ರಾಜ್ಯ ಸರ್ಕಾರದಿಂದ ಶಾಶ್ವತ ದೃಷ್ಟಿ ಗ್ಯಾರಂಟಿ ಯೋಜನೆ: ಡಿ.ಕೆ.ಶಿವಕುಮಾರ್‌

Kannadaprabha News   | Kannada Prabha
Published : Jul 04, 2025, 11:20 AM IST
Karnataka Deputy Chief Minister DK Shivakumar (File photo/ANI)

ಸಾರಾಂಶ

ಅಂಧತ್ವ ಮುಕ್ತ ಕರ್ನಾಟಕ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದ ಆಶಾಕಿರಣ ಯೋಜನೆಯಡಿ ರಾಜ್ಯಾದ್ಯಂತ 393 ಶಾಶ್ವತ ದೃಷ್ಟಿ ಕೇಂದ್ರಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದ್ದಾರೆ.

ಬೆಂಗಳೂರು (ಜು.04): ಅಂಧತ್ವ ಮುಕ್ತ ಕರ್ನಾಟಕ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದ ಆಶಾಕಿರಣ ಯೋಜನೆಯಡಿ ರಾಜ್ಯಾದ್ಯಂತ 393 ಶಾಶ್ವತ ದೃಷ್ಟಿ ಕೇಂದ್ರಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದ್ದಾರೆ. ನಗರದ ಗೋವಿಂದರಾಜ ನಗರ ಕ್ಷೇತ್ರದ ಬಿಬಿಎಂಪಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗುರುವಾರ ದೃಷ್ಟಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ದೃಷ್ಟಿ ಸಮಸ್ಯೆಗೆ ಒಳಗಾಗುವವರಿಗೆ ಚಿಕಿತ್ಸೆ ನೀಡುವ ‘ದೃಷ್ಟಿ ಗ್ಯಾರಂಟಿʼಯನ್ನು ಆಶಾಕಿರಣ ಯೋಜನೆ ಮೂಲಕ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ರಾಜ್ಯದಾದ್ಯಂತ 393 ಕಡೆ ಆಶಾಕಿರಣ ದೃಷ್ಟಿ ಕೇಂದ್ರಗಳ ಉದ್ಘಾಟನೆಯಾಗುತ್ತಿದೆ. ಉಚಿತವಾಗಿ ಕನ್ನಡಕ ನೀಡಲಾಗುತ್ತಿದೆ. ಜನರಿಗೆ ಇದರಿಂದ ಕನ್ನಡಕ ಸೇರಿದಂತೆ ಚಿಕಿತ್ಸೆಯ ಸಾವಿರಾರು ರುಪಾಯಿ ಉಳಿಯಲಿದೆ ಎಂದು ತಿಳಿಸಿದರು.

