
ಎಂ.ಆರ್. ಚಂದ್ರಮೌಳಿ
ಕಾಂಗ್ರೆಸ್‌ನ ಫೈರ್ ಬ್ರ್ಯಾಂಡ್ ಸಚಿವ ಎನಿಸಿಕೊಂಡಿರುವ ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರ್ಕಾರಿ ಜಾಗ, ಶಾಲಾ, ಕಾಲೇಜುಗಳ ಕಟ್ಟಡ, ಮುಜರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್‌ನ ಚಟುವಟಿಕೆಗಳನ್ನ ನಿಷೇಧಿಸುವಂತೆ ಕೋರಿ ಬರೆದ ಪತ್ರ ಬಹುದೊಡ್ಡ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿಯ ಅನೇಕರು ನಾಯಕರು ಖರ್ಗೆ ವಿರುದ್ಧ ಕಟು ಟೀಕೆ ಮಾಡತೊಡಗಿದ್ದಾರೆ. ಹಾಗಿದ್ದರೆ ನೂರು ವರ್ಷಗಳ ಇತಿಹಾಸ ಹೊಂದಿರುವ ವಿಶ್ವದ ಅತಿ ದೊಡ್ಡ ಸ್ವಯಂ ಸೇವಾ ಸಂಸ್ಥೆ ಎಂದು ಕರೆಯಿಸಿಕೊಂಡಿರುವ ಆರ್‌ಎಸ್‌ಎಸ್ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆಯೇ? ತಳ ಹಂತದ ಸಮುದಾಯದ ಮಕ್ಕಳಲ್ಲಿ ಧರ್ಮದ ನಶೆ ತುಂಬುತ್ತಿದೆಯೇ? ಈ ಸಂಘಟನೆಯಲ್ಲಿ ತೊಡಗಿರುವ ವಿವಿಧ ಕ್ಷೇತ್ರಗಳ ಗಣ್ಯರು ಕಣ್ಮುಚ್ಚಿ ಆರ್‌ಎಸ್‌ಎಸ್ ಪರ ಇದ್ದಾರೆಯೇ? ಆರ್‌ಎಸ್‌ಎಸ್ ನಿಷೇಧ ಅಗತ್ಯವಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.
* ಆರ್‌ಎಸ್‌ಎಸ್ ಬಗ್ಗೆ ಇತ್ತೀಚೆಗೆ ನಿಮ್ಮ ನಿಲುವು ಕಟು ಹಾಗೂ ಗಡುಸಾಯ್ತು. ಇದಕ್ಕೆ ರಾಜಕೀಯ ಕಾರಣಗಳಿವೆಯೇ?
ನಾನು ಮೊದಲಿನಿಂದಲೂ ಇದೇ ರೀತಿ ಇದ್ದೇನೆ. ಆದರೆ, ಈಗ ಅವರು ನನ್ನ ಕಡೆ ಗಮನಿಸುತ್ತಿದ್ದಾರೆ ಅಷ್ಟೆ. ಇನ್ನು ಆರ್‌ಎಸ್‌ಎಸ್ ಬಗ್ಗೆ ಕಟುವಾಗುವುದು ಅಥವಾ ರಾಜಕೀಯ ಕಾರಣ ಅಂತ ಏನೂ ಇಲ್ಲ. ನನ್ನ ಮಾತು