ಪ್ರಧಾನಿಯೊಂದಿಗೆ ಮಾತನಾಡುವ ಶಕ್ತಿ ಕುಮಾರಸ್ವಾಮಿಗೆ ಮಾತ್ರ ಇರೋದು: ಜಿ.ಟಿ.ದೇವೆಗೌಡ

By Kannadaprabha News  |  First Published Oct 14, 2023, 11:59 PM IST

ರಾಜ್ಯದ ಸಮಸ್ಯೆಯ ಕುರಿತು ಪ್ರಧಾನಮಂತ್ರಿ ಅವರೊಂದಿಗೆ ಮಾತನಾಡುವ ಶಕ್ತಿ ಯಾರಾದರೂ ಇದೆ ಎಂದರೆ ಅದು ಕುಮಾರಸ್ವಾಮಿಗೆ ಮಾತ್ರ ಎಂದು ಜೆಡಿಎಸ್‌ ಶಾಸಕ ಜಿ.ಟಿ.ದೇವೆಗೌಡ ಹೇಳಿದರು. 
 


ಬೆಳಗಾವಿ (ಅ.14): ರಾಜ್ಯದ ಸಮಸ್ಯೆಯ ಕುರಿತು ಪ್ರಧಾನಮಂತ್ರಿ ಅವರೊಂದಿಗೆ ಮಾತನಾಡುವ ಶಕ್ತಿ ಯಾರಾದರೂ ಇದೆ ಎಂದರೆ ಅದು ಕುಮಾರಸ್ವಾಮಿಗೆ ಮಾತ್ರ ಎಂದು ಜೆಡಿಎಸ್‌ ಶಾಸಕ ಜಿ.ಟಿ.ದೇವೆಗೌಡ ಹೇಳಿದರು. ನಗರದ ಕೆಪಿಟಿಸಿಎಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಬೆಳಗಾವಿ ಜಿಲ್ಲೆ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜೆಡಿಎಸ್ ಪುನಶ್ಚೇತನ ಪರ್ವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿ ಅವರು ನೆರೆ ಬಂದಾಗ 5 ಕೆಜಿ ಅಕ್ಕಿ ಕೊಟ್ಟಿದ್ದನ್ನೆ, ಕಾಂಗ್ರೆಸ್ ಸರ್ಕಾರ ನಾವು ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ಜತೆಗೆ ಗ್ರಾಮೀಣ ಭಾಗದಲ್ಲಿನ ರೈತರಿಗೆ ಕಾಂಗ್ರೆಸ್ ಸರ್ಕಾರ ಏನೂ ನೀಡುತ್ತಿದೆ. 

ರೈತ ಕೃಷಿ ಸಾಲಗಳನ್ನು ನೀಡಿಲ್ಲ. ಬರಗಾಲ ತಾಂಡವವಾಡುತ್ತಿದ್ದರೂ, ಬೆಳೆ ಪರಿಹಾರವಿಲ್ಲ. ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಜತೆಗೆ ಲಂಚ ಪಡೆದು ಪಂಚರಾಜ್ಯ ಚುನಾವಣೆಗೆ ಕಳುಹಿಸಲು ಕಾಂಗ್ರೆಸ್ ₹ 42 ಕೋಟಿ ಸಂಗ್ರಹಿಸಿದೆ ಎಂದು ಆರೋಪಿಸಿದರು. ರಾಜ್ಯದ ನಾನಾ ಸ್ವಾಮೀಜಿಗಳು ಬಿಜೆಪಿಯೊಂದಿಗೆ ಸೇರಿ ರಾಜ್ಯ ಉಳಿಸಿ ಎಂದು ಕರೆ ಕೊಟ್ಟಿದ್ದಾರೆ. ಅದರಂತೆ ನಾವು ಬಿಜೆಪಿಗೆ ಬೆಂಬಲ ನೀಡಿದ್ದೇವೆ. ಕಾಂಗ್ರೆಸ್ 28 ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದರೇ ತಪ್ಪಲ್ಲ. ನಾವು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೋದರೆ ಕೋಮುವಾದಿ ಪಕ್ಷವಂತೆ. 

