
ನವದೆಹಲಿ(ಮಾ.27): ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಟಿಎಂಸಿ ಗೂಂಡಾಗಳಿಂದ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದ ರೂಪಾ ಪತ್ರಾಗೆ ಬಿಜೆಪಿ ಬಾಸಿರ್‌ಹಾತ್ ಲೋಕಸಭೆ ಕ್ಷೇತ್ರದ ಚುನಾವಣಾ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರೂಪಾ ಜತೆ ಮಂಗಳವಾರ ದೂರವಾಣಿ ಕರೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ರೂಪಾ ಅವರನ್ನು ಶಕ್ತಿ ಸ್ವರೂಪಿಣಿ ಎಂದು ಬಣ್ಣಿಸಿದ್ದಾರೆ.
ಟಿಎಂಸಿ ನಾಯಕ ಶಜಹಾನ್ ಮತ್ತು ಆತನ ಬೆಂಬಲಿಗರ ಭೂಕಬಳಿಕೆ ಮತ್ತು ಲೈಂಗಿಕ ಕಿರುಕುಳ ಕುರಿತು ಸಿಡಿದೆದ್ದಿದ್ದ ರೂಪಾ ಪತ್ರಾ, ಸಂದೇಶ್‌ಖಾಲಿಯಲ್ಲಿ ದೊಡ್ಡ ಆಂದೋಲನ ರೂಪಿಸಿದ್ದರು. ಈ ಹೋರಾಟ ತೀವ್ರ ಸ್ವರೂಪ ಪಡೆದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಜೊತೆಗೆ ಶಜಹಾನ್ ಬಂಧನಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಸಂದೇಶ್‌ಖಾಲಿ ಒಳಗೊಂಡ ಬಸಿರ್‌ಹಾತ್ ಪ್ರದೇಶದ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಬಿಜೆಪಿ ಇತ್ತೀಚೆಗೆ ರೂಪಾಗೆ ನೀಡಿ ಅಚ್ಚರಿ ಮೂಡಿಸಿತ್ತು. ಅದರ ನಡುವೆಯೇ ಮಂಗಳವಾರ ರೂಪಾಗೆ ಕರೆ ಮಾಡಿದ್ದ ಪ್ರಧಾನಿ ಮೋದಿ, ಕ್ಷೇತ್ರದಲ್ಲಿ ಚುನಾವಣೆಯ ಸಿದ್ಧತೆ ಮತ್ತು ಜನರ ಮೂಡ್ ಕುರಿತು ರೂಪಾರನ್ನು ಪ್ರಶ್ನಿಸಿದರು. ಅಲ್ಲದೆ, ‘ನೀವು ಸಂದೇಶ್‌ಖಾಲಿಯಲ್ಲಿ ಯದ್ಧವನ್ನೇ ಮಾಡಿದ್ದೀರಿ, ನೀವು ಶಕ್ತಿ ಸ್ವರೂಪಿಣಿ’ ಎಂದು ಬಣ್ಣಿಸಿದರು. ‘ತೃಣಮೂಲ ಕಾಂಗ್ರೆಸ್ ಸರ್ಕಾರ ಏನು ಅನ್ಯಾಯಗಳನ್ನು ಮಾಡಿದೆ ಜನರಿಗೆ ತಿಳಿಸಿ’ ಎಂದೂ ರೂಪಾಗೆ ಸೂಚಿಸಿದರು.
ಇನ್ನೊಂದೆಡೆ ರೂಪಾ, ಸಂದೇಶ್‌ಖಾಲಿ ದ್ವೀಪದಲ್ಲಿ ಟಿಎಂಸಿ ಕಾರ್ಯಕರ್ತರಿಂದ ತಾವು ಅನುಭವಿಸಿದ ಸಂಕಷ್ಟಗಳನ್ನು ಪ್ರಧಾನಿ ಮೋದಿಗೆ ತಿಳಿಸಿದರು. ‘2011ರಿಂದ ತಾವು ಸಂದೇಶ್‌ಖಾಲಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ಕಾರಣ ಮತವನ್ನೇ ಹಾಕಿಲ್ಲ.. ಆದರೆ ಈ ಸಲ ಈ ವಿಷಯದಲ್ಲಿ ಬೆಂಬಲವಾಗಿ ನಿಂತಿದ್ದೀರಿ. ನಮ್ಮ ಪಾಲಿಗೆ ನೀವು ಶ್ರೀರಾಮ ಇದ್ದಂತೆ. ನಿಮಗೆ ಧನ್ಯವಾದ’ ಎಂದು ಮೋದಿಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಮೋದಿ, ‘ಈ ಸಲ ಪರಿಸ್ಥಿತಿ ಹಾಗಿಲ್ಲ. ಚುನಾವಣಾ ಆಯೋಗ ಮತದಾನಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಲಿದೆ. ಧೈರ್ಯವಾಗಿ ಮತ ಹಾಕಿ’ ಎಂದರು.
ಕೆಲ ದಿನಗಳ ಹಿಂದೆ ಮುಂಬೈನಲ್ಲಿ ನಡೆದ ಭಾರತ್ ಜೋಡೋ ನ್ಯಾಯ ಯಾತ್ರೆಯ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಹಿಂದೂ ಧರ್ಮದಲ್ಲಿ ಬರುವ ಶಕ್ತಿಯ ವಿರುದ್ಧ ತಮ್ಮ ಹೋರಾಟ ಎಂದಿದ್ದರು. ಅದಾದ ಬಳಿಕ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಸತತವಾಗಿ ಶಕ್ತಿ ಅಸ್ತ್ರ ಬಳಸಿ ರಾಹುಲ್ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದರ ಬೆನ್ನಲ್ಲೇ ಇದೀಗ ಮತ್ತೆ ಮೋದಿ ರೂಪಾ ಪಾತ್ರಾರನ್ನು ಶಕ್ತಿ ಸ್ವರೂಪಿ ಎಂದು ಬಣ್ಣಿಸುವ ಮೂಲಕ ಮತ್ತೊಮ್ಮೆ ರಾಹುಲ್‌ಗೆ ಟಾಂಗ್ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.