ಜೈಲುಗಳು ರೆಸಾರ್ಟ್‌ಗಳಾಗಿದ್ದು, ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಕೈಮೀರಿದೆ: ಆರ್.ಅಶೋಕ್ ಆತಂಕ

Published : Dec 18, 2025, 09:43 PM IST
R Ashok

ಸಾರಾಂಶ

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಡ್ರಗ್ಸ್ ಮಾಫಿಯಾ ನಿಯಂತ್ರಣ ತಪ್ಪಿದೆ. ಜೈಲುಗಳು ರೆಸಾರ್ಟ್‌ಗಳಾಗಿವೆ. ರಕ್ಷಣೆ ನೀಡಬೇಕಾದ ಪೊಲೀಸರೇ ಕಳ್ಳರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.

ಸುವರ್ಣ ವಿಧಾನಸಭೆ (ಡಿ.18): ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಡ್ರಗ್ಸ್ ಮಾಫಿಯಾ ನಿಯಂತ್ರಣ ತಪ್ಪಿದೆ. ಜೈಲುಗಳು ರೆಸಾರ್ಟ್‌ಗಳಾಗಿವೆ. ರಕ್ಷಣೆ ನೀಡಬೇಕಾದ ಪೊಲೀಸರೇ ಕಳ್ಳರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನ ಎರಡು ವರ್ಷಗಳ ಆಡಳಿತದಲ್ಲಿ ಕಾನೂನು ಹಾಳಾಗಿದೆ. ಆದ್ದರಿಂದ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಲಿ. ಈ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದೂ ಅವರು ಆಗ್ರಹಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ‘ಕನ್ನಡಪ್ರಭ’ದಲ್ಲಿ ಪ್ರಕಟವಾಗಿರುವ ಡ್ರಗ್ಸ್‌ ಸಂಬಂಧಿತ ಸರಣಿ ವರದಿಗಳ ಶೀರ್ಷಿಕೆಗಳನ್ನು ಪ್ರಸ್ತಾಪಿಸಿದರು. ‘ಮಕ್ಕಳೇ ಮಾದಕವಸ್ತು ಜಾಲಕ್ಕೆ ಟಾರ್ಗೆಟ್’ ಸೇರಿದಂತೆ ಹಲವು ವಿಶೇಷ ವರದಿಗಳ ಶೀರ್ಷಿಕೆಗಳನ್ನು ಪ್ರಸ್ತಾಪಿಸಿ ಡ್ರಗ್ಸ್‌ ಮಾಫಿಯಾ ಎಷ್ಟು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬುದರ ಬಗ್ಗೆ ವಿಸ್ತೃತವಾಗಿ ಮಾತನಾಡಿದರು. ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಗೃಹ ಇಲಾಖೆ ಹಾಗೂ ಸರ್ಕಾರದ ನಿಯಂತ್ರಣ ತಪ್ಪಿದೆ. ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ ಮುಂದಿನ ಯುವ ಪೀಳಿಗೆಯ ಭವಿಷ್ಯವೇ ಸರ್ವನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಡ್ರಗ್ಸ್‌ ಮಾಫಿಯಾ ಎಲ್ಲೆಡೆ ಅಧಿಕವಾಗಿದೆ. ಈ ಅಕ್ರಮ ಸರ್ಕಾರದ ಕೈ ಮೀರಿ ಹೋಗಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿದ್ದಾರೆ. ವರದಿಯೊಂದರ ಪ್ರಕಾರ ಮಾದಕ ವಸ್ತು ಸೇವಿಸುವವರಲ್ಲಿ ಶಾಲೆಗಳ ಶೇ.15ರಷ್ಟು ಮಕ್ಕಳು ಇದ್ದಾರೆ ಎಂಬುದು ಆಘಾತಕಾರಿ. ಚಾಕೋಲೇಟ್‌ ಮೂಲಕ ಮಾದಕ ವಸ್ತು ನೀಡಿ ಬಳಿಕ ಅವರನ್ನ ವ್ಯಸನಿಗಳಾಗಿ ಮಾಡುತ್ತಾರೆ. ಹೊಸ ವರ್ಷಕ್ಕೆ ಎಷ್ಟೇ ಬಿಗಿ ಮಾಡಿದರೂ ರಾಜ್ಯಕ್ಕೆ 150 ಕೋಟಿ ರು. ಮೌಲ್ಯದ ಮಾದಕ ವಸ್ತುಗಳು ಬರುತ್ತವೆ. ಪೊಲೀಸ್‌ ಇಲಾಖೆಯಲ್ಲಿ ಡ್ರಗ್ಸ್‌ ಜಾಲದೊಂದಿಗೆ ಇರುವವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್‌ ಒತ್ತಾಯಿಸಿದರು.