ಕೊರೋನಾ ಬಳಿಕ ದೇಶ, ರಾಜ್ಯದಲ್ಲಿ ವಿಚಾರವೊಂದು ಎಲ್ಲೆಡೆ ಆತಂಕ ಸೃಷ್ಟಿಸಿದೆ. ಈ ವಿಚಾರವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ʼಯಶಸ್ವಿನಿʼ ಯೋಜನೆ ಮೂಲಕ ರೈತರ, ಬಡವರ ಆರೋಗ್ಯ ಕಾಳಜಿಗೆ ಮುನ್ನುಡಿ ಬರೆದಿದ್ದು ನಮ್ಮ ಸರ್ಕಾರ. ಇದನ್ನು ನೋಡಿದ ಕೇಂದ್ರ ಸರ್ಕಾರ ಆರೋಗ್ಯ ಯೋಜನೆಗಳನ್ನು ಆರಂಭ ಮಾಡಿತು. ಪ್ರಸ್ತುತ 7 ಕೋಟಿ ಜನಸಂಖ್ಯೆ ಇರುವ ರಾಜ್ಯದಲ್ಲಿ 2421 ಪಿಎಚ್‌ಸಿ ಕೆಲಸ ಮಾಡುತ್ತಿವೆ. 70ಕ್ಕೂ ಹೆಚ್ಚು ಮೆಡಿಕಲ್‌ ಕಾಲೇಜು ರಾಜ್ಯದಲ್ಲಿವೆ. ರಾಜ್ಯದಲ್ಲಿ ತಯಾರಾಗುವ ವೈದ್ಯರೂ ವಿದೇಶಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಆಶಾಕಿರಣ ಯೋಜನೆ ಮರುವಿನ್ಯಾಸಗೊಳಿಸಿದ್ದು, ನಿರಂತರವಾಗಿ ಕಣ್ಣಿನ ಆರೋಗ್ಯ ಸೇವೆ ಒದಗಿಸಲು 393 ಶಾಶ್ವತ ಆಶಾಕಿರಣ ದೃಷ್ಟಿ ಕೇಂದ್ರ ತೆರೆಯಲಾಗಿದೆ. ಮುಂದೆ ಈ ಸಂಖ್ಯೆ ಹೆಚ್ಚಿಸಲಾಗುವುದು. ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಸೇರಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದೃಷ್ಟಿ ಕೇಂದ್ರ ತೆರೆಯಲಾಗಿದೆ. ದೃಷ್ಟಿದೋಷ ಹೊಂದಿದವರು ತಪಾಸಣೆ ಮಾಡಿಸಿಕೊಂಡು, ಉಚಿತವಾಗಿ ಕನ್ನಡಕ ಪಡೆಯಬಹುದು. ಅಲ್ಲದೇ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಉಚಿತವಾಗಿ ಕಲ್ಪಿಸಲಾಗುತ್ತಿದೆ ಎಂದರು.

ಆಶಾಕಿರಣ ಒಂದು ಮಾದರಿ ಯೋಜನೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಶ್ಲಾಘಿಸಿದೆ. ಯೋಜನೆಯನ್ನು ಅಧ್ಯಯನ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಕರ್ನಾಟಕಕ್ಕೆ ತಂಡ ಕಳಿಸುತ್ತಿರುವುದು ಹೆಮ್ಮೆಯ ಸಂಗತಿ. ಕರ್ನಾಟಕವನ್ನು ಅಂಧತ್ವ, ದೃಷ್ಟಿದೋಷ ಮುಕ್ತ ರಾಜ್ಯವಾಗಿಸಲು ಈ ಹೆಜ್ಜೆ ಇಡಲಾಗಿದೆ ಎಂದು ಹೇಳಿದರು. ಆಶಾಕಿರಣ ಕಾರ್ಯಕ್ರಮದ ಎರಡು ಹಂತಗಳಲ್ಲಿ 8 ಜಿಲ್ಲೆಗಳಲ್ಲಿ ಒಟ್ಟು 1.40 ಕೋಟಿ ಜನ ಪ್ರಾಥಮಿಕ ನೇತ್ರ ತಪಾಸಣೆ ಒಳಗಾಗಿದ್ದಾರೆ. ಇವರಲ್ಲಿ 24.50 ಲಕ್ಷ ಜನರಿಗೆ ಹೆಚ್ಚಿನ ನೇತ್ರ ತಪಾಸಣೆಗೆ ಸಂಬಂಧಿಸಿ ತೊಂದರೆಗಳಿರುವುದು ಪತ್ತೆಯಾಗಿದೆ. ಇವರನ್ನು ದ್ವಿತೀಯ ಹಂತದ ನೇತ್ರ ತಪಾಸಣೆಗೆ ಒಳಪಡಿಸಲಾಗಿದೆ. 4.3 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಿಸಲಾಗಿದ್ದು, ಉಳಿದ ಕನ್ನಡಕಗಳನ್ನು ಆಶಾಕಿರಣ ದೃಷ್ಟಿ ಕೇಂದ್ರಗಳಲ್ಲಿ ಇರಿಸಲಾಗಿದೆ. ಒಟ್ಟು 1.05 ಲಕ್ಷ ಜನರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!