‘ರಾಜ್ಯದ ಪೊಲೀಸ್ ಠಾಣೆಗಳು ಮಧ್ಯಸ್ಥಿಕೆ ಹಾಗೂ ರಾಜಿ ಸಂಧಾನ (ಸೆಟ್ಲ್‌ಮೆಂಟ್) ಕೇಂದ್ರಗಳಾಗಿ ಬದಲಾಗುತ್ತಿವೆ ಎಂಬ ಆರೋಪದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಲಾಗುವುದು. ಹಾಗೇನಾದರೂ ಇದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು (ಜೂ.22): ‘ರಾಜ್ಯದ ಪೊಲೀಸ್ ಠಾಣೆಗಳು ಮಧ್ಯಸ್ಥಿಕೆ ಹಾಗೂ ರಾಜಿ ಸಂಧಾನ (ಸೆಟ್ಲ್‌ಮೆಂಟ್) ಕೇಂದ್ರಗಳಾಗಿ ಬದಲಾಗುತ್ತಿವೆ ಎಂಬ ಆರೋಪದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಲಾಗುವುದು. ಹಾಗೇನಾದರೂ ಇದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಜಿಲ್ಲಾ ಮಟ್ಟದ ಸಭೆಯಲ್ಲಿ ಪೊಲೀಸರು ಖಾಸಗಿ ವಿಚಾರಗಳ ಮಧ್ಯಸ್ಥಿಕೆದಾರರಾಗಿ ವ್ಯವಹರಿಸುತ್ತಿದ್ದಾರೆ ಎಂದು ಮಾಡಿದ್ದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದರು.
ಪೊಲೀಸ್ ಠಾಣೆಗಳು ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ನೀತಿ ನಿಯಮಗಳಿವೆ. ಅದನ್ನು ಬಿಟ್ಟು ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘಿಸಿ ನಡೆದುಕೊಳ್ಳುವಂತಿಲ್ಲ. ಪ್ರಿಯಾಂಕ್ ಖರ್ಗೆ ಅವರು ಯಾವ ಠಾಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಿದ್ದಾರೆ ಎಂಬ ಬಗ್ಗೆ ಮಾಹಿತಿ ಕೇಳುತ್ತೇವೆ. ಒಂದು ವೇಳೆ ಅಂತಹ ನಿಯಮ ಉಲ್ಲಂಘನೆ ಆಗುತ್ತಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಜತೆಗೆ ನಾನೂ ಪ್ರವಾಸದ ವೇಳೆ ಸ್ಥಳೀಯ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಮರ್ಯಾದೆ ಇಲ್ಲದ ಬೇಜವಾಬ್ದಾರಿ ಸಿಎಂ: ಶೋಭಾ ಕರಂದ್ಲಾಜೆ
ಸರ್ವರ್ ಹ್ಯಾಕ್: ಕೇಂದ್ರ ಸರ್ಕಾರ ಸೇವಾ ಸಿಂಧು ಸರ್ವರ್ ಹ್ಯಾಕ್ ಮಾಡಲಾಗಿದೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮಾಹಿತಿ ಇಲ್ಲದಿದ್ದರೆ ಆ ರೀತಿ ಹೇಳಲು ಸಾಧ್ಯವಿಲ್ಲ. ಅವರಿಗೆ ಏನು ಮಾಹಿತಿ ಇದೆ ಎಂಬುದನ್ನು ತಿಳಿದುಕೊಳ್ಳಲಾಗುವುದು. ಅದನ್ನು ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
ಹೇಮಾವತಿ ನಾಲಾ ವಲಯಕ್ಕೆ ಪರಮೇಶ್ವರ್ ಭೇಟಿ: ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗಾಗಿ ಗುಬ್ಬಿ ತಾಲೂಕಿನ ಹೇಮಾವತಿ ನಾಲಾ ಹಾಗೂ ತುಮಕೂರು ತಾಲೂಕಿನ ಬುಗುಡನಹಳ್ಳಿ ಕೆರೆ ಶುದ್ಧೀಕರಣ ವ್ಯವಸ್ಥೆಯನ್ನು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುಬ್ಬಿ ತಾಲೂಕಿನ ಈಡಕನಹಳ್ಳಿ ಗ್ರಾಮದ ಬಳಿಯ ಹೇಮಾವತಿ ನಾಲೆಯ ಕಾಮಗಾರಿಯನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು. ಹೇಮಾವತಿ ಕಾರ್ಯನಿರ್ವಾಹಕ ಅಭಿಯಂತರಾದ ವರದಯ್ಯಗೆ ಕುಡಿಯುವ ನೀರು ಸರಬರಾಜು ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.
ಹೇಮಾವತಿ ಅಣೆಕಟ್ಟಿನಿಂದ ಜಿಲ್ಲೆಯ ಶಾಖಾ ಕಾಲುವೆ ಮುಖಾಂತರ ಬುಗುಡನಹಳ್ಳಿ ಕೆರೆಯಿಂದ ತುಮಕೂರು ನಗರಕ್ಕೆ 1.135 ಟಿಎಂಸಿ ಕುಡಿಯುವ ನೀರು ಹಂಚಿಕೆಯಾಗಿದ್ದು, ತುಮಕೂರು ಶಾಖಾ ನಾಲೆಯ ಸರಪಳಿ 123.475 ಕಿ.ಮೀ.ನಲ್ಲಿರುವ ಎಸ್ಕೇಪ್ ಹಳ್ಳದ ಮುಖಾಂತರ ತುಮಕೂರು ತಾಲೂಕಿನ ಬುಗುಡನಹಳ್ಳಿ ಕೆರೆಗೆ ನೀರನ್ನು ಹರಿಸಲಾಗುತ್ತದೆ. ಬುಗುಡನಹಳ್ಳಿ ಕೆರೆಯ ಪೂರ್ಣ ನೀರಿನ ಸಾಮರ್ಥ್ಯ 363.00 ಎಂಸಿಎಫ್‌ಟಿ ಹಾಗೂ ಗರಿಷ್ಠ ನೀರಿನ ಮಟ್ಟ793.60 ಮೀ.ಗಳಾಗಿದ್ದು, ಜನವರಿ 2023ರಲ್ಲಿ ತುಂಬಿಸಲಾಗಿದೆ.
‘ಸರ್ವರ್ ಹ್ಯಾಕ್’ ರಾಜಕೀಯ ಹೇಳಿಕೆ ಅಷ್ಟೆ: ಸಚಿವ ಸತೀಶ್ ಜಾರಕಿಹೊಳಿ
ನಂತರ ಸಚಿವರು ತುಮಕೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಬುಗುಡನಹಳ್ಳಿ ಕೆರೆ ಹಾಗೂ ಕುಡಿಯುವ ನೀರು ಶುದ್ಧೀಕರಣ ವ್ಯವಸ್ಥೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಚಿವರಿಗೆ ವಿವರಿಸಿದರು. ಜಿಲ್ಲಾಧಿಕಾರಿ ಕೆ. ಶ್ರೀನಿವಾಸ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಶಿವಪ್ಪ, ತಹಸೀಲ್ದಾರ್ ಆರತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಅಂಜಿನಪ್ಪ, ಪೊಲೀಸ್ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನ ಪ್ರತಿನಿಧಿಗಳು, ಮುಖಂಡರುಗಳು, ಇನ್ನಿತರರು ಹಾಜರಿದ್ದರು.