ಶ್ರೀರಾಮ ಮಂದಿರ ಉದ್ಘಾಟನೆಯ ರಜೆ ವಿಚಾರ ರಾಜಕಾರಣ ಮಾಡುವ ದಾರಿದ್ರ್ಯದ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿಲ್ಲ, ಕಾಯಕದಲ್ಲೇ ಭಗವಂತನನ್ನು ನಾವು ಕಾಣುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ದಾವಣಗೆರೆ (ಜ.24): ಶ್ರೀರಾಮ ಮಂದಿರ ಉದ್ಘಾಟನೆಯ ರಜೆ ವಿಚಾರ ರಾಜಕಾರಣ ಮಾಡುವ ದಾರಿದ್ರ್ಯದ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿಲ್ಲ, ಕಾಯಕದಲ್ಲೇ ಭಗವಂತನನ್ನು ನಾವು ಕಾಣುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮಗೂ ಭಕ್ತಿ ಭಾವನೆ ಇದೆ. ಭಗವಂತ ಶ್ರೀರಾಮ ಎಲ್ಲಾ ಕಡೆಗೂ ಇದ್ದಾರೆ. ನಾವು ಕಾಯಕದಲ್ಲೇ ಭಗವಂತನನ್ನು ಕಾಣುತ್ತೇವೆ. ಶ್ರೀರಾಮ ಹೆಸರಿನಲ್ಲಿ, ರಜೆ ವಿಚಾರಕ್ಕೆ ರಾಜಕಾರಣ ಮಾಡುವಂತಹ ದಾರಿದ್ರ್ಯದ ಪರಿಸ್ಥಿತಿ ಕಾಂಗ್ರೆಸ್ಸಿಗೆ ಬಂದಿಲ್ಲ ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಟಾಪನೆ, ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಸೋಮವಾರ ರಜೆ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಯಕವೇ ಕೈಲಾಸವೆಂದು ಹೇಳಿದ್ದಾರೆ. ನಾನು ಖಂಡಿತವಾಗಿಯೂ ಶ್ರೀರಾಮನ ದರ್ಶನಕ್ಕೆ ಅಯೋಧ್ಯೆ ಗೆ ಹೋಗುತ್ತೇನೆ. ಶ್ರೀರಾಮನ ಫ್ಲೆಕ್ಸ್, ಬಂಟಿಂಗ್ಸ್ ತೆರವು ವಿಷಯದ ಬಗ್ಗೆ ಗೃಹ ಸಚಿವರನ್ನೇ ಕೇಳಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಕೆಲವೊಂದು ಸಮಯದಲ್ಲಿ ಅಚಾತುರ್ಯಗಳಾಗಿರುತ್ತವೆ. ಹಿರೇಮಗಳೂರು ಕಣ್ಣನ್‌ರಿಗೆ ನೋಟಿಸ್ ವಿಚಾರ ಗಮನಕ್ಕೆ ಬಂದ ತಕ್ಷಣವೇ ಅದನ್ನು ಬಗೆಹರಿಸುವ ಕೆಲಸ ಸಚಿವ ರಾಮಲಿಂಗಾ ರೆಡ್ಡಿ ಮಾಡಿದ್ದಾರೆ ಎಂದರು.
ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಅಂದ ಪ್ರಧಾನಿ ಮೋದಿ ವಿಫಲ: ಸಿದ್ದರಾಮಯ್ಯ ಲೇವಡಿ
ಸಂಘರ್ಷವಿಲ್ಲದೇ ಮಹಿಳೆ ಏನೂ ಸಾಧಿಸಲು ಸಾಧ್ಯವಿಲ್ಲ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದರೂ, ಸಂಘರ್ಷವಿಲ್ಲದೇ ಸುಲಭವಾಗಿ ಆಕೆ ಏನನ್ನೂ ಪಡೆಯಲು ಸಾಧ್ಯವಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಷಾದಿಸಿದರು. ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪಲ್ಲಿ ಮಂಗಳವಾರ ಆತ್ಮಿ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಸತ್ವ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಿಂದಿನ ದಿನಮಾನಗಳಿಗೆ ಹೋಲಿಸಿದರೆ ಮಹಿಳೆ ಇಂದು ಸಾಕಷ್ಟು ಸ್ವಾವಲಂಬಿಯಾಗಿದ್ದಾಳೆ. ಮಹಿಳೆಯರು ಮುಂದೆ ಬರಬೇಕು, ಮುಖ್ಯ ವಾಹಿನಿಗೆ ಬರಬೇಕೆಂದು ಹೇಳುತ್ತಾರೆ.