Tap to resize

Latest Videos

ಮೋದಿ ಜನಪರ ಯೋಜನೆಗಳು ಭಾರತೀಯರಿಗೆ ಶ್ರೀರಕ್ಷೆ: ಚಕ್ರವರ್ತಿ ಸೂಲಿಬೆಲೆ

ನಮ್ಮದು ಮೈಸೂರ ಭಾಗದ ಪಕ್ಷ ಮಾತ್ರವಲ್ಲ. ರಾಜ್ಯ ಹಾಗೂ ರಾಷ್ಟ್ರದ ಪ್ರಮುಖ ಪಕ್ಷ ನಮ್ಮದು. ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು. ರಾಜ್ಯದಲ್ಲಿ ಕುಮಾರಸ್ವಾಮಿ ಸಿಎಂ, ದೇಶಕ್ಕೆ ನರೇಂದ್ರ ಮೋದಿ ಪಿಎಂ ಆಗಬೇಕು. ಪ್ರಾದೇಶಿಕ ಪಕ್ಷವನ್ನು ಉಳಿಸಿ, ಆಸೆ ಆಮಿಷೆಗಳಿಗೆ ಬಲಿಯಾಗಬೇಡಿ.200 ಯೂನಿಟ್ ವಿದ್ಯುತ್ ಉಚಿತವಲ್ಲ. ಮೋದಿ 5 ಕೆಜಿ ಅಕ್ಕಿ ಸೇರಿ 15 ಕೆಜಿ ಆಗಬೇಕು ಎಂದು ತಿಳಿಸಿದರು. ಮಾಜಿ ಶಾಸಕ ವೈ.ಎಸ್.ವಿ ದತ್ತಾ ಮಾತನಾಡಿ, ಕಾಂಗ್ರೆಸ್ ಪಕ್ಷದ ಇತಿಹಾಸವೇ ಹೇಳುತ್ತದೆ. ಹೆಚ್ಚಿನ ಸೀಟ್‌ಗಳು ಗೆದ್ದಾದ ಬಳಿಕ ಪಕ್ಷವು ಸರ್ವಪತನ ಕಂಡಿದೆ. ಬಹುಮತ ಇದ್ದರೂ ಬಹಳ ದಿನ ತಾಳಿಕೆ ಬರುತ್ತೆ ಎಂಬ ಲೆಕ್ಕ, ಬೊಜ್ಜು ಬಂದ ಸರ್ಕಾರಕ್ಕೆ ನಾನಾ ರೋಗಗಳು ಬಂದಿವೆ. ಜನಪರ ವಿರೋಧಿ ಸರ್ಕಾರ ಕಿತ್ತೊಗೆಯಬೇಕು. ಜನಪರ ಸರ್ಕಾರ ಬರಬೇಕು ಎಂದರು.

ಮಾಜಿ ಸಚಿವ ಆಲ್ಕೋಡು ಹನುಮಂತಪ್ಪ ಮಾತನಾಡಿ, ಸರ್ಕಾರ ಕೈಗೊಂಡಿರುವ ತಪ್ಪು ನಿರ್ಧಾರಗಳನ್ನು ಜನರಿಗೆ ತಲುಪಿಸುವ ಸಲುವಾಗಿ ರಾಜ್ಯಾದ್ಯಂತ ಸಂಚರಿಸುತ್ತಿದ್ದೇವೆ. ರಾಜ್ಯ ಸರ್ಕಾರದ ಯೋಜನೆಗಳು ಯಾವು ಅಭಿವೃದ್ಧಿಗೆ ಪೂರಕವಲ್ಲ. ಅಲ್ಲದೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ರೈತರಿಗೆ ಯಾವ ಗ್ಯಾರಂಟಿ ಕೊಟ್ಟಿದ್ದೀರಿ..? ಸುಳ್ಳು ಗ್ಯಾರಂಟಿಗಳಿಂದ ರಾಜ್ಯದ ಜನತೆಯನ್ನು ದಾರಿ ತಪ್ಪಿಸಲಾಗಿದೆ. ಲೋಕಸಭಾ ಚುನಾವಣಾ ನಂತರ ಎಲ್ಲ ಗ್ಯಾರಂಟಿ ಹೋಗುತ್ತವೆ. ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ ಎಂದು ಸಿಎಂ ಸ್ಪಷ್ಟವಾಗಿ ತಿಳಿಸಿದ್ದಾರೆ. ರಾಜ್ಯದ ಮಹಿಳೆಯ ಹೆಸರಿನಲ್ಲಿ ಸರ್ಕಾರ ಬೊಕ್ಕಸಕ್ಕೆ ತಪ್ಪು ಲೆಕ್ಕ ನೀಡುತ್ತಿದೆ. ಜತೆಗೆ ಪಂಚಾಯಿತಿಗೊಂದು ಸಾರಾಯಿ ಅಂಗಡಿಯನ್ನು ನಾವು ತೀವ್ರವಾಗಿ ವಿರೋಧಿಸಿದ ಮೇಲೆ ನಿಲ್ಲಿಸಿದ್ದಾರೆ. 

ಮುತ್ತತ್ತಿಯಿಂದ ಬನ್ನೇರುಘಟ್ಟದವರೆಗೆ ಬ್ಯಾರಿಕೇಡ್ ನಿರ್ಮಾಣ: ಸಂಸದ ಡಿ.ಕೆ.ಸುರೇಶ್

ಡಿ.ಕೆ.ಶಿವಕುಮಾರ ಗ್ಯಾರಂಟಿ ಸಾರಾಯಿ ಅಂಗಡಿ ತೆಗೆಯುತ್ತೇವೆ ಎಂದು ಹೇಳಿದ್ದರೇ, ಸಿಎಂ ಹಳ್ಳಿಗಳಲ್ಲಿ ಸಾರಾಯಿ ಅಂಗಡಿ ತೆರೆಯುವ ಯೋಜನೆ ಕೈಬಿಟ್ಟಿದ್ದೇವೆ ಎನ್ನುತ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯೋ, ಸಿದ್ದರಾಮಯ್ಯ ಮುಖ್ಯಮಂತ್ರಿಯೋ ಎಂಬುವುದು ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು. ಈ ವೇಳೆ ಮಾಜಿ ಸಚಿವರಾದ ಸಾ.ರಾ.ಮಹೇಶ, ಬಂಡೆಪ್ಪ ಕಾಶಂಪೂರ, ಎಚ್.ಕೆ.ಕುಮಾರಸ್ವಾಮಿ, ವೆಂಕಟಗೌಡ ನಾಡಗೌಡರ, ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಸುರೇಶಗೌಡ, ವಿಪ ಸದಸ್ಯ ಬಿ.ಎಂ.ಫಾರೂಕ್, ಮುಖಂಡ ಬಿ.ಎನ್.ರುದ್ರಗೌಡರ ಸೇರಿದಂತೆ ಜಿಲ್ಲೆಯ ಎಲ್ಲ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

click me!