ಸೈಬರ್‌ ಅಪರಾಧಗಳಲ್ಲಿ 5,474 ಕೋಟಿ ರು. ವಂಚಿಸಲಾಗಿದೆ. ಪೊಲೀಸರು 627 ಕೋಟಿ ರು. ವಾಪಸ್‌ ಪಡೆದಿದ್ದಾರೆ. ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳು ಹೆಚ್ಚಿದ್ದು, ಗೃಹ ಇಲಾಖೆ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆಗಾರರಿಗೆ, ಭಯೋತ್ಪಾದಕರಿಗೆ ರೆಸಾರ್ಟ್, ಫೈವ್‌ ಸ್ಟಾರ್‌ ಸೌಲಭ್ಯ ನೀಡಲಾಗುತ್ತಿದೆ. ಕೈದಿಗಳು ಬ್ಯಾರಕ್‌ಗೆ ವರ್ಗಾವಣೆ ಮಾಡಿಸಿಕೊಳ್ಳಲು ಜೈಲಾಧಿಕಾರಿಗಳಿಗೆ ಲಂಚ ನೀಡುತ್ತಾರೆ. ಅದಕ್ಕಾಗಿ ಲಾಬಿಯೂ ನಡೆಯುತ್ತದೆ. ರೌಡಿ ಶೀಟರ್‌ ಗುಬ್ಬಚ್ಚಿ ಸೀನ ಜೈಲಿನಲ್ಲೇ ಜನ್ಮದಿನ ಆಚರಿಸಿಕೊಂಡಿದ್ದಾನೆ. ಆ ಕೇಕ್‌ ಮೇಲೆ ಹೆಸರು ಬರೆಸಿಕೊಂಡು ಸಂಭ್ರಮಿಸಿದ್ದಾನೆ. ಅಂತಹ ಕೇಕ್‌ ಜೈಲಿನೊಳಗೆ ಹೇಗೆ ಬಂತು ಎಂಬುದು ಇಂದಿಗೂ ತಿಳಿದಿಲ್ಲ ಎಂದು ಹೇಳಿದರು.

ಜೈಲಿನಲ್ಲೇ ಈಗ ಮದ್ಯ ತಯಾರಾಗುತ್ತಿದೆ

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಭಯೋತ್ಪಾದಕರ ಶಕೀಲ್‌ ಮನ್ನಾ ಕೈಯಲ್ಲಿ ಫೋನ್‌ ಇರುವ ವೀಡಿಯೋ ಹೊರಗೆ ಬಂದಿದೆ. ಇದಕ್ಕೂ ಮುನ್ನ ನಟ ದರ್ಶನ್‌ ಕೈಯಲ್ಲಿ ಸಿಗರೇಟ್‌ ಇರುವ ಫೋಟೋ ಬಂದಿತ್ತು. ಪೊಲೀಸ್‌ ಆಯುಕ್ತರು ಪ್ರತಿ ತಿಂಗಳು ಜೈಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು ಜೈಲಿನ ನಿಯಮದಲ್ಲೇ ಇದೆ. ಆದರೆ ಈ ರೀತಿ ಭೇಟಿಗಳು ನಡೆದಿಲ್ಲ. ಅನಿರೀಕ್ಷಿತ ತಪಾಸಣೆ ಮಾಡಬೇಕೆಂದು ಕೈಪಿಡಿಯಲ್ಲಿ ತಿಳಿಸಲಾಗಿದೆ. ಜೈಲಿನಲ್ಲೇ ಈಗ ಮದ್ಯ ತಯಾರಾಗುತ್ತಿದೆ. ಕೈದಿಗಳು ಮದ್ಯ ತಯಾರಿಸುವುದನ್ನು ಕಲಿತಿದ್ದಾರೆ. ಇದು ಎಣ್ಣೆ ಪಾರ್ಟಿ ಮಾಡುವ ಜೈಲಾಗಿದೆ. ಕಾರವಾರ ಜೈಲಿನಲ್ಲಿ ಕೈದಿಗಳು ಡ್ರಗ್ಸ್‌ ಸೇವಿಸುತ್ತಿದ್ದು, ಅದು ಸಿಗದಿದ್ದಾಗ ಸಿಬ್ಬಂದಿಗೆ ಹೊಡೆದಿದ್ದಾರೆ. ಜೈಲುಗಳಲ್ಲಿ ಜಾಮರ್‌ಗಳನ್ನೇ ಹ್ಯಾಕ್‌ ಮಾಡುತ್ತಾರೆ. 777 ಸಿಸಿಟಿವಿ ಕ್ಯಾಮರಾಗಳಿದ್ದು, 100 ಕೆಲಸ ಮಾಡುತ್ತಿಲ್ಲ. 1,123 ಕ್ಯಾಮರಾ ಬೇಕೆಂದು ಜೈಲಧಿಕಾರಿ ಕೇಳಿದ್ದರೂ, ಸರ್ಕಾರದ ಬಳಿ ಹಣವಿಲ್ಲದೆ ಖರೀದಿ ಮಾಡಿಲ್ಲ. ಎರಡು ವರ್ಷದಿಂದ ಕೈದಿಗಳಿಗೆ ಕೂಲಿ ಕೊಡಲು ಈಗ ಹಣವಿಲ್ಲ. ಎಷ್ಟು ಹಣ ಬಾಕಿ ಇರಿಸಿಕೊಂಡಿದ್ದಾರೆ ಎಂದು ಸರ್ಕಾರ ತಿಳಿಸಬೇಕು ಎಂದು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್‌ ಯೋಜನೆ ಹೆಸರು ಬದಲಿಸಿದ್ದೇ ಬಿಜೆಪಿ ಸಾಧನೆ: ಸಚಿವ ಸಂತೋಷ್‌ ಲಾಡ್‌ ವ್ಯಂಗ್ಯ
ರಾಜ್ಯದ 2ನೇ ರಾಜಧಾನಿ ಬೆಳಗಾವಿಗೆ ಉತ್ತಮ ಭವಿಷ್ಯ: ಡಿ.ಕೆ.ಶಿವಕುಮಾರ್ ಹೇಳಿದ್ದೇನು?