ಶಿವಸೇನೆ ಯಾರದ್ದು..? ನಿರ್ಧಾರ ಮಾಡಲಿದೆ ಸಾಂವಿಧಾನಿಕ ಪೀಠ!

By Santosh NaikFirst Published Aug 23, 2022, 3:27 PM IST
Highlights

ಮಹಾರಾಷ್ಟ್ರದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಶಿವಸೇನೆ ಬಣಗಳ ವಿಚಾರವನ್ನು ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ. ಉದ್ಧವ್‌ ಠಾಕ್ರೆ ಹಾಗೂ ಏಕನಾಥ್‌ ಶಿಂಧೆ ನಡುವೆ ಶಿವಸೇನೆ ಯಾರದ್ದು ಎನ್ನುವುದನ್ನು ಐವರು ಸದಸ್ಯರ ಸಾಂವಿಧಾನಿಕ ಪೀಠ ತೀರ್ಮಾನ ಮಾಡಲಿದೆ. 
 

ನವದೆಹಲಿ (ಆ.23): ಶಿವಸೇನೆ ಪಕ್ಷದ ಮೇಲೆ ಯಾರ ಅಧಿಕಾರವಿದೆ ಎನ್ನುವ ಕುರಿತು ಸುಪ್ರೀಂ ಕೋರ್ಟ್‌ ಮಂಗಳವಾರ ಮತ್ತೆ ವಿಚಾರಣೆ ನಡೆಸಿತು. ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಹಾಗೂ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನಡುವೆ ನಿಜವಾದ ಶಿವಸೇನೆ ಯಾವುದು ಎನ್ನುವುದನ್ನು ತೀರ್ಮಾನಿಸಲು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿದೆ.  ತ್ರಿಸದಸ್ಯ ಪೀಠವು 8 ಪ್ರಶ್ನೆಗಳನ್ನು ರೂಪಿಸಿದ್ದು, ಅದರ ಆಧಾರದ ಮೇಲೆ ಶಿವಸೇನೆ ಯಾರದ್ದು ಎಂಬುದನ್ನು ಸಂವಿಧಾನಿಕ ಪೀಠ ನಿರ್ಧರಿಸುತ್ತದೆ. ಗುರುವಾರದವರೆಗೆ ಅಂದರೆ ಆಗಸ್ಟ್‌ 25ರವರೆಗೆ ಪಕ್ಷದ ಚಿಹ್ನೆ ವಿವಾದದ ಬಗ್ಗೆ ನಿರ್ಧಾರ ತೆಗೆದುಕೊಳ್ಳದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಐವರು ನ್ಯಾಯಾಧೀಶರ ಪೀಠವು ಆಗಸ್ಟ್ 25 ರಂದು ಇದರ ವಿಚಾರಣೆ ನಡೆಸಲಿದೆ. ಕಳೆದ ವಿಚಾರಣೆ ವೇಳೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಅನರ್ಹತೆಯ ಆರೋಪವನ್ನು ನಮ್ಮ ವಿರುದ್ಧ ತಪ್ಪಾಗಿ ಮಾಡಲಾಗಿದೆ ಎಂದು ಹೇಳಿದ್ದರು. ನಾವು ಈಗಲೂ ಶಿವಸೈನಿಕರು ಎಂದಿದ್ದರು.

ಇನ್ನೊಂದೆಡೆ, ಸುಪ್ರೀಂ ಕೋರ್ಟ್‌ನಲ್ಲಿ ಉದ್ಧವ್ ಠಾಕ್ರೆ ಬಣದ ಪರ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್, ಶಿಂಧೆ ಬಣಕ್ಕೆ ಹೋಗುವ ಶಾಸಕರು ಬೇರ್ಪಟ್ಟ ಬಣವನ್ನು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳಿಸಿದರೆ ಮಾತ್ರ ಸಂವಿಧಾನದ 10 ನೇ ಶೆಡ್ಯೂಲ್ ಅಡಿಯಲ್ಲಿ ಅನರ್ಹತೆಯನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ. ಅದರ ಹೊರತಾಗಿ ಅವರನ್ನು ಉಳಿಸಲು ಬೇರೆ ಮಾರ್ಗವಿಲ್ಲ ಎಂದು ಹೇಳಿದರು.

