ಹೊಸ ರೂಪದಲ್ಲಿ Urban Naxals ಗುಜರಾತ್‌ ಪ್ರವೇಶಿಸಲು ಯತ್ನಿಸುತ್ತಿದ್ದಾರೆ: AAP ವಿರುದ್ಧ ಮೋದಿ ಪರೋಕ್ಷ ಆಕ್ರೋಶ

By Sharath Sharma KalagaruFirst Published Oct 10, 2022, 2:18 PM IST
Highlights

PM Narendra Modi speech: ಪ್ರಧಾನಿ ನರೇಂದ್ರ ಮೋದಿ ಗುಜರಾತಿನಲ್ಲಿ ಮಾತನಾಡಿ, ಅರ್ಬನ್‌ ನಕ್ಸಲರು ಹೊಸ ರೂಪದಲ್ಲಿ ಗುಜರಾತ್‌ ಪ್ರವೇಶಿಸಲು ಯತ್ನಿಸುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ ವಿರುದ್ಧ ಪರೋಕ್ಷವಾಗಿ ಗಂಭೀರ ಆರೋಪ ಮಾಡಿದ್ದಾರೆ. ಇಂದು ಅರವಿಂದ್‌ ಕೇಜ್ರಿವಾಲ್‌ ಕೂಡ ಗುಜರಾತಿನಲ್ಲಿ ಸಮಾವೇಶವೊಂದರಲ್ಲಿ ಭಾಗಿಯಾಗಲಿದ್ದು, ಇದಕ್ಕೆ ಉತ್ತರಿಸುವ ಸಾಧ್ಯತೆಯಿದೆ.

ಬರೂಚ್‌: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಗುಜರಾತಿನ ಬರೂಚ್‌ನಲ್ಲಿ ಸೋಮವಾರ ಮಾತನಾಡಿದ್ದು, ಹೊಸ ರೂಪದಲ್ಲಿ ಅರ್ಬನ್‌ ನಕ್ಸಲರು (Urban Naxals) ಗುಜರಾತ್‌ ರಾಜ್ಯಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದಾರೆ ಎಂದಿದ್ದಾರೆ. ಆದರೆ ಗುಜರಾತ್‌ ರಾಜ್ಯ ಅಲ್ಲಿನ ಯುವ ಜನಾಂಗವನ್ನು ಹಾಳು ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಗುಜರಾತಿನ ಬರೂಚ್‌ ಜಿಲ್ಲೆಯಲ್ಲಿ ದೇಶದ ಅತಿದೊಡ್ಡ ಔಷದ ಉತ್ಪಾದನಾ ಪಾರ್ಕ್‌ (Drug Manufacturing Park) ಶಂಕುಸ್ಥಾಪನೆ ವೇಳೆ ಮೋದಿ ಈ ಮಾತನ್ನು ಹೇಳಿದ್ದಾರೆ. 

"ಹೊಸ ರೂಪದಲ್ಲಿ ಅರ್ಬನ್‌ ನಕ್ಸಲರು ಗುಜರಾತಿಗೆ ಪ್ರವೇಶಿಸಲು ಹವಣಿಸುತ್ತಿದ್ದಾರೆ. ಅವರ ವಸ್ತ್ರವನ್ನು ಅವರು ಬದಲಿಸಿದ್ಧಾರೆ. ಯುವ ಸಮೂಹ ಅವರನ್ನು ಹಿಂಬಾಲಿಸುವಂತೆ ಪ್ರೇರೇಪಿಸಲಾಗುತ್ತಿದೆ," ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದು ಪರೋಕ್ಷವಾಗಿ ಆಮ್‌ ಆದ್ಮಿ ಪಕ್ಷದ ಬಗ್ಗೆ ಮೋದಿ ಹೇಳಿರುವ ಮಾತು. ಗುಜರಾತಿನ ವಿಧಾನಸಭೆ ಚುನಾವಣೆ ಇದೇ ವರ್ಷಾಂತ್ಯದಲ್ಲಿ ನಡೆಯಲಿದ್ದು, ಆಮ್‌ ಆದ್ಮಿ ಪಕ್ಷ ಬಿಜೆಪಿಗೆ ಸೆಡ್ಡು ಹೊಡೆದಿದೆ. ಇದೇ ಕಾರಣಕ್ಕೆ ಗುಜರಾತ್‌ ಭೇಟಿ ಸಂದರ್ಭದಲ್ಲಿ ಆಪ್‌ ಪಕ್ಷವನ್ನು ಅರ್ಬನ್‌ ನಕ್ಸಲರು ಎಂದು ಮೋದಿ ಪರೋಕ್ಷವಾಗಿ ಜರಿದಿದ್ದಾರೆ. 

