
ಬೆಂಗಳೂರು[ಡಿ.17]: ಭಾರತ್ ಬಚಾವೋ ಆಂದೋಲನದಲ್ಲಿ ಜನರ ಪ್ರತಿಕ್ರಿಯೆ ನೋಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹತಾಶೆಗೊಂಡಿದ್ದಾರೆ. ಹೀಗಾಗಿಯೇ ಅನಗತ್ಯವಾಗಿ ಕಾಂಗ್ರೆಸ್ ಬೆಂಕಿ ಹಚ್ಚುತ್ತಿದೆ ಎಂದು ಆರೋಪ ಮಾಡಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ಗಲಭೆ ಸೃಷ್ಟಿಸಿ, ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಮಾಹಿತಿ ಇದ್ದರೆ ದೇಶದ ಪ್ರಧಾನಮಂತ್ರಿಗಳಾಗಿ ಕ್ರಮ ಕೈಗೊಳ್ಳಿ. ಸುಮ್ಮನೆ ಸುಳ್ಳು ಹೇಳಿಕೆಗಳ ಮೂಲಕ ಕಾಂಗ್ರೆಸ್ ತೇಜೋವಧೆಗೆ ಪ್ರಯತ್ನಿಸಬೇಡಿ. ಸಂವಿಧಾನದ ಅರಿವು ನಿಮಗಿದ್ದರೆ ಈ ರೀತಿ ನಡೆದುಕೊಳ್ಳುತ್ತಿರಲಿಲ್ಲ. ಜನರ ದಾರಿ ತಪ್ಪಿಸುವ ನಿಮ್ಮ ಹೇಳಿಕೆಗಾಗಿ ದೇಶದ ಜನರ ಕ್ಷಮೆ ಯಾಚಿಸಿ ಎಂದು ಒತ್ತಾಯಿಸಿದರು.
ಸಮಾಜದಲ್ಲಿ ಗಲಭೆ ಸೃಷ್ಟಿಸುವ ಹಾಗೂ ಬೆಂಕಿ ಹಚ್ಚುವ ಕೆಲಸ ಯಾರು ಮಾಡುತ್ತಾರೆಂಬುದು ಎಲ್ಲರಿಗೂ ಗೊತ್ತಿದೆ. ಮಂಡಲ್ ವರದಿ, ಬಾಬ್ರಿ ಮಸೀದಿ, ಗೋಧ್ರಾ ಹತ್ಯಾಕಾಂಡ ವಿಚಾರದಲ್ಲಿ ಬೆಂಕಿ ಹಚ್ಚಿದ್ದು ಯಾರು ಎಂದು ಪ್ರಶ್ನಿಸಿದರು.
ಬಿಜೆಪಿಯಂತಹ ಉಡಾಫೆ ಪಕ್ಷ ನಮ್ಮದಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬುದ್ಧಿ ಭ್ರಮಣೆ ಆಗಿದೆ. ಬಿಜೆಪಿಯವರು ಭ್ರಮಾಲೋಕ, ಹತಾಶೆಯ ಭಾವನೆಯಲ್ಲಿದ್ದಾರೆ. ಕಾಂಗ್ರೆಸ್‌ಮುಕ್ತ ಹೆಸರಿನಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಒರಿಸ್ಸಾ, ದೆಹಲಿ, ಜಮ್ಮು-ಕಾಶ್ಮೀರ ಸೇರಿದಂತೆ ಅನೇಕ ಕಡೆ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ದೇಶದಲ್ಲಿ ಆಗುತ್ತಿರುವ ಬೆಂಕಿ ಹಚ್ಚುವ ಕೆಲಸಗಳಿಗೆ ಕೇಂದ್ರ ಸರ್ಕಾರವೇ ಕಾರಣ. ಗಲಾಟೆಗಳು ಆಗಲಿ ಎಂದು ನಾವು ಯಾವತ್ತೂ ಬಯಸುವುದಿಲ್ಲ. ಹೀಗಾಗಿ ನಮ್ಮ ನಾಯಕರ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಡಬೇಕು ಎಂದರು.
ನೆರೆ ಸಂತ್ರಸ್ತರ ಪರಿಹಾರ ಎಲ್ಲಿ: ಉಗ್ರಪ್ಪ
ರಾಜ್ಯ ಸರ್ಕಾರವು ನೆರೆ ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸಲು ಆಗಿಲ್ಲ. 1 ಲಕ್ಷ ಕೋಟಿ ರು. ಹಾನಿಯಾಗಿದ್ದರೆ ಈವರೆಗೂ ಸೂಕ್ತ ಪರಿಹಾರ ನೀಡಿಲ್ಲ. ಅನೈತಿಕವಾಗಿ ಉಪ ಚುನಾವಣೆ ಗೆದ್ದ ಯಡಿಯೂರಪ್ಪ ಅವರಿಗೆ ನೆರೆ ಸಂತ್ರಸ್ತರ ಕಷ್ಟಕಾಣುತ್ತಿಲ್ಲವೇ? ಇದೇನಾ ನಿಮ್ಮ ಜನಪರ ಕೆಲಸ ಎಂದು ವಿ.ಎಸ್. ಉಗ್ರಪ್ಪ ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.