ಬೆದರಿಕೆ ಕರೆಗಳಿಗೆ ಜಗ್ಗಲಾರೆ, ಹೋರಾಟ ನಿಲ್ಲಿಸಲಾರೆ: ಸಚಿವ ಪ್ರಿಯಾಂಕ್ ಖರ್ಗೆ ಗುಡುಗು!

Published : Oct 14, 2025, 02:11 PM IST
 Priyank Kharge

ಸಾರಾಂಶ

ಸಚಿವ ಪ್ರಿಯಾಂಕ್ ಖರ್ಗೆ ಅವರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಬರುತ್ತಿರುವ ಬೆದರಿಕೆ ಕರೆಗಳ ಕುರಿತು ಮಾತನಾಡಿದ್ದು, ಇಂತಹ ಬೆದರಿಕೆಗಳಿಗೆ ತಾವು ಜಗ್ಗುವುದಿಲ್ಲ ಮತ್ತು ತಮ್ಮ ಸೈದ್ಧಾಂತಿಕ ಹೋರಾಟವನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. 

ಬೆಂಗಳೂರು: ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಹಾಗೂ ಕುಟುಂಬದ ವಿರುದ್ಧ ಬಂದಿರುವ ಬೆದರಿಕೆ ಕರೆಗಳ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸಿದ್ದು, ಇಂತಹ ಬೆದರಿಕೆಗಳ ನಡುವೆಯೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂಬ ದೃಢ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಮಂಗಳವಾರ ಅವರು ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿ ಈ ಕುರಿತು ವಿವರ ನೀಡಿದರು.

ಪ್ರಿಯಾಂಕ್ ಖರ್ಗೆ,  ಹಿಂದಿನ ಸರ್ಕಾರದ ಅವಧಿಯಲ್ಲಿಯೇ ನಾವು ಧ್ವನಿ ಎತ್ತಿದಾಗಲೆಲ್ಲಾ ಬೆದರಿಕೆ ಕರೆಗಳು ಬಂದಿದ್ದವು. ನನ್ನ ತಂದೆ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸಹ ಲ್ಯಾಂಡ್ ಲೈನ್ ಫೋನ್ ಮೂಲಕ ಹಲವು ಬಾರಿ ಬೆದರಿಕೆ ಹಾಕಲಾಗಿತ್ತು. ಈಗಲೂ ಸಫ್ದರ್ ಜಂಗ್ ಪೊಲೀಸ್ ಠಾಣೆಯಲ್ಲಿ ನಮ್ಮ ದೂರು ದಾಖಲಾಗಿರುವುದು ಇದೆ. ಅವರು ಬೆಂಗಳೂರಿನ ಮನೆಯಲ್ಲಿ ಇದ್ದಾಗಲೂ ರಾತ್ರಿ ಒಂದು ಗಂಟೆಯ ಸಮಯದಲ್ಲಿ ಲ್ಯಾಂಡ್ ಲೈನ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ ಘಟನೆಗಳೂ ನಡೆದಿವೆ,” ಎಂದು ಅವರು ಹೇಳಿದರು.

ಅವರು ಮುಂದುವರೆದು, “ಇದೇ ರೀತಿಯ ಘಟನೆಗಳು ನಮ್ಮ ಕುಟುಂಬಕ್ಕೆ ಹೊಸದಲ್ಲ. ಈ ಎಲ್ಲವನ್ನು ನಾವು ಎದುರಿಸುತ್ತಲೇ ಬಂದಿದ್ದೇವೆ. ಕುಟುಂಬದ ಇತರ ಸದಸ್ಯರಿಗೆ ಕರೆಗಳು ಬಂದಿಲ್ಲದಿದ್ದರೂ ನನಗೆ ಮಾತ್ರ ನಿರಂತರವಾಗಿ ವಾಟ್ಸಪ್ ಕಾಲ್‌ಗಳು ಹಾಗೂ ಬೆದರಿಕೆ ಕರೆಗಳು ಬರುತ್ತಿವೆ. ಎಫ್‌ಐಆರ್ ದಾಖಲಿಸುವ ಅವಕಾಶ ಇದ್ದರೂ, ಇವು ಎನ್‌ಕ್ರಿಪ್ಟೆಡ್ ಕಾಲ್‌ಗಳಾಗಿರುವುದರಿಂದ ಟ್ರೇಸ್ ಮಾಡುವುದು ಕಷ್ಟಕರ. ಆದ್ದರಿಂದ ಭಯಪಡುವ ಪ್ರಶ್ನೆಯೇ ಇಲ್ಲ. ವಿರೋಧ ಪಕ್ಷದಲ್ಲಿದ್ದಾಗಲೂ ಹಿಂದೆ ಸರಿಯಲಿಲ್ಲ, ಆಡಳಿತ ಪಕ್ಷದಲ್ಲಿರುವಾಗ ಹಿಂದೆ ಸರಿಯುವುದೆಂದರೆ ಪ್ರಶ್ನೆಯೇ ಇಲ್ಲ,” ಎಂದು ಖರ್ಗೆ ತೀವ್ರ ಪ್ರತಿಕ್ರಿಯೆ ನೀಡಿದರು.

