ಪಂಚ ಗ್ಯಾರಂಟಿಗಳಂತೆ ಯುಕೆಪಿ ಯೋಜನೆ ಜಾರಿಯ ಭರವಸೆ: ಸಚಿವ ಎಚ್‌.ಕೆ. ಪಾಟೀಲ

Published : Oct 02, 2025, 05:47 AM IST
HK Patil

ಸಾರಾಂಶ

ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದು, ಮೂರು ವರ್ಷಗಳ ಅವಧಿಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ಒದಗಿಸಲಾಗುವುದು ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಜಮಖಂಡಿ (ಅ.02): ಉತ್ತರ ಕರ್ನಾಟಕದ ಬಹುದೊಡ್ಡ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದು, ಮೂರು ವರ್ಷಗಳ ಅವಧಿಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ಒದಗಿಸಲಾಗುವುದು ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದಿಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು. ತಾಲೂಕಿನ ತುಂಗಳ ಗ್ರಾಮದ ವೆಂಕಟೇಶ್ವರ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಚ ಗ್ಯಾರಂಟಿ ಯೋಜನೆಗಳಂತೆ ಯುಕೆಪಿ ಮೂರನೇ ಹಂತದ ಯೋಜನೆ ಜಾರಿಗೊಳಿಸಲಾಗುವುದು.

75 ಸಾವಿರ ಎಕರೆ ಭೂಸ್ವಾಧೀನಕ್ಕೆ ₹30 ಸಾವಿರ ಕೋಟಿ ಹಾಗೂ ಎಡ ಮತ್ತು ಬಲದಂಡೆ ಕಾಲುವೆಗಳ ನಿರ್ಮಾಣಕ್ಕೆ 50 ಸಾವಿರ ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಅದಕ್ಕಾಗಿ ₹25 ಸಾವಿರ ಕೋಟಿಯನ್ನು ಮೂರು ವರ್ಷಗಳ ಅವಧಿಯಲ್ಲಿ ರೈತರಿಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದರಿಂದ 5.04 ಲಕ್ಷ ಹೆಕ್ಟೇರ್‌ ಪ್ರದೇಶ ನೀರಾವರಿ ಸೌಲಭ್ಯ ಪಡೆದುಕೊಳ್ಳಲಿದೆ. ಅಂದರೆ ಸರಿ ಸುಮಾರು 12 ಲಕ್ಷ ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡುವ ಯೋಜನೆಗೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

524.265 ಮೀಟರ್‌ ನೀರು ನಿಲ್ಲಿಸಲು ಕೇಂದ್ರ ಸರ್ಕಾರ ರಾಜ್ಯ ಪತ್ರದಲ್ಲಿ ಅವಾರ್ಡ ಮಾಡುವ ಮೂಲಕ ಪರವಾನಗಿ ನೀಡಬೇಕಿದೆ. ಅದಕ್ಕಾಗಿ ಸುಮಾರು 2.5ವರ್ಷಗಳ ಕಾಲಾವಧಿ ಬೇಕಾಗುತ್ತದೆ. ಇಲ್ಲವಾದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ ಎಂದು ವಿವರಿಸಿದರು. ನೀರಾವರಿಯಿಂದ ಜನರ ಬದುಕು ಹಸನಾಗಲಿದೆ. ಪಂಚ ಗ್ಯಾರಂಟಿಗಳಿಂದ ಪ್ರತಿ ಬಡ ಕುಟುಂಬಗಳಿಗೆ ತಿಂಗಳಿಗೆ ₹5 ಸಾವಿರ ಮುಟ್ಟುತ್ತಿದೆ. ಇದರ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.