ತುಂಬಾ ಸರಳವಾಗಿದೆ, ಈ ತತ್ವ, ಸಿದ್ಧಾಂತ ಅಷ್ಟೊಂದು ಸರಳವಾಗಿದ್ದರೆ ಬಿಜೆಪಿ ನಾಯಕರ ಮಕ್ಕಳು ಯಾಕೆ ಅಲ್ಲಿ ಹೋಗುತ್ತಿಲ್ಲ. ಎಲ್ಲ ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದಾರೆ ಹಾಗೂ ಬೇರೆಯವರ ಮಕ್ಕಳಿಗೆ ಏನು ಬೋಧಿಸುತ್ತಿದ್ದಾರೆ ಎಂಬುದನ್ನು ಗಮನಿಸಿ. ಧರ್ಮ, ತ್ರಿಶೂಲ ದೀಕ್ಷೆ, ಜಾತಿ ಇವೆಲ್ಲ ಬೇರೆ ಮಕ್ಕಳಿಗೆ. ಆದರೆ, ಅದ್ಯಾವುದನ್ನೂ ತಮ್ಮ ಮಕ್ಕಳಿಗೆ ಆರ್‌ಎಸ್‌ಎಸ್ ನಾಯಕರು ಕೊಡಲ್ಲ. ಇದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತಾ? ನಿಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ, ಬೇರೆಯವರ ಮಕ್ಕಳಿಗೆ ಗೋರಕ್ಷಣೆ, ಧರ್ಮ ರಕ್ಷಣೆ ಅಂತ ಬೋಧಿಸುವುದು ದ್ವಂದ್ವ ಅಲ್ಲವೇ? ಆಮೇಲೆ ಬಡವರು ಮೂರು ಮಕ್ಕಳು ಹುಟ್ಟಿಸಬೇಕಂತೆ, ಇವರು ಮಾತ್ರ ಬ್ರಹ್ಮಚಾರಿ ಆಗಿರಬೇಕಂತೆ. ಇದೆಂತಹ ಲಾಜಿಕ್? ಇನ್ನು ಇವರ ಸಂಘಟನೆಯಲ್ಲಿ ತಳವಾರರು ತ್ರಿಶೂಲ ಹಿಡಿಯಬೇಕು. ಸರಸಂಘಚಾಲಕರ ಹುದ್ದೆಗಳು ಮಾತ್ರ ಮಹಿಳೆಯರು, ದಲಿತರಿಗೆ ಇಲ್ಲ. ಆರ್‌ಎಸ್‌ಎಸ್ ಇತಿಹಾಸ ಓದಿಕೊಂಡವರಿಗೆ ಈ ಬಗ್ಗೆ ಸ್ಪಷ್ಟತೆ ಇರುತ್ತದೆ. ಕಳೆದ 11 ವರ್ಷಗಳಿಂದ ವಾಟ್ಸ್‌ಆ್ಯಪ್, ಫೇಸ್ ಬುಕ್ ನೋಡಿಕೊಂಡು ಬಂದವರಿಗೆ ಸ್ಪಷ್ಟತೆ ಇರುವುದಿಲ್ಲ. ಈ ಎಲ್ಲ ಕಾರಣಗಳಿಂದ ಆರ್‌ಎಸ್‌ಎಸ್ ಬಗ್ಗೆ ನನ್ನ ವಿರೋಧವಿದೆ.
* ಆರ್‌ಎಸ್‌ಎಸ್ ಮೂಲಕ ಬಿಜೆಪಿ ಮತ್ತಿತರ ಸಂಘಟನೆಗಳು ಪ್ರಬಲವಾಗುತ್ತವೆ ಎಂಬ ಆತಂಕ ನಿಮ್ಮ ದಾಳಿಗೆ ಕಾರಣ ಅಂತಾರಲ್ಲ?
