
ನವದೆಹಲಿ (ಫೆ. 19): ಗಾಂಧಿಗಳ ಜೊತೆ ಯಾರೇ ಸಂಬಂಧ ಕೆಡಿಸಿಕೊಳ್ಳಲಿ ಅವರನ್ನು ಮೋದಿ ಜನ್ಮ ಜನ್ಮಾಂತರದ ಮಿತ್ರರಂತೆ ಅಪ್ಪಿಕೊಳ್ಳುತ್ತಾರೆ. ಅದು ನರಸಿಂಹರಾವ್‌ರಿಂದ ಹಿಡಿದು ಪ್ರಣಬ್ ದಾ ಇರಲಿ ಅಥವಾ ಜ್ಯೋತಿರಾದಿತ್ಯರಿಂದ ಹಿಡಿದು ಗುಲಾಂ ನಬಿ ಇರಲಿ, ಮೋದಿ ಚೆನ್ನಾಗಿ ಹೊಗಳುತ್ತಾರೆ.
ಶತ್ರು ರಾಜನನ್ನು ಬೈದು ವೃದ್ಧ ಮಂತ್ರಿಗಳ ಗುಣಗಾನ ಮಾಡುವುದು ರಾಜನೀತಿಯ ಭಾಗವೇ ಅಲ್ಲವೇ? ರಾಜಕೀಯ ಏನೇ ಇರಲಿ, ರಾಜ್ಯಸಭೆಯ ಮೋದಿ-ಆಜಾದ್ ಕಣ್ಣೀರಿನ ದೃಶ್ಯಗಳು ಪ್ರಜಾಪ್ರಭುತ್ವದ ಸೌಂದರ್ಯದ ದೃಶ್ಯಗಳು. ತುಂಬಾ ಹಿಂದೆ ಲೋಕಸಭೆಯಲ್ಲಿ ನರಸಿಂಹರಾವ್‌ರನ್ನು ಬಾಯ್ತುಂಬಾ ಟೀಕಿಸುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಸಂಜೆ ಪ್ರಧಾನಿಯ ಮನೆಗೆ ಹೋಗಿ ಚಹಾ ಕುಡಿದು ಬರುತ್ತಿದ್ದರು.
ಭೈರವ ಸಿಂಗ್ ಶೇಖಾವತ್ ಯಾರನ್ನಾದರೂ ಬೈದರೆ ಸಂಜೆ ಮನೆಗೆ ಕರೆದು ಊಟ ಮಾಡಿಸಿ ಕುರ್ತಾ ಕೊಟ್ಟು ಕಳುಹಿಸುತ್ತಿದ್ದರು. ಅಷ್ಟೇ ಏಕೆ, ತೀರಾ ಇತ್ತೀಚೆಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಗುಲಾಂ ನಬಿ ಬಂದಾಗ ಅರುಣ್ ಜೇಟ್ಲಿ ತನ್ನ ಕಚೇರಿಯ ಆರಾಮ್ ಕುರ್ಚಿ, ಸೋಫಾ ಟೇಬಲ್‌ಗಳನ್ನು ನೀವು ಬಳಸಿ ಎಂದು ಹೇಳಿ ಬಂದಿದ್ದರು. ಧಾರಾಳಿತನ ಯಾವತ್ತೂ ರಾಜನಾದವನಿಗೆ ಭೂಷಣ.