Latest Videos

ಇದನ್ನೂ ಓದಿ: ನಾಳೆಯಿಂದ ಮತ್ತೆ 3 ದಿನಗಳ ಕಾಲ Narendra Modi ಗುಜರಾತ್ ಪ್ರವಾಸ: ಚುನಾವಣೆ ಹಿನ್ನೆಲೆ BJPಯಿಂದ 5 ಯಾತ್ರೆ

"ಅರ್ಬನ್‌ ನಕ್ಸಲರು ಮೇಲಿಂದ ಹೆಜ್ಜೆ ಇಡುವ ಪ್ರಯತ್ನ ಮಾಡುತ್ತಿದ್ಧಾರೆ. ನಮ್ಮ ಯುವ ಸಮುದಾಯವನ್ನು ಅವರು ಹಾಳು ಮಾಡಲು ನಾವು ಬಿಡುವುದಿಲ್ಲ. ನಮ್ಮ ಮಕ್ಕಳಿಗೆ ನಾವು ಅವರ ಭವಿಷ್ಯವನ್ನು ಮತ್ತು ದೇಶದ ಭವಿಷ್ಯವನ್ನು ಹಾಳು ಮಾಡಲು ಯತ್ನಿಸುತ್ತಿರುವ ಅರ್ಬನ್‌ ನಕ್ಸಲರಿಂದ ದೂರ ಇರುವಂತೆ ಎಚ್ಚರಿಕೆ ನೀಡುತ್ತೇವೆ. ಅವರೆಲ್ಲಾ ವಿದೇಶಿ ಏಜೆಂಟ್‌ಗಳು. ಗುಜರಾತ್‌ ಇಂತವರಿಗೆ ತಲೆ ಬಾಗಿ ಸೋಲೊಪ್ಪಿಕೊಳ್ಳುವುದಿಲ್ಲ, ಅವರನ್ನೇ ಗುಜರಾತ್‌ ಧ್ವಂಸ ಮಾಡುತ್ತದೆ," ಎಂದು ಮೋದಿ ಹೇಳಿದ್ದಾರೆ.

2014ರಲ್ಲಿ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ಭಾರತ ಜಾಗತಿಕ ಆರ್ಥಿಕ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿತ್ತು. ಈಗ ಇಗ್ಲೆಂಡ್‌ನಂತರ ಮುಂದುವರೆದ ದೇಶವನ್ನೂ ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದೆ ಎಂದು ಮೋದಿ ಇದೇ ಸಂದರ್ಭದಲ್ಲಿ ಹೇಳಿದರು. 

ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆ ದರ ಪರಿಷ್ಕರಿಸಿದ ವಿಶ್ವಬ್ಯಾಂಕ್, ಇತರ ರಾಷ್ಟ್ರಗಳಿಗಿಂತ ಅತ್ಯಧಿಕ ವೇಗದಲ್ಲಿ ಚೇತರಿಕೆ!

ಇಂದು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಕೂಡ ಗುಜರಾತಿನಲ್ಲಿ ಸಮಾವೇಶವೊಂದರಲ್ಲಿ ಭಾಗಿಯಾಗಿದ್ದಾರೆ. ಮೋದಿಯವರ ಪರೋಕ್ಷ ಹೇಳಿಕೆಗೆ ಅವರು ಯಾವ ರೀತಿ ಪ್ರತ್ಯುತ್ತರ ನೀಡುತ್ತಾರೆ ಎಂದು ಕಾದು ನೋಡಬೇಕಿದೆ. ಗುಜರಾತಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಇಷ್ಟು ವರ್ಷ ಪೈಪೋಟಿಯಿತ್ತು. ಆದರೆ ಈ ಬಾರಿ ಆಮ್‌ ಆದ್ಮಿ ಪಕ್ಷ ಕೂಡ ಯುವ ಸಮೂಹವನ್ನು ತನ್ನತ್ತ ಸೆಳೆದುಕೊಳ್ಳುವತ್ತ ದಾಪುಗಾಲಿಡುತ್ತಿದೆ. ಈಗಾಗಲೇ ಪಂಜಾಬಿನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಿ ಆಮ್‌ ಆದ್ಮಿ ಪಕ್ಷ ಅಧಿಕಾರ ಹಿಡಿದಿದೆ. ಮುಂಬರುವ ಗುಜರಾತ್‌ ಚುನಾವಣೆ, ಹಿಮಾಚಲ ಪ್ರದೇಶ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಆಮ್‌ ಆದ್ಮಿ ಪಕ್ಷ ಈ ಮೂಲಕ ರಾಷ್ಟ್ರೀಯ ಪಕ್ಷವಾಗಲು ಯತ್ನಿಸುತ್ತಿದೆ.  

click me!