ಖಂಡಿತವಾಗಿಯೂ ಇಲ್ಲ. ಮೊದಲಿನಿಂದಲೂ ನಾನು ಆರ್‌ಎಸ್‌ಎಸ್ ವಿರೋಧಿಸುತ್ತಾ ಬಂದಿದ್ದೇನೆ. ಈ ಹಿಂದೆ ವಿಧಾನಸಭೆಯಲ್ಲಿ ಸಂವಿಧಾನ ಕುರಿತು ನಡೆದ ವಿಶೇಷ ಅಧಿವೇಶನದಲ್ಲಿ ನಾನು ವಿರೋಧಪಕ್ಷದಲ್ಲಿದ್ದಾಗ ಮಾತನಾಡುವಾಗ ಆಗಿನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ‘ಒಂದಲ್ಲಾ ಒಂದು ದಿನ ದಲಿತರು, ಮುಸ್ಲಿಮರು ಆರ್‌ಎಸ್‌ಎಸ್ ಒಪ್ಪಿಕೊಳ್ಳಬೇಕಾಗುತ್ತದೆ’ ಎಂದಿದ್ದರು. ಆಗ ನಾನು ಮುಸ್ಲಿಮರನ್ನು ಸರ ಸಂಘಚಾಲಕರನ್ನಾಗಿ ಮಾಡಿ, ಆಗ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಇನ್ನು ಶಾಲೆಗಳಲ್ಲಿ ಮಕ್ಕಳಿಗೆ ವೈಜ್ಞಾನಿಕ ವಿಚಾರ ಹೇಳಿಕೊಡಬೇಕೇ ಹೊರತು ಅತಾರ್ಕಿಕ, ಅವೈಜ್ಞಾನಿಕ ವಿಷಯಗಳನ್ನು ಕಲಿಸುವುದು ಯಾವುದೇ ಸಮಾಜಕ್ಕೂ ಒಳ್ಳೆಯದಲ್ಲ. ನಾನು ಕೇವಲ ಆರ್‌ಎಸ್‌ಎಸ್ ಅಷ್ಟೇ ಅಲ್ಲ, ಯಾವುದೇ ಧರ್ಮದ ಮೂಲಭೂತವಾದದ ವಿರೋಧಿ.
*ಸರ್ಕಾರಿ ಜಾಗ, ಕಟ್ಟಡ, ಮುಜರಾಯಿ ದೇವಸ್ಥಾನಗಳಲ್ಲಿ ಖಾಸಗಿ ಸಂಘಟನೆಗಳು ಸಭೆ, ಸಮಾರಂಭ ಮಾಡಲು ಅವಕಾಶವಿರುವಾಗ ಆರ್‌ಎಸ್‌ಎಸ್‌ಗೆ ನಿರ್ಬಂಧ ಎಂಬ ವಾದ ಎಷ್ಟು ಸರಿ?
ಅನುಮತಿ ತೆಗೆದುಕೊಂಡು ಮಾಡಲಿ. ನನ್ನ ಪ್ರಕಾರ ವಿಭಜನೆ ಪರ ವಾದ ಮಾಡುವವವರಿಗೆ, ಕೋಮು ವಿಷ ಬಿತ್ತುವ ಯಾವುದೇ ಸಂಘಟನೆಗೆ ಅಂಥ ಅವಕಾಶ ಕೊಡಬಾರದು. ಅದು ಆರ್‌ಎಸ್‌ಎಸ್ ಇರಬಹುದು ಅಥವಾ ಪಿಎಫ್‌ಐ ಇರಬಹುದು ಅಥವಾ ನಾನೇ ಇರಬಹುದು. ಆರ್‌ಎಸ್‌ಎಸ್‌ನವರು ಲಾಠಿ ಹಿಡಿದುಕೊಂಡು ಪಥ ಸಂಚಲನ ಯಾಕೆ ಮಾಡಬೇಕು? ಎಲ್ಲ ಅಂಬೇಡ್ಕರ್ ವಾದಿಗಳು ನೀಲಿ ಡ್ರೆಸ್ ಹಾಕಿಕೊಂಡು ಲಾಠಿ ಹಿಡಿದುಕೊಂಡು ಮಾರ್ಚ್ ಫಾಸ್ಟ್ ಮಾಡಬೇಕು ಅಂತ ಈಗ ನಾನೇ ಒಂದು ಕರೆ ಕೊಡುತ್ತೇನೆ ಎಂದು ತಿಳಿದುಕೊಳ್ಳಿ. ಅದನ್ನು ಒಪ್ಪುತ್ತೀರಾ?
*ಆರ್‌ಎಸ್‌ಎಸ್ ಅನ್ನು ಇಷ್ಟೊಂದು ಪ್ರಬಲವಾಗಿ ವಿರೋಧಿಸುವುದರಿಂದ ಆ ಸಂಘಟನೆ ಇನ್ನಷ್ಟು ಗಟ್ಟಿಯಾಗುವ ಸಾಧ್ಯತೆ ಇಲ್ಲ ಎಂದು ಭಾವಿಸುತ್ತೀರಾ?