ಬಿಜೆಪಿಗೆ ಈಗ ಬೇಡ ‘ಬೇಡಿ’
ಕಿರಣ್ ಬೇಡಿ ಅತ್ಯಂತ ಪ್ರಾಮಾಣಿಕ ಮಹಿಳೆ. ಆದರೆ ಮಾತು ಮತ್ತು ನಡುವಳಿಕೆಯಲ್ಲಿ ಅತಿರೇಕದ್ದೇ ಸಮಸ್ಯೆ. ಎಲ್ಲಿಯವರೆಗೆ ಪುದುಚೇರಿಯಲ್ಲಿ ನಾರಾಯಣ ಸ್ವಾಮಿಯನ್ನು ಅವರು ಗೋಳು ಹೊಯ್ದುಕೊಳ್ಳುತ್ತಿದ್ದರೋ ಅಲ್ಲಿಯವರೆಗೆ ಬಿಜೆಪಿ ಸುಮ್ಮನಿತ್ತು. ಆದರೆ ಈಗ ಅಲ್ಲಿ ಚುನಾವಣೆ ಬರುತ್ತಿದೆ. ಉತ್ತರ ಭಾರತೀಯ ಕಿರಣ್ ಬೇಡಿ ಬಗ್ಗೆ ಆಕ್ರೋಶವಿದೆ. ಇದು ಗೊತ್ತಾಗಿ ಬಿಜೆಪಿ ದಿಲ್ಲಿ ನಾಯಕರು ಸೂಚ್ಯವಾಗಿ ರಾಜೀನಾಮೆ ಕೊಟ್ಟು ಬನ್ನಿ ಎಂದಿದ್ದಾರೆ. ಬೇಡಿ ಹಟ ಮಾಡುತ್ತಾ ಕುಳಿತಾಗ ವಜಾಗೊಳಿಸಿದ್ದಾರೆ. ದೇಶದ ಪ್ರತಿಯೊಬ್ಬ ಯುವತಿಯ ಪ್ರೇರಣೆ ಆಗಿದ್ದ ಕಿರಣ್ ಬೇಡಿಗೆ ಕೊನೆಗೆ ಹೀಗಾಗಬಾರದಿತ್ತು. ಆದರೆ ಇದು ಸ್ವಯಂಕೃತ ಅಪರಾಧ.
ರಾಘವೇಂದ್ರ ಸರ್ವಂ ಮಯಂ
2013ರ ವರೆಗೆ ದಿಗ್ವಿಜಯ್ ಸಿಂಗ್, ಗುಲಾಂ ನಬಿ, ಅಹ್ಮದ್ ಪಟೇಲ್ ಅವರ ಜೊತೆಗೆ ಕಾಣಿಸಿಕೊಳ್ಳುತ್ತಿದ್ದ ರಾಘವೇಂದ್ರ ಸರ್ವಂ, 2014ರಲ್ಲಿ ಧಿಡೀರನೆ ಬಿಜೆಪಿಯಲ್ಲಿ ಪ್ರತ್ಯಕ್ಷರಾಗಿ ನಾನು ಸಂಘ ಪರಿವಾರದ ನಾಯಕರೊಂದಿಗೆ ಆತ್ಮೀಯ ಎಂದು ಹೇಳಿಕೊಳ್ಳತೊಡಗಿದ್ದರು. ಆದರೆ ಈಗ ವಿಶ್ವ ಹಿಂದೂ ಪರಿಷತ್ತಿನ ಪ್ರಚಾರಕರೇ ಸರ್ವಂ ವಿರುದ್ಧ ದೂರು ನೀಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸಿಗರ ಜೊತೆ ಇದ್ದ ರಾಘವೇಂದ್ರ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರೀಯ ನಿಗಮ ಮಂಡಳಿಗೆ ನೇಮಕಗೊಂಡ ರಾಜ್ಯದ ಮೊದಲಿಗರಾಗಿದ್ದರು.
ಹೀಗೆ ರಾಜ್ಯದಿಂದ ಒಬ್ಬರು ಕೇಂದ್ರ ನಿಗಮಕ್ಕೆ ನೇಮಕವಾಗಲು ರಾಜ್ಯ ಬಿಜೆಪಿ ಅಧ್ಯಕ್ಷರ ಪತ್ರ ಕಡ್ಡಾಯವಿದ್ದರೂ ಆಗ ಅಧ್ಯಕ್ಷರಾಗಿದ್ದ ಪ್ರಹ್ಲಾದ್ ಜೋಶಿಗೆ ಪರಿಚಯವೇ ಇಲ್ಲದೆ ರಾಘವೇಂದ್ರ ಸರ್ವಂ ದಿಲ್ಲಿಯಲ್ಲಿ ನೇಮಕ ಮಾಡಿಸಿಕೊಂಡಿದ್ದರು. ಅಮಿತ್ ಶಾ ಮಗ ಜಯ್ ಶಾ ಮದುವೆಯಲ್ಲಿ ರಾಘವೇಂದ್ರ ಸರ್ವಂ ಓಡಾಡುತ್ತಿದ್ದ ಪರಿ ನೋಡಿ ಹೌಹಾರಿದ್ದ ಅನಂತಕುಮಾರ್, ‘ಯಾರೀತ’ ಎಂದು ಪತ್ರಕರ್ತರ ಎದುರೇ ಪ್ರಹ್ಲಾದ್ ಜೋಶಿಗೆ ಕೇಳಿದ್ದರು. ಅಧಿಕಾರವಿದ್ದಲ್ಲಿ ಜನರಿರುತ್ತಾರೆ ನೋಡಿ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.