ, ಸತ್ಯದ ಮಾರ್ಗದಲ್ಲಿ ಸಾಗಿ, ಎಲ್ಲರನ್ನೂ ಗೌರವಿಸಿ ಎಂದು ಮಾರ್ಗದರ್ಶನ ನೀಡಿದ್ದಾರೆ. ಬಸವಣ್ಣನವರ ಆದರ್ಶಗಳು ಈ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಡಗಿದೆ. ನಿಮ್ಮಲ್ಲಿ ಕತ್ತಲು ಆವರಿಸಿದರೆ, ಎಲ್ಲೋ ಒಂದು ಕಡೆಯಿಂದ ಬೆಳಕು ಗೋಚರಿಸುತ್ತದೆ. ಅದೇ ರೀತಿ ಸಮಾಜದಲ್ಲಿ ಕತ್ತಲು ಆವರಿಸಿದಾಗ ಬಸವಣ್ಣನವರು ಬೆಳಕಾಗಿ ಮೂಡಿಬಂದರು. ಬಸವಣ್ಣನವರ ಜಯಂತಿದಿನ ನಾನು ಇಲ್ಲಿಗೆ ಬಂದಿರುವುದು ಸಂತೋಷ ಎಂದು ತಿಳಿಸಿದರು.

ಸುಮಾರು 4 ಗಂಟೆ: ಸುಮಾರು ನಾಲ್ಕು ಗಂಟೆಗಳ ಕಾಲ ಕೂಡಲಸಂಗಮದಲ್ಲೇ ಕಳೆದ ರಾಹುಲ್‌ ಅವರಿಗೆ ತೋಂಟದ ಶ್ರೀಗಳು ಬಸವಣ್ಣನವರ ಬಾಲ್ಯ, ವಿಚಾರಧಾರೆಗಳ ಕುರಿತು ಹಿಂದಿಯಲ್ಲಿ ವಿವರಿಸಿದರು. ಬಸವಣ್ಣನವರ ವಿಚಾರಧಾರೆ, ಪ್ರಭಾವಿಸಿದ ಅಂಶಗಳ ಕುರಿತು ಈ ವೇಳೆ ಸ್ವಾಮೀಜಿಗಳನ್ನು ರಾಹುಲ್‌ ಕೇಳಿ ತಿಳಿದುಕೊಂಡರು. 2018ರ ಚುನಾವಣೆಯಲ್ಲಿ ಗೃಹ ಸಚಿವ ಅಮಿತ್‌ ಶಾ ಅವರು ಇದೇ ರೀತಿ ಕೂಡಲಸಂಗಮಕ್ಕೆ ಭೇಟಿ ನೀಡಿ ಚುನಾವಣಾ ರಣಕಹಳೆ ಮೊಳಗಿಸಿ ಲಿಂಗಾಯತ ಮತ ಬ್ಯಾಂಕ್‌ ಸೆಳೆದಿದ್ದರು. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ ಈಗಾಗಲೇ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಹಾಗೂ ಲಕ್ಷಣ ಸವದಿ ಅವರನ್ನು ಪಕ್ಷಕ್ಕೆ ಕರೆತಂದಿದೆ.

ವರುಣ ಕ್ಷೇತ್ರದಲ್ಲಿ ಗೆಲ್ಲುವ ಬಗ್ಗೆ ನನಗೆ ಯಾವುದೇ ಆತಂಕವಿಲ್ಲ: ಸಿದ್ದರಾಮಯ್ಯ

ನಂತರ ವಿಜಯಪುರಕ್ಕೆ ತೆರಳಿದ ರಾಹುಲ್‌ ಗಾಂಧಿ ಅವರು, ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಅದ್ಧೂರಿ ರೋಡ್‌ ಶೋನಲ್ಲಿ ಪಾಲ್ಗೊಂಡರು. ಕಾಂಗ್ರೆಸ್‌ ಬಾವುಟ, ವಿಶ್ವ ಗುರು ಬಸವಣ್ಣ ಎಂಬ ಸಂದೇಶ ಹೊತ್ತ ಬಾವುಟ ಹಿಡಿದು ಸಾವಿರಾರು ಕಾರ್ಯಕರ್ತರು ಬೆಂಬಲ ಸೂಚಿಸಿದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!