ಸಿಎಂ ರಾಂಗ್‌ ಫ್ಲೈಟ್‌ ಹತ್ತಿದ್ದಾರೆ: ಸಿದ್ಧರಾಮಯ್ಯ ವಿರುದ್ಧ ಆರ್‌.ಅಶೋಕ್‌ ಗರಂ!

Published : Dec 20, 2025, 09:42 PM IST
R Ashok

ಸಾರಾಂಶ

ಎಲ್ಲದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದಾದರೆ, ನೀವು ಏಕಿರಬೇಕು? ರಾಜೀನಾಮೆ ಕೊಟ್ಟು ಹೊರಡಿ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.

ಸುವರ್ಣ ವಿಧಾನಸಭೆ (ಡಿ.20): ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಂಗ್‌ ಫ್ಲೈಟ್ ಹತ್ತಿದ್ದಾರೆ. ಕರ್ನಾಟಕದಲ್ಲಿ ಲ್ಯಾಂಡ್‌ ಆಗುವ ಬದಲು ದೆಹಲಿಯಲ್ಲಿ ಲ್ಯಾಂಡ್‌ ಆಗಿದ್ದಾರೆ. ಎಲ್ಲದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದಾದರೆ, ನೀವು ಏಕಿರಬೇಕು? ರಾಜೀನಾಮೆ ಕೊಟ್ಟು ಹೊರಡಿ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘ ಉತ್ತರ ನೀಡುವಾಗ ಕೇಂದ್ರ ಸರ್ಕಾರದ ನಡೆ,

ರಾಜ್ಯಕ್ಕೆ ಅನುದಾನ ನೀಡುವಲ್ಲಿ ತಾರತಮ್ಯ, ಅನುದಾನ ಬಾಕಿ, ಯೋಜನೆಗಳಿಗೆ ಅನುಮೋದನೆ ನೀಡುವಲ್ಲಿ ವಿಳಂಬ ಧೋರಣೆ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ಕಟುವಾಗಿ ಟೀಕಿಸಿದರು. ಮುಖ್ಯಮಂತ್ರಿಗಳ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಆರ್.ಅಶೋಕ್‌, ‘ಮುಖ್ಯಮಂತ್ರಿ ಅವರು ಉತ್ತರ ಕರ್ನಾಟಕದ ಬಗ್ಗೆ ಮಾತನಾಡಲಿಲ್ಲ. ನಾನು ಪ್ರಸ್ತಾಪಿಸಿದ್ದ 11 ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಎಲ್ಲದಕ್ಕೂ ದೆಹಲಿಯತ್ತ ಬೊಟ್ಟು ಮಾಡುವುದಾದರೆ, ನೀವು ಇಲ್ಲಿ ಏಕಿರಬೇಕು? ಸುಮಾರು 2 ತಾಸು ಭಾಷಣ ಮಾಡಿ ಸದನದ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

ಸಿಎಂ ಆರೋಪಕ್ಕೆ ತಿರುಗೇಟು: ಕಳೆದ 60 ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿತ್ತು. ಕಾಂಗ್ರೆಸ್‌ನವರೇ ಸಿಎಂಗಳಾಗಿದ್ದರು. ಬಿಜೆಪಿ ಅಲ್ಪಕಾಲ ಅಧಿಕಾರ ನಡೆಸಿದೆ. ಸುದೀರ್ಘ ಸಮಯ ಕಾಂಗ್ರೆಸ್‌ ಸರ್ಕಾರವೇ ಅಧಿಕಾರದಲ್ಲಿ ಇದ್ದರೂ ಉತ್ತರ ಕರ್ನಾಟಕ ಅಭಿವೃದ್ಧಿ ಏಕಾಗಿಲ್ಲ? ಇದು ಯಾರ ವೈಫಲ್ಯ? ಇದು ಕಾಂಗ್ರೆಸ್‌ ವೈಫಲ್ಯ. ಕೇಂದ್ರ ಸರ್ಕಾರದ ತಾರತಮ್ಯ ಮಾಡುತ್ತಿದೆ ಎಂದು ಸಿಎಂ ಆರೋಪಿಸಿದ್ದಾರೆ. ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರದಿಂದ 927 ಕೋಟಿ ರು. ಮಂಜೂರಾಗಿದೆ.

ಅದಕ್ಕೆ ಬೇಕಾದ ಜಮೀನು ಕೊಟ್ಟಿಲ್ಲ. ಇದು ಯಾರ ವೈಫಲ್ಯ? ಅಮೃತ-1 ಯೋಜನೆಯಡಿ ಬೆಳಗಾವಿ ಹಲಗಾ ಬಳಿ ಎಸ್‌ಟಿಪಿ ಘಟಕ ಮಂಜೂರು ಮಾಡಲಾಗಿದೆ. ಅದಕ್ಕೆ ಇನ್ನೂ ಜಾಗ ಕೊಟ್ಟಿಲ್ಲ. ಅಮೃತ-2 ಯೋಜನೆಯಡಿ ಬೆಳಗಾವಿಯ ಕೋಟೆ ಕೆರೆ ಸೇರಿ 5 ಕರೆಗಳ ಅಭಿವೃದ್ಧಿಗೆ 39.45 ಕೋಟಿ ರು. ಬಿಡುಗಡೆಯಾಗಿದೆ. ಆದರೇ ಈ ಯೋಜನೆ ಇನ್ನೂ ಏಕೆ ಮುಂದೆ ಹೋಗಿಲ್ಲ. ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ 100 ಕೋಟಿ ರು. ಮಂಜೂರಾಗಿದೆ. ಇನ್ನೂ ಏಕೆ ಟೇಕಾಫ್‌ ಆಗಿಲ್ಲ. ಸುಖಾಸುಮ್ಮೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಸಿದ್ಧರಾಮಯ್ಯ ಆರೋಪಗಳಿಗೆ ತಿರುಗೇಟು ನೀಡಿದರು.

