ದೇವೇಗೌಡರು ನನಗೂ ಮೋದಿಗೂ ಅವಿನಾಭಾವ ಸಂಬಂಧ ಇದೆ. ಎನ್‌ಡಿಎ ಅಧಿಕಾರಕ್ಕೆ ಬಂದರೆ ಮೇಕೆದಾಟು ಅಣೆಕಟ್ಟು ಕಟ್ಟುತ್ತೇವೆ. ಕುಡಿಯುವ ನೀರು ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. ಮಿಸ್ಟರ್ ದೇವೇಗೌಡರೇ ಮೋದಿ ಅವರೊಂದಿಗೆ ಅವಿನಾಭಾವ ಸಂಬಂಧ ಇದೆಯಲ್ಲ, ಈಗಲೇ ಮೇಕೆದಾಟು ಯೋಜನೆಗೆ ಅನುಮೋದನೆ ಕೊಡಿಸಿ, ಬೇಡ ಅಂದವರು ಯಾರು, ಎನ್‌ಡಿಎ ಬರುವರೆಗೆ ಏಕೆ ಕಾಯಬೇಕು. ಈಗಲೇ ಏಕೆ ಮಾಡಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಮನಗರ(ಮಾ.29): ಈಗ ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಗಳಸ್ಯ ಕಂಠಸ್ಯ. ಮೋದಿ ಸುಳ್ಳುಗಾರ, ದೇವೇಗೌಡರು ಇನ್ನೊಬ್ಬ ಸುಳ್ಳುಗಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೇಕೆದಾಟು ಅಣೆಕಟ್ಟೆ ನಿರ್ಮಾಣ ವಿಚಾರದಲ್ಲಿಯೂ ಬಿಜೆಪಿ - ಜೆಡಿಎಸ್‌ನವರು ಸುಳ್ಳು ಹೇಳುತ್ತಿದ್ದಾರೆ. ಅವರು ಯಾವತ್ತು ನುಡಿದಂತೆ ನಡೆದಿಲ್ಲ. ಅವರ ಮಾತುಗಳನ್ನು ನಂಬಿದರೆ ಮೋಸ ಹೋಗುತ್ತೇವೆ ಎಂದರು.
ದೇವೇಗೌಡರು ನನಗೂ ಮೋದಿಗೂ ಅವಿನಾಭಾವ ಸಂಬಂಧ ಇದೆ. ಎನ್‌ಡಿಎ ಅಧಿಕಾರಕ್ಕೆ ಬಂದರೆ ಮೇಕೆದಾಟು ಅಣೆಕಟ್ಟು ಕಟ್ಟುತ್ತೇವೆ. ಕುಡಿಯುವ ನೀರು ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. ಮಿಸ್ಟರ್ ದೇವೇಗೌಡರೇ ಮೋದಿ ಅವರೊಂದಿಗೆ ಅವಿನಾಭಾವ ಸಂಬಂಧ ಇದೆಯಲ್ಲ, ಈಗಲೇ ಮೇಕೆದಾಟು ಯೋಜನೆಗೆ ಅನುಮೋದನೆ ಕೊಡಿಸಿ, ಬೇಡ ಅಂದವರು ಯಾರು, ಎನ್‌ಡಿಎ ಬರುವರೆಗೆ ಏಕೆ ಕಾಯಬೇಕು. ಈಗಲೇ ಏಕೆ ಮಾಡಲ್ಲ ಎಂದು ಪ್ರಶ್ನಿಸಿದರು.
ಎಚ್.ಡಿ.ಕುಮಾರಸ್ವಾಮಿಗೆ ಲೋಕಸಭಾ ಚುನಾವಣೆ ಹೊಸದಲ್ಲ: 6ನೇ ಸಲ ಸ್ಫರ್ಧೆ
ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿಯಾಗಿದ್ದರು. ಅವರ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಸೊಸೆ ಅನಿತಾ ಶಾಸಕರಾಗಿದ್ದರು. ಪುತ್ರ ರೇವಣ್ಣ ಸಚಿವರಾಗಿದ್ದರು, ಮೊಮ್ಮಗ ಪ್ರಜ್ವಲ್ ಸಂಸದರಾಗಿದ್ದರು. ಆಗಲೇ ಮೇಕೆದಾಟು ಯೋಜನೆ ಏಕೆ ಮಾಡಿಸಲಿಲ್ಲ. ಈಗ ಎನ್‌ಡಿಎ ಅಧಿಕಾರಕ್ಕೆ ಬಂದರೆ ಮಾಡಿಸುತ್ತಾರಂತೆ. ಕಾವೇರಿ ಜಲಾನಯನ ಪ್ರದೇಶಕ್ಕೆ ದೇವೇಗೌಡರ ಕುಟುಂಬದ ಕೊಡುಗೆ ಶೂನ್ಯ ಎಂದು ಸಿದ್ದರಾಮಯ್ಯ ಟೀಕಿಸಿದರು.
ಕುಮಾರಸ್ವಾಮಿಯವರು ರಾಮನಗರ ತವರು ಜಿಲ್ಲೆ, ರಾಜಕೀಯವಾಗಿ ಜೀವದಾನ ಕೊಟ್ಟ ಜಿಲ್ಲೆ ಅನ್ನುತ್ತಿದ್ದರು. ಈಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮಂಡ್ಯಕ್ಕೆ ಹೋಗುತ್ತಿದ್ದಾರೆ. ಮುಖ್ಯಮಂತ್ರಿ ಆಗಿದ್ದಾಗಲೆ ಪುತ್ರನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ರಾಮನಗರ ಕ್ಷೇತ್ರದಲ್ಲಿಯೂ ಸೋತರು. ಮಂಡ್ಯ ಜನರು ಏಕೆ ಮತ ಹಾಕುತ್ತಾರೆ. ಅಲ್ಲಿ ಏನಾದರು ಅಭಿವೃದ್ಧಿ ಮಾಡಿದ್ದರೆ ತಾನೇ ಮತ ಹಾಕುವುದು. ಕುಮಾರಸ್ವಾಮಿ ಮಂಡ್ಯದಲ್ಲಿ ನೂರಕ್ಕೆ ನೂರರಷ್ಟು ಸೋಲುವುದು ಗ್ಯಾರಂಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.