ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯರಿಗೆ ಎಸ್‌ಐಟಿಯವರು ಒತ್ತಡ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಪ್ರಕರಣದ ಕುರಿತು ಕೂಲಂಕುಶ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.
ಮಂಡ್ಯ (ಮೇ.11): ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯರಿಗೆ ಎಸ್‌ಐಟಿಯವರು ಒತ್ತಡ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಪ್ರಕರಣದ ಕುರಿತು ಕೂಲಂಕುಶ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್‌ಡ್ರೈವ್ ವಿಚಾರವಾಗಿ ಎಸ್‌ಐಟಿ ರಚನೆಯಾಗಿದೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದ್ಯಾ ಎಂಬ ಪ್ರಶ್ನೆ ಇದೆ. ಸಂತ್ರಸ್ತೆಯರ ಮೇಲೆ ಈ ರೀತಿ ಒತ್ತಡ ತರೋದು ಅಷ್ಟು ಸರಿಯಲ್ಲ. ಸರ್ಕಾರ ಎಲ್ಲವನ್ನು ಕೈಯಲ್ಲಿ ಇಟ್ಟುಕೊಂಡಿದೆ ಎಂದು ಎಸ್ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ವಿಡಿಯೋ ಮಾಡಿರೋದು ವಿಡಿಯೋ ಬಿಟ್ಟಿರೋದು ಎರಡು ತಪ್ಪು. ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಾದ ಸರ್ಕಾರದ ಅವರನ್ನು ಬೀದಿಗೆ ತಂದಿದೆ. ಪೆನ್‌ಡ್ರೈವ್ ಹಂಚಿರೋದು ಯಾರು ಎಂದು ಪತ್ತೆ ಹಚ್ಚಬೇಕು. ಮುಖ ಬ್ಲರ್ ಮಾಡದೇ ಪೆನ್‌ಡ್ರೈನ್ ಹಂಚಿರೋ ಪಾಪಿಗಳ ವಿರುದ್ಧವು ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಹೆಣ್ಣು ಮಕ್ಕಳ ವಿಡಿಯೋ ಬಿಟ್ಟಿರುವುದರಿಂದ ಅವರ ಮರ್ಯಾದೆ ಏನ್ ಆಗುತ್ತೆ. ಅವರ ಕುಟುಂಬದ ಗತಿ ಏನು. ಹೆಣ್ಣು ಮಕ್ಕಳ ಜೀವಕ್ಕೆ ಅಪಾಯ ಬಂದರೆ ಯಾರು ಜವಾಬ್ದಾರಿ. ಅವರಿಗೆ ರಕ್ಷಣೆ ಕೊಡಬೇಕಾಗಿರುವು ಸರ್ಕಾರದ ಜವಾಬ್ದಾರಿ ಎಂದರು.
ಈ ಪ್ರಕರಣವನ್ನು ಸಿಬಿಐಗೆ ಕೊಟ್ಟು ಕೂಲಂಕಷವಾಗಿ ತನಿಖೆ ಮಾಡಲಿ. ಸತ್ಯಾಸತ್ಯತೆ ಹೊರ ಬೀಳಲಿ. ಈ ಮುಜುಗರಕ್ಕೆ ಯಾರು ಕಾರಣ ಎಂಬ ತನಿಖೆ ಆಗಬೇಕು. ಉಪ್ಪು ತಿಂದವರು ನೀರು ಕುಡಿಯಬೇಕು ಎಂದರು. ಪ್ರಜ್ವಲ್ ನನ್ನ ಸಂಪರ್ಕದಲ್ಲಿ ಇಲ್ಲ. ಆರೋಪಗಳು ಬಂದಾಗ ನಾವು ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಈಗಾಗಲೇ ನಾವು ಸಭೆ ನಡೆಸಿದ್ದೇವೆ. ಪಕ್ಷದಿಂದ ಸಂಸದ ಪ್ರಜ್ವಲ್ ಅವರನ್ನು ಕುಮಾರಣ್ಣ ಮೊದಲ ದಿನವೇ ಅಮಾನತು ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಕೂಡ ತಪ್ಪು ಮಾಡಿದೆ, ಬದಲಾವಣೆ ಅಗತ್ಯ: ರಾಹುಲ್ ಗಾಂಧಿ
ಚಲುವರಾಯಸ್ವಾಮಿ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸುಮ್ಮನೆ ಅಪಪ್ರಚಾರ ಮಾಡುವುದು, ಆರೋಪ ಮಾಡುವುದು ಸೂಕ್ತ ಅಲ್ಲ. ಈ ಪ್ರಕರಣವನ್ನು ಸಿಬಿಐಗೆ ಕೊಟ್ಟು ಕೂಲಂಕಷವಾಗಿ ತನಿಖೆ ಮಾಡಿದರೆ ಆಗ ಸತ್ಯಸತ್ಯತೆ ಹೊರ ಬೀಳಲಿದೆ ಎಂದರು. ಈ ವೇಳೆ ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜೆಡಿಎಸ್ ಜಿಧ್ಯಕ್ಷ ಡಿ.ರಮೇಶ್ ಇತರರಿದ್ದರು.