ಎಂ.ಬಿ.ಪಾಟೀಲ ಕರ್ನಾಟಕದ ಆಸ್ತಿ: ಮಾಜಿ ಸಂಸದೆ ರಮ್ಯಾ

By Kannadaprabha News  |  First Published May 7, 2023, 11:23 PM IST

ತಿಕೋಟಾ ತಾಲೂಕಿನ ಜಾಲಗೇರಿ, ಜಾಲಗೇರಿ ಎಲ್‌.ಟಿ.1, ತಿಕೋಟಾ, ನಿಡೋಣಿ, ಬಬಲೇಶ್ವರಗಳಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಪರ ಪ್ರಚಾರ ಕೈಗೊಂಡು ರೋಡ್‌ ಶೋ ನಡೆಸಿದ ಚಿತ್ರನಟಿ ರಮ್ಯಾ 


ವಿಜಯಪುರ(ಮೇ.07):  ಬಸವಣ್ಣನವರ ಕಾಯಕ ತತ್ವದಡಿ ಜನಸೇವೆ ಮಾಡುತ್ತಿರುವ ಎಂ.ಬಿ.ಪಾಟೀಲ ಅವರು ಕರ್ನಾಟಕದ ಆಸ್ತಿಯಾಗಿದ್ದಾರೆ ಎಂದು ಚಿತ್ರನಟಿ ರಮ್ಯ ಹೇಳಿದ್ದಾರೆ. ತಿಕೋಟಾ ತಾಲೂಕಿನ ಜಾಲಗೇರಿ, ಜಾಲಗೇರಿ ಎಲ್‌.ಟಿ.1, ತಿಕೋಟಾ, ನಿಡೋಣಿ, ಬಬಲೇಶ್ವರಗಳಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಪರ ಪ್ರಚಾರ ಕೈಗೊಂಡು ರೋಡ್‌ ಶೋ ಕಾರ್ನರ್‌ ಮೀಟಿಂಗ್‌ನಲ್ಲಿ ಮಾತನಾಡಿದರು.

ಸಿದ್ಧೇಶ್ವರ ಸ್ವಾಮೀಜಿ ಬೊಗಸೆ ನೀರನ್ನು ಕೇಳಿದರು. ಆದರೆ, ಎಂ.ಬಿ.ಪಾಟೀಲರು ಹೊಳೆಯನ್ನು ಈ ಕಡೆ ಹರಿಸಿ ಜಲಕ್ರಾಂತಿ ಮಾಡಿದ್ದಾರೆ. ಈ ಮೂಲಕ ಜನರ ಜೀವನ ಮಟ್ಟವನ್ನು ಶಾಶ್ವತವಾಗಿ ಸುಧಾರಿಸಿದ್ದಾರೆ. ಇಂಥ ನಾಯಕರನ್ನು ಆಶೀರ್ವದಿಸಿ ಗೆಲ್ಲಿಸಿದರೆ ವಿಜಯಪುರ ಜಿಲ್ಲೆ ಅಷ್ಟೇ ಅಲ್ಲ. ಇಡೀ ನಾಡಿಗೆ ಒಳ್ಳೆಯದಾಗಲಿದೆ ಎಂದು ಹೇಳಿದರು.

Tap to resize

Latest Videos

ಬಜರಂಗದಳ ನಿಷೇಧದ ಕಾಂಗ್ರೆಸ್‌ ಪ್ರಣಾಳಿಕೆಗೆ ರಮ್ಯಾ ಆಕ್ಷೇಪ

ನಾನು ತಂದೆಯನ್ನು ಕಳೆದುಕೊಂಡಾಗ ಮಂಡ್ಯಕ್ಕೆ ಬಂದಿದ್ದ ಎಂ.ಬಿ.ಪಾಟೀಲರು ನೈತಿಕವಾಗಿ ಧೈರ್ಯ ತುಂಬಿದ್ದರು. ಅಲ್ಲದೇ, ಸಂಸತ್‌ ಸದಸ್ಯೆಯಾಗಲು ಸಹಕರಿಸಿದ್ದಾರೆ. ಜಿಲ್ಲೆ ಮತ್ತು ರಾಜ್ಯಕ್ಕೆ ಅವರ ಸೇವೆ ಅಗತ್ಯವಾಗಿದೆ. ಅವರನ್ನು ಎಲ್ಲರೂ ಬೆಂಬಲಿಸಿ ಗೆಲ್ಲಿಸಬೇಕು. ಈ ಬಾರಿ ಕಾಂಗ್ರೆಸ್‌ನ್ನು ಗೆಲ್ಲಿಸಿದರೆ ಜನಪರ ಯೋಜನೆಗಳು ಜಾರಿಯಾಗಲಿವೆ ಎಂದು ಹೇಳಿದರು.