“ಬೆದರಿಕೆಗಳ ಈ ರಾಜಕೀಯ ಹೊಸದೇನಲ್ಲ”

ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಹಾಗೂ ಕೆಲವು ಬಲಪಂಥೀಯ ಸಂಘಟನೆಗಳ ತತ್ವ ಸಿದ್ಧಾಂತಗಳ ಕುರಿತು ಕಿಡಿಕಾರಿದರು. ಅವರು ಹೇಳಿದರು, “ಯಾರನ್ನೂ ಹೆದರಿಸುವವರು ಇವರು ಹೊಸವರು ಅಲ್ಲ. ನೂರು ವರ್ಷಗಳಿಂದ ಇದೇ ರೀತಿಯ ಬೆದರಿಕೆ ಹಾಕುವ ತಂತ್ರ ಬಳಸುತ್ತಿದ್ದಾರೆ. ಗಾಂಧೀಜಿಯನ್ನು ಸಹ ಇಂತಹ ತತ್ವಗಳಿಂದಲೇ ಬಲಿಯಾಗಿ ಮಾಡಿದ್ದಾರೆ. ಅಂಬೇಡ್ಕರ್ ಅವರನ್ನು ಮುಗಿಸಲು ಪ್ರಯತ್ನಿಸಿದ್ದಾರೆ. ಇಂತಹ ಬೆದರಿಕೆಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇವರಿಗೆ ನೂರು ವರ್ಷದ ಇತಿಹಾಸವಿದ್ದರೆ, ನಮಗೂ 135 ವರ್ಷದ ಸಶಕ್ತ ಇತಿಹಾಸವಿರುವ ಪಾರ್ಟಿಯಿದೆ,” ಎಂದರು.

“ನಾನು ಏಕಾಂಗಿ ಅಲ್ಲ. ನನ್ನ ಹೋರಾಟ ನನ್ನ ಸಿದ್ಧಾಂತದ ಆಧಾರದಲ್ಲಿದೆ. ನಾನು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಪಾಲಿಸುತ್ತೇನೆ. ಸಂವಿಧಾನದ ಮೇಲಿನ ನನ್ನ ನಂಬಿಕೆ ಅಚಲ. ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ. ಆದರೆ ಆರ್‌ಎಸ್‌ಎಸ್‌ನ ತತ್ವ ಸಿದ್ಧಾಂತಗಳಲ್ಲಿ ಎಲ್ಲರಿಗೂ ಸ್ಥಳವಿಲ್ಲ,” ಎಂದು ಸಚಿವ ಖರ್ಗೆ ಹೇಳಿದ್ದಾರೆ.

“ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಕಾರ್ಯಕ್ರಮಕ್ಕೂ ಅನುಮತಿ ಅಗತ್ಯ”

ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ವಿಚಾರದಲ್ಲಿಯೂ ಅವರು ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದರು. “ಯಾವುದೇ ರಾಜಕೀಯ ಪಕ್ಷವಾಗಲಿ — ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ — ಅಥವಾ ಯಾವುದೇ ಸಂಘ ಸಂಸ್ಥೆಯಾಗಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಕಡ್ಡಾಯವಾಗಿ ಸರ್ಕಾರದಿಂದ ಅನುಮತಿ ಪಡೆಯಬೇಕಾಗಿದೆ. ವಿವಾಹ ಸಮಾರಂಭವನ್ನೇ ಸಾರ್ವಜನಿಕ ರಸ್ತೆಯಲ್ಲಿ ನಡೆಸಬೇಕಾದರೂ ಅನುಮತಿ ಪಡೆಯುವುದು ಅನಿವಾರ್ಯ. ಹಾಗಿದ್ದಾಗ ಆರ್‌ಎಸ್‌ಎಸ್ ಯಾಕೆ ಯಾವುದೇ ಅನುಮತಿ ಪಡೆಯುವುದಿಲ್ಲ? ಕಾನೂನಿನ ಪ್ರಕಾರ ಅನುಮತಿ ಪಡೆಯುವುದು ಕಡ್ಡಾಯ,” ಎಂದು ಪ್ರಶ್ನಿಸಿದರು.

ಅವರು ಮುಂದುವರೆದು, “ನೀವು ಹತ್ತು ಜನ ಸೇರಿ ದೊಣ್ಣೆ ಹಿಡಿದು ಬೀದಿಗೆ ಬರಬೇಕೆಂದರೆ ಅನುಮತಿ ಅಗತ್ಯ. ದೊಣ್ಣೆ ಬೀಸಿಕೊಂಡು ಬರುವವರಿಗೆ ಸರ್ಕಾರ ಸುಮ್ಮನೆ ಇರಬೇಕೆ? ನಾಳೆ ನಾನು ಕರೆ ಕೊಟ್ಟು ಎಲ್ಲಾ ಅಂಬೇಡ್ಕರ್‌ವಾದಿಗಳು ನೀಲಿ ಶರ್ಟ್ ಹಾಕಿಕೊಂಡು ದೊಣ್ಣೆ ಹಿಡಿದು ಮೆರವಣಿಗೆ ಮಾಡೋಣ ಎಂದರೆ ಸರ್ಕಾರ ಬಿಡುತ್ತದೆಯಾ? ಬಿಡುವುದಿಲ್ಲ. ಹಾಗಿದ್ದರೆ ಬೇರೆ ಸಂಘಟನೆಗಳಿಗೆ ಯಾಕೆ ವಿನಾಯಿತಿ?” ಎಂದು ಪ್ರಶ್ನೆ ಎತ್ತಿದರು.

“ಸಮಾಜ ಮತ್ತು ಸಂವಿಧಾನ ರಕ್ಷಣೆಗೆ ಹೋರಾಟ ಅಗತ್ಯ”

ಸಚಿವ ಖರ್ಗೆ ಅವರು ತಮ್ಮ ಭಾಷಣದ ಕೊನೆಯಲ್ಲಿ ಹೋರಾಟದ ಅಗತ್ಯವನ್ನು ಒತ್ತಿ ಹೇಳಿದರು. “ಕೆಲವು ಹೋರಾಟಗಳನ್ನು ಎಲ್ಲರೂ ಒಟ್ಟಾಗಿ ಮಾಡಬೇಕಾಗುತ್ತದೆ. ಕೆಲವು ಹೋರಾಟಗಳು ಏಕಾಂಗಿಯಾಗಿ ಮಾಡಬೇಕಾಗುತ್ತದೆ. ನಮ್ಮ ಸಮಾಜವನ್ನು ಉಳಿಸುವ ವಿಚಾರದಲ್ಲಿ, ಕರ್ನಾಟಕವನ್ನು ಉಳಿಸುವ ವಿಚಾರದಲ್ಲಿ ನಾವು ಎಲ್ಲರೂ ಒಂದಾಗಿದ್ದೇವೆ. ನಿನ್ನೆ ಸಿಎಂ, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್, ಡಿಸಿಎಂ ಎಲ್ಲರೂ ಮಾತನಾಡಿದ್ದಾರೆ. ಹೋರಾಟ ನಮ್ಮ ಹಕ್ಕು, ನಮ್ಮ ಕರ್ತವ್ಯ,” ಎಂದು ಅವರು ಹೇಳಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