
ಯಾದಗಿರಿ (ಏ.24): ಬೆಲೆಯೇರಿಕೆಯೇ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು. ಬಿಜೆಪಿ ಜನಾಕ್ರೋಶ ಯಾತ್ರೆಯ ಅಂಗವಾಗಿ, ಬುಧವಾರ ಯಾದಗಿರಿಯ ನೇತಾಜಿ ಸುಭಾಶ್ಚಂದ್ರ ಭೋಸ್ ವೃತ್ತದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಧಿಯಲ್ಲಿ ಬಡವರು ಪರದಾಡುತ್ತಿದ್ದಾರೆ. ಸಿದ್ದರಾಮಯ್ಯನವರು 5 ಗ್ಯಾರಂಟಿಗಳನ್ನು ಕೊಟ್ಟಿದ್ದು, 6ನೇ ಗ್ಯಾರಂಟಿಗೆ ಹೆಚ್ಚು ಪ್ರಚಾರ ಕೊಟ್ಟಿಲ್ಲ, ಅದುವೇ ಬೆಲೆಯೇರಿಕೆಯ ಗ್ಯಾರಂಟಿ ಎಂದು ಮಾತಿನಲ್ಲಿ ಕುಟುಕಿದರು.
ಅಗತ್ಯ ವಸ್ತುಗಳ ಬೆಲೆಯೇರಿಕೆ: ರಾಜ್ಯ ಕಾಂಗ್ರೆಸ್ ಸರ್ಕಾರ 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಸಿದ್ದರಿಂದ ಜನಸಾಮಾನ್ಯರು, ರೈತರು, ಬಡವರು ಜೀವನ ಸಾಗಿಸುವುದೇ ಕಷ್ಟವಾಗಿದೆ, ಪೆಟ್ರೋಲ್, ಸ್ಟ್ಯಾಂಪ್ ಡ್ಯೂಟಿ ದರ ಏರಿಸಿದ್ದಾರೆ ಎಂದು ಖಂಡಿಸಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರು ಜಮೀನಿಗೆ ವಿದ್ಯುತ್ ಸಂಪರ್ಕ ಪಡೆಯಲು 25 ಸಾವಿರ ರು.ಕಟ್ಟಿದರೆ ಸಾಕಿತ್ತು. ಆದರಿವತ್ತು, ಕಾಂಗ್ರೆಸ್ಸಿನ ಸಿದ್ದರಾಮಯ್ಯನವರ ಆಡಳಿತದಲ್ಲಿ 2.5 ಲಕ್ಷದಿಂದ 3 ಲಕ್ಷ ರು. ಕಟ್ಟಬೇಕಾಗಿದೆ, ಬಡವರು-ರೈತರ ಮೇಲೆ ಹೊರೆ ಆಗಿದೆ ಎಂದು ಟೀಕಿಸಿದರು.
ಕನ್ನಡಿಗರ ರಕ್ಷಣೆಗೆ ಹೊಸ ಪ್ರಾದೇಶಿಕ ಪಕ್ಷ ಕಟ್ಟುವೆ: ನಾರಾಯಣ ಗೌಡ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರವು 6 ಸಾವಿರ ರು. ಹಾಗೂ ಯಡಿಯೂರಪ್ಪ ಅವರು 4 ಸಾವಿರ ರು. ಕೊಡುತ್ತಿದ್ದರು. ಅದನ್ನೂ ಈ ಸರ್ಕಾರ ಈಗ ನಿಲ್ಲಿಸಿದೆ. ಗ್ರಾಮೀಣ ಭಾಗದಲ್ಲಿ ಬಡವರು ರಕ್ತಪರೀಕ್ಷೆ ಮಾಡಿಸಿಕೊಳ್ಳಲು 3ರಿಂದ 4 ಪಟ್ಟು ಹೆಚ್ಚು ದರ ಕೊಡಬೇಕಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಹಾಲಿನ ಮೇಲೆ 9 ರು. ಹೆಚ್ಚಿಸಿದ್ದಾರೆ ಎಂದು ವಿವರಿಸಿದರು. ಪೆಟ್ರೋಲ್ ಮೇಲೆ 3 ರು, ಡೀಸೆಲ್ ಮೇಲೆ 5.50 ರು. ಹೆಚ್ಚಿಸಿದ್ದಾರೆ ಎಂದು ದೂರಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಸಚಿವ ನರಸಿಂಹ ನಾಯಕ ರಾಜುಗೌಡ, ಶಾಸಕ ದೊಡ್ಡಣ್ಣಗೌಡ ಪಾಟೀಲ, ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಬಿ.ಜಿ. ಪಾಟೀಲ, ಶಶೀಲ್ ನಮೋಶಿ, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಶರಣು ತಳ್ಳಿಕೇರಿ, ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ, ರಾಚನಗೌಡ ಮುದ್ನಾಳ್, ಮಹೇಶ್ ರೆಡ್ಡಿ ಗೌಡ ಮುದ್ನಾಳ್, ನಾಗರತ್ನ ಕುಪ್ಪಿ, ಮಾಜಿ ಜಿಲ್ಲಾಧ್ಯಕ್ಷರಾದ ಅಮೀನ್ ರೆಡ್ಡಿ ಯಾಳಗಿ ಹಾಗೂ ಡಾ. ಶರಣಭೂಪಾಲರೆಡ್ಡಿ, ದೇವಿಂದ್ರನಾಥ ನಾದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಡಾ.ಚಂದ್ರಶೇಖರ್ ಸುಬೇದಾರ್ ಮುಂತಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
150 ಕನ್ನಡಿಗರನ್ನು ಹೊತ್ತ ವಿಮಾನ ಕಾಶ್ಮೀರದಿಂದ ಇಂದು ಬೆಂಗಳೂರಿಗೆ
ಸರ್ಕಾರದಿಂದ ಜಾತಿ ಜಾತಿಗಳ ಮಧ್ಯೆ ವಿಷಬೀಜ: ಅಭಿವೃದ್ಧಿ ಕೆಲಸ ಕಾರ್ಯ ಶೂನ್ಯವಾಗಿದೆ, ಸಮಾಜ-ಸಮಾಜಗಳ ನಡುವೆ ಈ ಸರ್ಕಾರ ವಿಷಬೀಜ ಬಿತ್ತುತ್ತಿದೆ. ಜಾತಿ-ಜಾತಿಗಳ ನಡುವೆ ಕಂದಕ ನಿರ್ಮಿಸುವ ಕಾರ್ಯವನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 2 ವರ್ಷವಾಗುತ್ತಿದ್ದು, ಅಭಿವೃದ್ಧಿ ಕಾರ್ಯಕ್ಕೆ ಯಾವುದೇ ಹಣ ನೀಡುತ್ತಿಲ್ಲ, ಬಿಜೆಪಿ ಸರಕಾರ ಇದ್ದಾಗ ಯಡಿಯೂರಪ್ಪ ಅವರು ಯಾದಗಿರಿ ಜಿಲ್ಲೆ ಘೋಷಿಸಿ ನೂರಾರು ಕೋಟಿ ರು.ಗಳ ಅಭಿವೃದ್ಧಿ ಮೊತ್ತ ನೀಡಿದ್ದಾರೆ ಎಂದು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.