ಗಟ್ಟಿ ಆಗಬಹುದು ಅಥವಾ ಆಗದೇ ಇರಬಹುದು, ಆದರೆ ನನಗೆ ಸ್ಪಷ್ಟತೆ ಇರಬೇಕು. ನಾನೇನು ಮಾತನಾಡುತ್ತೇನೆ, ಅದು ನನ್ನ ಮಕ್ಕಳಿಗೂ ಅನ್ವಯಿಸುತ್ತದೆ. ನಾನು ಹೇಳುವುದೇನೆಂದರೆ ಬಡವರ ಮಕ್ಕಳೇ ಯಾಕೆ ಗೋರಕ್ಷರಾಗಿ, ಧರ್ಮ ರಕ್ಷಕರಾಗಿ, ತ್ರಿಶೂಲ ದೀಕ್ಷೆ ಪಡೆಯಬೇಕು. ಅವರ ಮಕ್ಕಳಿಗೂ ನೀಡಲಿ. ನನ್ನ ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ, ನಿಮ್ಮ ಮಕ್ಕಳೂ ಚೆನ್ನಾಗಿ ಓದಲಿ ಎಂದು ಸ್ಪರ್ಧಾತ್ಮಕ ಕೇಂದ್ರ, ಅರಿವು ಕೇಂದ್ರ ತೆರೆಯುತ್ತೇನೆಂದು ನಾನು ಹೇಳುತ್ತೇನೆ. ಆದರೆ, ಇವರು ತಾವು ಹೇಳಿದ್ದನ್ನು ಮಾಡುತ್ತಾರಾ? ತೊಡೆ ತಟ್ಟಲು ರೆಡಿ ಇದ್ದೇವೆ, ತೊಡೆ ಮುರಿಯಲೂ ರೆಡಿ ಅಂತ ಹೇಳುತ್ತಾರಲ್ವಾ, ಅವರ ಮಕ್ಕಳ ಕೈಯಲ್ಲಿ ಗದೆ ಕೊಡುತ್ತಾರಾ? ಅವರ ಮಕ್ಕಳು ಧರ್ಮದ ನಶೆಯಲ್ಲಿ ಏಕಿಲ್ಲ? ಇವರ ಮಕ್ಕಳು ಏಕೆ ‘ಐ ಲವ್ ಆರ್‌ಎಸ್‌ಎಸ್ ಕ್ಯಾಂಪೇನ್’ ಮಾಡುತ್ತಿಲ್ಲ. ಬಿಜೆಪಿಯ ಎಷ್ಟು ಶಾಸಕರನ್ನು ಗಣ ವೇಷದಲ್ಲಿ ನೋಡಿದ್ದೀರಿ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ರಾಜಕೀಯಕ್ಕೆ ಬಂದು ಸುಮಾರು 30 ವರ್ಷ ಆಗಿರಬಹುದು. ಗಣವೇಷದಲ್ಲಿ ಅವರು ಇರುವ ಒಂದಿಪ್ಪತ್ತು ಪೋಟೋ ತೋರಿಸಿ ಸಾಕು.
* ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದಕ್ಕೆ ನಿಮ್ಮ ವಿರುದ್ಧ ಬಿಜೆಪಿ ಶಾಸಕರು ಮುಗಿಬಿದ್ದಿದ್ದಾರಲ್ಲ?