ತಿಕೋಟಾದಲ್ಲಿ ಮಾತನಾಡಿದ ಆಶಾ ಎಂ.ಪಾಟೀಲ ಅವರು, ಎಂ.ಬಿ.ಪಾಟೀಲರ ಮೇಲೆ ತಾವೆಲ್ಲರೂ ಇಟ್ಟಿರುವ ಅಭಿಮಾನವನ್ನು ಉಳಿಸಿ ಬೆಳೆಸಬೇಕು. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕು. ಈ ಮೂಲಕ ಸರ್ವ ಜನರ ಸರ್ವಾಂಗೀಣ ಅಭಿವೃದ್ಧಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.

ಪಂಚಮಸಾಲಿ ಸಮಾಜ ಬಿಜೆಪಿ ಬೆಂಬಲಿಸಲಿ: ಯತ್ನಾಳ

ನಿಡೋಣಿಯಲ್ಲಿ ಬಸನಗೌಡ(ರಾಹುಲ್‌) ಎಂ.ಪಾಟೀಲ ಮಾತನಾಡಿ, ಇದು ಧರ್ಮ ಮತ್ತು ಅಧರ್ಮದ ಮಧ್ಯೆ ನಡೆಯುತ್ತಿರುವ ಚುನಾವಣೆ. ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕಾ? ಅಥವಾ ದಾರಿ ತಪ್ಪಬೇಕಾ? ಎಂದು ಯೋಚಿಸಿ ನಿರ್ಧರಿಸಿ ಎಂದು ಹೇಳಿದರು.

ಬಬಲೇಶ್ವರದಲ್ಲಿ ಜಿಪಂ ಮಾಜಿ ಅಧ್ಯಕ್ಷ ವಿ.ಎಸ್‌.ಪಾಟೀಲ ಮಾತನಾಡಿ, ಮತದಾರರು ಜಾತಿ ರಾಜಕಾರಣಕ್ಕೆ ಮಣೆ ಹಾಕಬಾರದು. ನಮ್ಮ ಜೀವನ ಸುಖಮಯವಾಗಿರಲು ಶಾಶ್ವತ ಪರಿಹಾರ ಒದಗಿಸಿರುವ ಎಂ. ಬಿ.ಪಾಟೀಲ ಅವರನ್ನು ಕಳೆದ ಬಾರಿಗಿಂತಲೂ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರೇಣುಕಾ ಸುನೀಲಗೌಡ ಪಾಟೀಲ, ಕಲ್ಪನಾ ಪಾಟೀಲ, ರಾಜುಗೌಡ ಪೊಲೀಸ್‌ ಪಾಟೀಲ, ಭಾಗೀರಥಿ ತೇಲಿ, ಗೀತಾಂಜಲಿ ಪಾಟೀಲ, ಪ್ರತಿಭಾ ಪಾಟೀಲ, ವಿದ್ಯಾರಾಣಿ ತುಂಗಳ, ಶ್ರೀಶೈಲಗೌಡ ಪಾಟೀಲ ನಿಡೋಣಿ, ವಿ.ಎಸ್‌.ಪಾಟೀಲ, ಈರನಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಚಿತ್ರನಟಿ ರಮ್ಯಾ ಮತ್ತು ಎಂ.ಬಿ.ಪಾಟೀಲ ಕುಟುಂಬದ ಸದಸ್ಯರು ಹಾಗೂ ಕಾಂಗ್ರೆಸ್‌ ಮುಖಂಡರಿಗೆ ಗ್ರಾಮಸ್ಥರು ಹೂ ಮಳೆ ಸುರಿಸುವ ಮೂಲಕ ಭರ್ಜರಿ ಸ್ವಾಗತ ಕೋರಿದ್ದು ಗಮನ ಸೆಳೆಯಿತು.

click me!