ಆರೆ, ಸಾಕಷ್ಟು ಶ್ರಮವಹಿಸಿ, ಮುಂದೆ ಬಂದರೂ ಹಿಂದೆ ತಳ್ಳುತ್ತಾರೆ. ಹಾಗಾಗಿ ಮಹಿಳೆಯರು ಆತ್ಮವಿಶ್ವಾಸದಿಂದ ಸರಿ ಸಮಾನವಾಗಿ ಸಾಧನೆ ಮಾಡಿ, ಸರಿ ಸಮಾನವಾಗಿ ನಿಲ್ಲುವ ಸಾಮರ್ಥ್ಯ ಪ್ರದರ್ಶಿಸಬೇಕು ಎಂದು ಕರೆ ನೀಡಿದರು. ಜಗತ್ತು ತಾಂತ್ರಿಕತೆಯಲ್ಲಿ ಸಾಕಷ್ಟು ಮುಂದಿದೆ. ಆದರೆ, ಮನುಷ್ಯತ್ವವನ್ನು ರೂಪಿಸಲು ತಾಂತ್ರಿಕತೆಯಿಂದ ಸಾಧ್ಯವಾಗದು. ಮನುಷ್ಯತ್ವದಿಂದ ಮನುಷ್ಯರಿಗಾಗಿ ಸೇವೆ ಮಾಡುವ ಇಲಾಖೆಯೆಂದರೆ ಅದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಇಲ್ಲಿ ಮಗು ಗರ್ಭಾವಸ್ಥೆಯಿಂದ ಜನನವಾಗಿ ಬೆಳೆದು,ಮರಣ ಹೊಂದುವವರೆಗೂ ಇಲಾಖೆ ಸೇವೆ ಮಾಡುತ್ತದೆ. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯಕ್ರಮದ ಜವಾಬ್ಧಾರಿಯೂ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.
ಶ್ರೀರಾಮನ ಬಗ್ಗೆ ಸಚಿವ ರಾಜಣ್ಣ ಹಗುರ ಹೇಳಿಕೆ ಸಲ್ಲದು: ಎಂ.ಪಿ.ರೇಣುಕಾಚಾರ್ಯ
ಸರ್ಕಾರದ ಐದೂ ಗ್ಯಾರಂಟಿಗಳಿಂದ ಮಹಿಳೆಯರು ಇಂದು ಸ್ವಾವಲಂಬಿಯಾಗಿ ಬದುಕಲು ಸಾಧ್ಯವಾಗುತ್ತಿದೆ. ಏಕೆಂದರೆ ಮನೆಯ ಖರ್ಚುವೆಚ್ಚಗಳು ಕಡಿಮೆಯಾಗಿದ್ದು, ಮನೆ ನಿರ್ವಹಣೆಯೂ ಸುಲಭವಾಗಿದೆ. ಗೃಹಲಕ್ಷ್ಮಿ ಯೋಜನೆ ಮೂಲಕ ಯಜಮಾನಿಗೆ ವರ್ಷಕ್ಕೆ 24 ಸಾವಿರ ರು. ಜೊತೆಗೆ ಉಚಿತ ಸಾರಿಗೆ ವ್ಯವಸ್ಥೆ, ಉಚಿತ ವಿದ್ಯುತ್, ಅನ್ನ ಭಾಗ್ಯ, ಪದವಿ, ಡಿಪ್ಲೋಮಾ ಮಕ್ಕಳಿದ್ದರೆ ಯುವ ನಿಧಿ ಸೌಲಭ್ಯ ಸಿಗಲಿದೆ. ಆರ್ಥಿಕವಾಗಿ ಮುಂದೆ ಬರಲು ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿವರಿಸಿದರು.