ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಘಟಾನುಘಟಿ ನಾಯಕರ ಎಂಟ್ರಿ..!

By Kannadaprabha NewsFirst Published Apr 20, 2024, 12:43 PM IST
Highlights

ಚುನಾವಣೆಗೆ ಒಂದು ವಾರವಷ್ಟೇ ಬಾಕಿ ಉಳಿದಿದ್ದು, ಮತದಾರರನ್ನು ಸೆಳೆಯಲು ಹಾಗೂ ಕಾರ್ಯಕರ್ತರಲ್ಲಿ ರಣೋತ್ಸಾಹ ಹೆಚ್ಚಿಸಲು ರಾಜಕೀಯ ನಾಯಕರು ಅಖಾಡಕ್ಕೆ ಇಳಿಯುತ್ತಿದ್ದಾರೆ. ಪ್ರಧಾನಿ ಮೋದಿಯವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಬೆಂಗಳೂರು ಉತ್ತರ, ಕೇಂದ್ರ, ದಕ್ಷಿಣ ಮತ್ತು ಗ್ರಾಮಾಂತರ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ರಾಮನಗರ(ಏ.20): ತೀವ್ರ ಜಿದ್ದಾಜಿದ್ದಿನಿಂದಾಗಿ ರಾಜ್ಯದ ಗಮನ ಸೆಳೆದಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಧೂಳೆಬ್ಬಿಸಲು ಬಿಜೆಪಿ ಮತ್ತು ಕಾಂಗ್ರೆಸ್ ನ ಘಟಾನುಘಟಿ ನಾಯಕರು ಎಂಟ್ರಿ ಕೊಡುತ್ತಿದ್ದಾರೆ.
ಚುನಾವಣೆಗೆ ಒಂದು ವಾರವಷ್ಟೇ ಬಾಕಿ ಉಳಿದಿದ್ದು, ಮತದಾರರನ್ನು ಸೆಳೆಯಲು ಹಾಗೂ ಕಾರ್ಯಕರ್ತರಲ್ಲಿ ರಣೋತ್ಸಾಹ ಹೆಚ್ಚಿಸಲು ರಾಜಕೀಯ ನಾಯಕರು ಅಖಾಡಕ್ಕೆ ಇಳಿಯುತ್ತಿದ್ದಾರೆ. ಪ್ರಧಾನಿ ಮೋದಿಯವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಬೆಂಗಳೂರು ಉತ್ತರ, ಕೇಂದ್ರ, ದಕ್ಷಿಣ ಮತ್ತು ಗ್ರಾಮಾಂತರ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಟಾಲಿವುಡ್ ನಟ ಪವನ್ ಕಲ್ಯಾಣ್ ಅವರು ಎನ್ ಡಿಎ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಪರ ಮತ ಬೇಟೆ ಮಾಡುವ ನಿರೀಕ್ಷೆ ಇದೆ. ಈಗಾಗಲೇ ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಚನ್ನಪಟ್ಟಣ, ಮಾಜಿ ಪ್ರಧಾನಿ ದೇವೇಗೌಡರವರು ಕನಕಪುರದಲ್ಲಿ ಪ್ರಚಾರ ನಡೆಸಿದ್ದಾರೆ.

ಬೆಂಗಳೂರು ಗ್ರಾಮಾಂತರದಲ್ಲಿ ಮತದಾರನ ಒಲವು ಯಾರ ಪರ ? ಗೆಲುವು ಯಾರಿಗೆ ?

ಇನ್ನು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸ್ಯಾಂಡಲ್ ವುಡ್ ನಟ ದರ್ಶನ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಿತರರು ಚುನಾವಣಾ ಪ್ರಚಾರ ನಡೆಸಲು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.

ಮತ ಪ್ರಚಾರದ ಬಹಿರಂಗ ಪ್ರಚಾರದ ಕೊನೆಯ ದಿನವಾದ ಏ.24ರಂದು ಉತ್ತರ ಪ್ರದೇಶದ ಸಿಎಂ ಯೋಗಿ ಅದಿತ್ಯನಾಥ್ ಆಗಮಿಸುವರು. ಎಲ್ಲ ಅಂದುಕೊಂಡಂತೆ ಆದರೆ, ಅಂದು ಜಿಲ್ಲಾ ಕೇಂದ್ರ ರಾಮನಗರದಲ್ಲಿ ಪ್ರಥಮ ಬಾರಿಗೆ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಪರ ಮತ ಪ್ರಚಾರಕ್ಕೆ ಇಳಿಯಲಿದ್ದಾರೆ. ಇದು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಲ್ಲಿ ಸಾಕಷ್ಟು ಚೈತನ್ಯ ತುಂಬಲಿದೆ. ಜತೆಗೆ, ಯೋಗಿ ಅದಿತ್ಯನಾಥ್ ಪ್ರಚಾರಕ್ಕು ಮುನ್ನಾ ತೆಲುಗು ನಟ ಹಾಗೂ ರಾಜಕೀಯ ನಾಯಕ ಪವನ್ ಕಲ್ಯಾಣ್ ಸಹ ಆಗಮಿಸುವ ನಿರೀಕ್ಷೆ ಎಂಬುದು ಬಿಜೆಪಿ ಬಲ್ಲ ಮೂಲಗಳು ತಿಳಿಸಿದೆ.

ಮೋದಿಯಿಂದ ದೇಶದ ಆರ್ಥಿಕತೆ ವಿನಾಶ: ಸಿಎಂ ಸಿದ್ದರಾಮಯ್ಯ

ನಟ ದರ್ಶನ್ ರಾಜರಾಜೇಶ್ವರಿ ನಗರದಲ್ಲಿ ಶನಿವಾರ ಡಿ.ಕೆ.ಸುರೇಶ್ ಪರ ಪ್ರಚಾರ ನಡೆಸುತ್ತಿದ್ದು, ಯಶವಂತಪುರ ಮಾರ್ಕೆಟ್ ನಿಂದ ಆರಂಭವಾಗಲಿರುವ ರೋಡ್ ಶೋ ಲಗ್ಗೆರೆ ಸರ್ಕಲ್‌ನಿಂದ ಕಾಳಿಕಾಂಬ ದೇವಸ್ಥಾನದ ಬಳಿ ಅಂತ್ಯಗೊಳ್ಳಲಿದೆ.

ಮುಂದಿನ ವಾರ ಮಲ್ಲಿಕಾರ್ಜುನ ಖರ್ಗೆ ಚನ್ನಪಟ್ಟಣ ಹಾಗೂ ಡಿ.ಕೆ.ಶಿವಕುಮಾರ್ ಮಾಗಡಿ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮತಯಾಚಿಸಲಿದ್ದಾರೆ. ಈಗಾಗಲೇ ಡಿ.ಕೆ.ಸುರೇಶ್ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹಮದ್ ಖಾನ್ ಸೇರಿದಂತೆ ಅನೇಕರು ಪ್ರಚಾರ ಮಾಡಿದ್ದಾರೆ.

click me!