
ಮೈಸೂರು (ಸೆ.13):'ಕೆಪಿಎಸ್‌ಸಿ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಪರಪ್ಪನ ಅಗ್ರಹಾರ ಜೈಲು ಸೇರುವ ಸ್ಥಿತಿಯಲ್ಲಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಅಕ್ರಮದ ಬಗ್ಗೆ ಮಾತನಾಡಿದಾಗಿನಿಂದ ಖರ್ಗೆ ಅವರಿಗೆ ಕನಸಿನಲ್ಲೂ ಪರಪ್ಪನ ಅಗ್ರಹಾರವೇ ಕಾಣುತ್ತಿದೆ' ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿರುವ ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ನೇರ ವಾಗ್ದಾಳಿ ನಡೆಸಿ ಆಕ್ರೋಶ ಹೊರಹಾಕಿದರು.
ತಮ್ಮ ಮೇಲಿನ ಎಫ್‌ಐಆರ್ ಹಾಗೂ ಜೈಲು ಬೆದರಿಕೆಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, 'ನನ್ನ ಮೇಲೆ ಈಗಾಗಲೇ 21 ಎಫ್‌ಐಆರ್‌ಗಳು (FIR) ಇವೆ. ಬೇಕಿದ್ದರೆ ಇನ್ನೊಂದು ಎಫ್‌ಐಆರ್ ದಾಖಲಿಸಲಿ, ನಾನು ಯಾವುದಕ್ಕೂ ಹೆದರುವ ವ್ಯಕ್ತಿಯಲ್ಲ. ಸಾರ್ವಜನಿಕ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದಕ್ಕಾಗಿ ನನ್ನನ್ನು ಜೈಲಿಗೆ ಕಳುಹಿಸಿದರೆ ನನಗೇನೂ ಬೇಸರವಿಲ್ಲ, ಅದಕ್ಕೆ ನಾನು ಸಿದ್ಧನಿದ್ದೇನೆ. ನನ್ನನ್ನು ಹೆದರಿಸುವ ಪ್ರಯತ್ನ ಯಾರಿಂದಲೂ ನಡೆಯಲ್ಲ' ಎಂದು ಗುಡುಗಿದರು.
ಕಾಂಗ್ರೆಸ್ ಸರ್ಕಾರದ ಹಿಂದಿನ ನಡೆಗಳನ್ನು ಪ್ರಸ್ತಾಪಿಸಿದ ಅವರು, 'ಪ್ರಿಯಾಂಕ್ ಖರ್ಗೆ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಿದೆ. ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿ ಪೊಲೀಸ್ ಠಾಣೆ ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದ ಗಲಭೆಕೋರರನ್ನು ಜೈಲಿನಿಂದ ಬಿಡಿಸಿಕೊಂಡು ಬಂದಿದ್ದು ಇದೇ ಕಾಂಗ್ರೆಸ್ಸಿಗರು. ಕಾಂಗ್ರೆಸ್‌ನ ಇತಿಹಾಸ ನನಗೆ ಚೆನ್ನಾಗಿ ಗೊತ್ತಿದೆ. ಖರ್ಗೆ ಅವರಲ್ಲಿ ಅಭದ್ರತೆ ಮತ್ತು ಪುಕ್ಕಲುತನ ಹೆಚ್ಚಾಗಿದೆ. ಆ ಕಾರಣಕ್ಕಾಗಿಯೇ ಅವರು ಎಲ್ಲರ ಬಗ್ಗೆಯೂ ಏಕವಚನದಲ್ಲಿ ಮಾತನಾಡುತ್ತಾರೆ' ಎಂದು ಕಿಡಿಕಾರಿದರು.
ಇದೇ ವೇಳೆ ಟಿ. ನರಸೀಪುರ ಪೊಲೀಸ್ ಠಾಣೆ ಮುಂಭಾಗ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಅವರು, 'ಸ್ಥಳೀಯ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ ಅವರು ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಹಿಂದು ಯುವಕರ ಮೇಲೆ ದರ್ಪ ತೋರಿ, ಧಮ್ಕಿ ಹಾಕುತ್ತಿದ್ದಾರೆ. ಸ್ಥಳೀಯ ಜನರಲ್ಲಿ ಸುಳ್ಳು ಕೇಸ್ ಹಾಕುವ ಭೀತಿ ಹುಟ್ಟಿಸಿದ್ದಾರೆ. ಇಂತಹ ಅಧಿಕಾರಿಯ ದರ್ಪವನ್ನು ಮುರಿಯಲು ಹಾಗೂ ಅವರನ್ನು ತರಾಟೆಗೆ ತೆಗೆದುಕೊಳ್ಳಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸ್ವತಃ ಟಿ. ನರಸೀಪುರಕ್ಕೆ ಆಗಮಿಸುತ್ತಿದ್ದಾರೆ' ಎಂದು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.