ನಿಜ. ಆದರೆ ನನ್ನ ವಿರುದ್ಧ ಮಾತನಾಡುವವರು ನೂರು ವರ್ಷದ ಇತಿಹಾಸವಿರುವ ಆರ್‌ಎಸ್‌ಎಸ್‌ನ ಹತ್ತು ಸಾಧನೆಗಳನ್ನು ಹೇಳಲು ತಯಾರಿಗಿಲ್ಲ. ನಾನು ಕೇಳುವಂಥ ಸರಳ ಪ್ರಶ್ನೆಗೆ ಅವರು ಉತ್ತರ ಕೊಟ್ಟರೆ ಸಾಕು. ವೀರ ಸಾವರ್ಕರ್ ಅವರಿಗೆ ‘ವೀರ್’ ಎಂದು ಯಾರು ಬಿರುದು ಕೊಟ್ಟರು? 50 ವರ್ಷ ಆರ್‌ಎಸ್‌ಎಸ್ ಕಚೇರಿ ಮೇಲೆ ಯಾಕೆ ರಾಷ್ಟ್ರಧ್ವಜ ಹಾರಿಸಲಿಲ್ಲ? ಯಾಕೆ ಸಂವಿಧಾನ ಬೇಡ, ಮನುಸ್ಮೃತಿ ಬೇಕು ಎಂದು ಹೇಳಿದಿರಿ? ಬ್ರಿಟಿಷರ ಹತ್ತಿರ ಸಾವರ್ಕರ್ ಯಾಕೆ ಪಿಂಚಣಿ ತೆಗೆದುಕೊಂಡರು? ನಮ್ಮ ಸಂಘಟನೆಯ ಗುರುತು ಉಗ್ರ ನರಸಿಂಹ ಆಗಬೇಕು, ಗೋಮಾತಾ ಆಗಬಾರದು ಎಂದು ವೀರ ಸಾವರ್ಕರ್ ಯಾಕೆ ಹೇಳಿದರು? ನಮ್ಮದು ಮಾತೃಭೂಮಿ ಅಲ್ಲ, ಪಿತೃ ಭೂಮಿ ಎಂದು ಅವರು ಹೇಳಿದರು. ಈ ಬಗ್ಗೆ ಪ್ರಶ್ನಿಸಿದರೆ, ಪ್ರಿಯಾಂಕಾ ಅಂದರೆ ಗಂಡಾ, ಹೆಣ್ಣಾ? ಎಂದು ಕೇಳುತ್ತಾರೆ. ವೈಯಕ್ತಿಕ ಟೀಕೆ ಮಾಡುವುದರಿಂದ ಇತಿಹಾಸ ಬದಲಾಗುತ್ತಾ? ಅಸಲಿಗೆ ನಮಗೆ ಬೇಕಿರುವುದು ಆರ್ಥಿಕ ಬೆಳವಣಿಗೆ, ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನದ ಬದುಕು ಅಷ್ಟೇ. ಇದನ್ನು ಕೊಡುವ ತತ್ವ ಯಾವುದೇ ಆಗಿದ್ದರೂ ಅದನ್ನು ಆಚರಣೆ ಮಾಡುತ್ತೇವೆ. ಯಾವ ತತ್ವ ತಾರತಮ್ಯ ಮಾಡುತ್ತದೋ ಅದನ್ನು ವಿರೋಧಿಸುತ್ತೇನೆ.
*ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಸಂವಿಧಾನದ ಆಶಯಗಳ ವಿರುದ್ಧ ಆರ್‌ಎಸ್‌ಎಸ್ ಮಕ್ಕಳಲ್ಲಿ ನಕಾರಾತ್ಮಕ ಆಲೋಚನೆ ತುಂಬುತ್ತದೆ ಎಂದು ಆರೋಪಿಸಿದ್ದಿರಿ, ಇದಕ್ಕೆ ಆಧಾರವೇನು?
ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಏನಿದೆ, ಆರ್‌ಎಸ್‌ಎಸ್ ತತ್ವದಲ್ಲಿ ಏನಿದೆ ಎಂಬುದನ್ನು ಹೋಲಿಕೆ ಮಾಡಿ ನೋಡಿ. ಆರ್‌ಎಸ್‌ಎಸ್ ದೃಷ್ಟಿಕೋನದಲ್ಲಿ ನನಗೆ ಜಾಗವೇ ಇಲ್ಲ. ನನಗೆ ಸ್ವಾಭಿಮಾನದ ಬದುಕು ಕೊಡಲು ಆಗದಿದ್ದರೆ ಆ ತತ್ವನ್ನು ಯಾಕೆ ಒಪ್ಪಿಕೊಳ್ಳಬೇಕು. ಈ ಅಂಶಗಳ ಮೇಲೆ ನಾನು ಹೇಳಿದ್ದೇನೆ.