ಬೀಳಗಿ ಶಾಸಕ ಜೆ.ಟ.ಪಾಟೀಲ ಮಾತನಾಡಿ, ಬರಗಾಲ ಪ್ರದೇಶವಾಗಿದ್ದ ಜಮಖಂಡಿ ಕ್ಷೇತ್ರದ ಕೊನೆಯ ಭಾಗದ ಹಳ್ಳಿಗಳಿಗೆ ಅನುಕೂಲವಾಗುವ ತುಬಚಿ ಏತನೀರಾವರಿ ಯೋಜನೆ ಜಾರಿಗೆ ತರಬೇಕು. ಸಾವಳಗಿ ತುಂಗಳ ಏತ ನೀರಾವರಿಯ ನೀರು ತಾಲೂಕಿನ ಕೊನೆಯ ಭಾಗದ ಹಳ್ಳಿಗೆಳಿಗೆ ತಲುಪುತ್ತಿಲ್ಲ. ಅಥಣಿ ಭಾಗದಿಂದ ಬರುವ ನೀರು ಕೊನೆ ಭಾಗಕ್ಕೆ ತಲುಪುತ್ತಿಲ್ಲ ಎಂದು ವಿವರಿಸಿದರು. ಸರ್ಕಾರ ಯುಕೆಪಿ ಮೂರನೇ ಹಂತದ ಯೋಜನೆಯನ್ನು ಜಾರಿಗೊಳಿಸಲು ಒಪ್ಪಿದೆ ಮೂರು ವರ್ಷಗಳ ಆವಧಿಯಲ್ಲಿ ಪರಿಹಾರ ವಿತರಿಸುವ ಕೆಲಸವಾಗಲಿದೆ ಎಂದು ಹೇಳಿದರು.

ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಆನಂದ ನ್ಯಾಮಗೌಡ ಮಾತನಾಡಿದರು. ವೇಮನ ವಿವಿಯ ಸಂಯೋಜಕ ಎಚ್‌.ಬಿ. ನಿಲಗುಂದ, ಪ್ರಾಚಾರ್ಯ ಟಿ.ಪಿ.ಗಿರಡ್ಡಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕೊಕಟನೂರಿನ ಗುರುಶಾಂತಲಿಂಗ ಸ್ವಾಮಿಗಳು, ಸಿದ್ಧಲಿಂಗ ಆಶ್ರಮದ ಅನುಸೂಯಾತಾಯಿ, ಈಶ್ವರೀಯ ವಿವಿಯ ವೈಷ್ಣವೀ ಅಕ್ಕ, ದೇವಸ್ಥಾನದ ಅರ್ಚಕ ಶಂಕರ ಕುಲಕರ್ಣಿ, ಏಗಪ್ಪಸವದಿ, ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ರಾಹುಲ್‌ ಕಲೂತಿ ನಿರ್ದೇಶಕ ಅರುಣಕುಮಾರ ಶಾ, ವರ್ಧಮಾನ ನ್ಯಾಮಗೌಡ, ಫಕ್ಕೀರಸಾಬ ಬಾಗವಾನ, ಶ್ರೀಶೈಲ ದಳವಾಯಿ, ಅರ್ಜುನ ದಳವಾಯಿ, ಮುತ್ತಣ್ಣ ಹಿಪ್ಪರಗಿ, ಸುಶೀಲ ಕುಮಾರ ಬೆಳಗಲಿ, ವಕೀಲ ಎಲ್‌.ಆರ್‌. ಉದಪುಡಿ, ತುಕಾರಾಮ ಹಾಜುವಳ್ಳಗೋಳ, ಕಲ್ಲಪ್ಪ ಗಿರಡ್ಡಿ, ವಿಜಯಲಕ್ಷ್ಮೀ ಹೊಸೂರು ಪಿಡಿಓ ಅಶೋಕ ಜನಗೌಡ ವೇದಿಕೆಯಲ್ಲಿದ್ದರು. ಬಸವಂತಣ್ಣ ಕನಾಳ ಸ್ವಾಗತಿಸಿದರು.

ನೀರು ತಂದುಕೊಟ್ಟ ಬೀಗರು

ಸಚಿವ ಎಚ್‌.ಕೆ. ಪಾಟೀಲರು ತುಂಗಳ ಗ್ರಾಮದ ಬೀಗರು. ಅವರು ಶ್ರಮಪಟ್ಟು ಸಾವಳಗಿ-ತುಂಗಳ ಏತ ನೀರಾವರಿ ಯೊಜನೆ ಜಾರಿಗೆ ತರುವ ಮೂಲಕ ನೀರು ತಂದು ಕೊಟ್ಟಿದ್ದಾರೆ, ಇಂತಹ ಬೀಗರಿದ್ದರೆ ನಮ್ಮೆಲ್ಲ ಸಮಸ್ಯೆಗಳು ಪರಿಹಾರ ವಾಗುತ್ತವೆ ಎಂದು ಸಭೆಯ ಗಮನ ಸೆಳೆದ ಅವರು, ಸಾವಳಗಿ ತುಂಗಳ ಏತ ನೀರಾವರಿ ಯೋಜನೆಯ ನಿರ್ವಹಣೆಗೆ ಪ್ರಯತ್ನಿಸಲಾಗುವುದು. ಸರ್ಕಾರದ ಯೋಜನೆಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪೂರ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!