ಉತ್ತರ ಕರ್ನಾಟಕಕ್ಕೆ ‘ಬರ’ ನೀಡಿದ ಸರ್ಕಾರ: ಎಲ್ಲವನ್ನೂ ಕೇಂದ್ರ ಸರ್ಕಾರವೇ ಮಾಡುವುದಾದರೆ ನೀವೇಕೆ ಇರಬೇಕು? ನಿಮ್ಮ ಅವಶ್ಯಕತೆ ಏನು? ನೀವು ಜಾಗ ಖಾಲಿ ಮಾಡಿಕೊಂಡು ಹೊರಡಿ. ಕೇಂದ್ರ ಸರ್ಕಾರ ಏನು ಮಾಡಿದೆ ಎಂಬುದು ಇರಲಿ. ಉತ್ತರ ಕರ್ನಾಟಕಕ್ಕೆ ನೀವೇನು ಮಾಡುವಿರಿ ಎಂಬುದನ್ನು ಮೊದಲು ಹೇಳಿ. ರಾಜ್ಯ ಸರ್ಕಾರದ ಮೇಲೆ ಜವಾಬ್ದಾರಿ ಹೆಚ್ಚಿದೆ. ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು ಮಾಡುವುದು ಸರಿಯಲ್ಲ. ನಿಮ್ಮ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ನೋ ಗ್ಯಾರಂಟಿ. ಕನಿಷ್ಠ ಕಳೆದ 2 ವರ್ಷಗಳಿಂದ ಈ ಭಾಗಕ್ಕೆ ಏನು ಮಾಡಿರುವಿರಿ ಎಂಬುದನ್ನಾದರೂ ಹೇಳಿ. ಮಾತು ತೆಗೆದರೆ ನಂಜುಂಡಪ್ಪ ವರದಿ, ಪ್ರೋ. ಗೋವಿಂದರಾವ್‌ ವರದಿ ಬಗ್ಗೆ ಹೇಳುವುದಲ್ಲ. ನಿಮ್ಮ ಉತ್ತರದ ವೇಳೆ ಉತ್ತರ ಕರ್ನಾಟಕಕ್ಕೆ ಭರಪೂರ ಅನುದಾನ ನೀಡುವ ನಿರೀಕ್ಷೆ ಇತ್ತು. ಇಲ್ಲಿ ಪೂರ ಇಲ್ಲ, ಕೇವಲ ಬರ ಮಾತ್ರ ಸಿಕ್ಕಿದೆ ಎಂದು ಆರ್‌.ಅಶೋಕ್ ಹರಿಹಾಯ್ದರು.

ಶ್ವೇತಪತ್ರಕ್ಕೆ ಆಗ್ರಹ: ಪದೇ ಪದೇ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಸರ್ಕಾರವು, ಮನಮೋಹನ್‌ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ ಎಂದು ಶ್ವೇತಪತ್ರ ಹೊರಡಿಸಬೇಕು. ಜೊತೆಗೆ ಉತ್ತರ ಕರ್ನಾಟಕಕ್ಕೆ ಸರ್ಕಾರ ಏನು ಕೊಟ್ಟಿದೆ ಎಂಬುದರ ಬಗ್ಗೆಯೂ ಶ್ವೇತಪತ್ರ ಹೊರಡಿಸಬೇಕು ಎಂದು ಆರ್‌.ಅಶೋಕ್ ಆಗ್ರಹಿಸಿದರು. ಈ ಸರ್ಕಾರ ಉತ್ತರ ಕರ್ನಾಟಕ ವಿರೋಧಿ ಸರ್ಕಾರ. ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ರಾಜೀನಾಮೆ ಆಗ್ರಹಿಸಿ ಸಭಾತ್ಯಾಗ

ಅತಿಹೆಚ್ಚು ಬಜೆಟ್‌ ಮಂಡಿಸಿರುವ ಮುಖ್ಯಮಂತ್ರಿ ಉತ್ತರ ಕರ್ನಾಟಕಕ್ಕೆ ಏನನ್ನೂ ಕೊಡಲಿಲ್ಲ. ಕೂಡಲೇ ರಾಜೀನಾಮೆ ನೀಡಬೇಕು ಎಂದು ಅಗ್ರಹಿಸಿದರು. ಇದಕ್ಕೆ ವಿಪಕ್ಷ ಸದಸ್ಯರು ದನಿಗೂಡಿಸಿದರು. ಇದರಿಂದ ಸದನದಲ್ಲಿ ಗದ್ದಲ ಏರ್ಪಟ್ಟಿತು. ಬಳಿಕ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿ ಹೊರ ನಡೆದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನ್ನ-ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ: ಡಿ.ಕೆ.ಶಿವಕುಮಾರ್ ಹೇಳಿಕೆ ಹಾಟ್ ಟಾಪಿಕ್!
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?