* ಸಂವಿಧಾನದ ಆಶಯವಾಗಿ ಆರ್‌ಎಸ್‌ಎಸ್ ಕಾರ್ಯ ನಿರ್ವಹಿಸುತ್ತಿದ್ದರೆ ಈ ನೆಲದ ಕಾನೂನು. ಕೋರ್ಟ್, ಸರ್ಕಾರಗಳು ಯಾಕೆ ಮೌನವಾಗಿವೆ?
ನೋಡಿ, ಮೊನ್ನೆ ಸುಪ್ರೀಂ ಕೋರ್ಟ್‌ನ ಒಬ್ಬ ಸಾಮಾನ್ಯ ವಕೀಲ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದಿದ್ದಾನೆ. ಯಾವುದೋ ಆದೇಶ ಸರಿಯಾಗಿ ಬಂದಿಲ್ಲ, ಹಿಡಿಸಿಲ್ಲ ಎಂದು ಆತ ಈ ರೀತಿ ಮಾಡಿಲ್ಲ. ಮುಖ್ಯ ನ್ಯಾಯಮೂರ್ತಿ ನಿರ್ದಿಷ್ಟ ವರ್ಗಕ್ಕೆ ಸೇರಿದ್ದಾರೆಂದು ಧರ್ಮದ ಘೋಷಣೆ ಕೂಗಿ ಚಪ್ಪಲಿ ಎಸೆಯುತ್ತಾನೆ. ಆದರೆ, ಈ ಹುದ್ದೆಯಲ್ಲಿ ಯಾರೋ ಚತುರ್ವೇದಿ, ತ್ರಿವೇದಿ, ಶರ್ಮ ಇದ್ದರೆ ಆತ ಈ ರೀತಿ ವರ್ತಿಸುತ್ತಿದ್ದನೇ? ಇಂತಹ ಅಚಾತುರ್ಯ ಘಟಿಸಿದರೂ ಈ ಬಗ್ಗೆ ಪ್ರತಿಕ್ರಿಯಿಸಲು ಪ್ರಧಾನಿ ಮೋದಿ 9 ಗಂಟೆ ತೆಗೆದುಕೊಳ್ಳುತ್ತಾರೆ. ಆದರೆ, ಗಣ್ಯರ ಹುಟ್ಟುಹಬ್ಬಕ್ಕೆ ಕ್ಷಣಮಾತ್ರವೂ ವಿಳಂಬ ಮಾಡುವುದಿಲ್ಲ. ಇನ್ನು ದೇಶದ ಕಾನೂನು ಸಚಿವರು, ಗೃಹ ಸಚಿವರು ಸೇರಿ ಎಲ್ಲರೂ ಮೌನ ವಹಿಸಿದ್ದರು. ನಾನು ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದಕ್ಕೆ ಬಿಜೆಪಿಯ ಎಷ್ಟೊಂದು ಜನ ಪ್ರತಿಕ್ರಿಯಿಸಿದರು. ಆದರೆ, ಮುಖ್ಯ ನ್ಯಾಯಮೂರ್ತಿಗೆ ಅವಮಾನಮಾಡಿದರೂ ಇವರು ಯಾರೂ ಚಕಾರ ಎತ್ತಲಿಲ್ಲ ಏಕೆ? ಇದರರ್ಥ ಇವರನ್ನೆಲ್ಲ ಆರ್‌ಎಸ್‌ಎಸ್ ನಿಯಂತ್ರಿಸುತ್ತದೆ ಎಂದೇ ಅಲ್ಲವೇ?
* ಆರ್‌ಎಸ್‌ಎಸ್ ಪರ ನಿಲುವು ಹೊಂದಿರುವ ವಿಜ್ಞಾನಿಗಳು, ನ್ಯಾಯಾಧೀಶರು, ಶಿಕ್ಷಣ ತಜ್ಞರೆಲ್ಲ ಇದ್ದಾರೆ. ಇವರಿಗೆ ಇದು ಅರ್ಥ ಆಗಲ್ಲ ಅಂತೀರಾ?
ನೀವು ಹೇಳಿದ ಈ ತಜ್ಞರೆಲ್ಲ ಯಾವ ಜಾತಿಗೆ ಸೇರಿದವರು ಎಂದು ಸಮೀಕ್ಷೆ ಮಾಡಿದರೆ ಸತ್ಯ ಗೊತ್ತಾಗುತ್ತದೆ. ಆರ್‌ಎಸ್‌ಎಸ್ ಪರ ಇರುವವರು ಅತ್ತ ಗಾಂಧೀಜಿ ಕೊಂದ ನಾಥುರಾಮ್ ಗೋಡ್ಸೆಯನ್ನು ಪೂಜಿಸುತ್ತಾರೆ. ಇತ್ತ ಗಾಂಧಿ ಜಯಂತಿ ದಿನದಂದು ಬಂದು ಕೂರುತ್ತಾರೆ. ಇದಕ್ಕೇನು ಹೇಳಬೇಕು? ಮೊನ್ನೆ ಶಾಸಕ ಮುನಿರತ್ನ ಗಣವೇಷ ಧರಿಸಿ ಗಾಂಧಿ ಪೋಟೋ ಇಟ್ಟುಕೊಂಡು ಪ್ರತಿಭಟನೆ ಮಾಡಿರುವುದು ಇದಕ್ಕೆ ಕ್ಲಾಸಿಕ್ ಉದಾಹರಣೆ.
* ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರಲ್ಲ?
ಸರ್ಕಾರಿ ನೌಕರರರಿಗೆ ಸೇವಾ ನಿಯಮವಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮನವಿ ಮಾಡಿದ್ದೇನೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಇಲಾಖೆಯಲ್ಲೂ ಕೆಲವರು ಭಾಗಿಯಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.
* ನಿಮ್ಮ ಈ ಆಕ್ಷೇಪ ಆರ್‌ಎಸ್‌ಎಸ್ ಬಗ್ಗೆ ಮಾತ್ರವೇ ಅಥವಾ ಎಬಿವಿಪಿ, ವಿಶ್ವ ಹಿಂದು ಪರಿಷತ್ತಿಗೂ ಅನ್ವಯವಾಗುತ್ತಾ?
ಆರ್‌ಎಸ್‌ಎಸ್ ನೋಂದಣಿಯಾದ ಸಂಸ್ಥೆ ಅಲ್ಲ. ಎಬಿವಿಪಿ, ವಿಎಚ್‌ಪಿ ನೋಂದಣಿಯಾದ ಸಂಸ್ಥೆ. ಈ ಸಂಸ್ಥೆಗಳು ತಮ್ಮನ್ನು ಸ್ವಯಂ ಸೇವಾ ಸಂಸ್ಥೆ ಎಂದು ಹೇಳುತ್ತವೆ. ಹೀಗಾಗಿ ಈ ಸಂಸ್ಥೆಗಳಿಗೆ ಆರ್‌ಎಸ್‌ಎಸ್ ನಿರ್ಬಂಧ ಅನ್ವಯವಾಗಬೇಕಿಲ್ಲ.
ದುರಾದೃಷ್ಟವಶಾತ್ ಅಂತಹ ಅಧಿಕಾರ ನೀಡುವ ಕಾನೂನು ಇಲ್ಲ. ಸಂವಿಧಾನ ನನಗೆ ಅಧಿಕಾರ ನೀಡಿದ್ದರೆ ಈ ಕೂಡಲೇ ಆ ಸಂಸ್ಥೆಯನ್ನು ನಿಷೇಧಿಸುತ್ತೇನೆ. ನಮ್ಮ ಪಕ್ಷಕ್ಕೆ ಸರಿಯಾದ ರೀತಿಯಲ್ಲಿ ಕೇಂದ್ರದಲ್ಲಿ ಅಧಿಕಾರ ದೊರಕಿದಾಗ ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಬದಲಾವಣೆ ತಂದು ಅಂತಹ ಪ್ರಯತ್ನ ಮಾಡಬಹುದು. ಈಗ ಮಾಡಲು ನಾವೇನು ಸರ್ವಾಧಿಕಾರಿಗಳಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.