ಆಗಸ್ಟ್‌ 25 ರಂದು ಸಾಂವಿಧಾನಿಕ ಪೀಠದ ಮುಂದೆ ವಿಷಯವನ್ನು ಪಟ್ಟಿ ಮಾಡಿ ಮತ್ತು ಆರಂಭದಲ್ಲಿ ಚುನಾವಣಾ ಆಯೋಗದ ಪ್ರಕ್ರಿಯೆಗೆ ಸಂಬಂಧಿಸಿದ ಚಿಹ್ನೆಯ ಬಗ್ಗೆ ಪೀಠವು ನಿರ್ಧರಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಹೇಳಿದೆ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಪತನಕ್ಕೆ ಕಾರಣವಾದ ಇತ್ತೀಚಿನ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಪ್ರಕರಣಗಳನ್ನು ಪೀಠವು ವಿಚಾರಣೆ ನಡೆಸುತ್ತಿದೆ.

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಸಂಪೂರ್ಣ ವಿವರ
ಜೂನ್‌ 20:
15 ಶಿವಸೇನೆ ಶಾಸಕರು ಹಾಗೂ 10 ಸ್ವತಂತ್ರ ಶಾಸಕರು ಸೂರತ್‌ಗೆ ತೆರಳಿ ಅಲ್ಲಿಂದ ಗುವಾಹಟಿಗೆ ಶಿಫ್ಟ್‌ ಆಗಿದ್ದರು.
ಜೂನ್‌ 23: ಏಕನಾಥ್‌ ಶಿಂಧೆ ಮೊದಲ ಪತ್ರ, ತಮಗೆ 35 ಶಿವಸೇನೆ ಶಾಸಕರ ಬೆಂಬಲ ಇದೆ ಎಂದು ಘೋಷಣೆ.
ಜೂನ್‌ 25: 16 ರೆಬಲ್‌ ಶಾಸಕರಿಗೆ ಸದಸ್ಯತ್ವವನ್ನು ರದ್ದು ಮಾಡುವ ಕುರಿತಾಗಿ ಉಪಸಭಾಪತಿಯಿಂದ ನೋಟಿಸ್‌
ಜೂನ್‌ 26: ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಶಿವಸೇನೆ, ಕೇಂದ್ರ, ಮಹಾರಾಷ್ಟ್ರ ಪೊಲೀಸರು ಮತ್ತು ಉಪಸಭಾಪತಿಗೆ ನೋಟಿಸ್ ಕಳುಹಿಸಿತ್ತು. ಬಂಡಾಯ ಶಾಸಕರು ಇದರಿಂದ ರಿಲೀಫ್‌ ಪಡೆದುಕೊಂಡಿದ್ದರು.
ಜೂನ್‌ 28: ದೇವೇಂದ್ರ ಫಡ್ನವಿಸ್‌ ಅವರ ಮನವಿಯ ಮೇರೆಗೆ, ಮಹಾರಾಷ್ಟ್ರ ಗವರ್ನರ್‌ ಉದ್ಧವ್‌ ಠಾಕ್ರೆಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚನೆ.
ಜೂನ್‌ 29: ವಿಶ್ವಾಸಮತ ಯಾಚನೆಗೆ ತಡೆ ನೀಡಲು ಸುಪ್ರೀಂ ನಕಾರ. ಇದರ ಬೆನ್ನಲ್ಲಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಉದ್ದವ್‌ ಠಾಕ್ರೆ,
ಜೂನ್‌ 30: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾದ ಏಕನಾಥ್‌ ಶಿಂಧೆ. ಬಿಜೆಪಿಯ ದೇವೇಂದ್ರ ಫಡ್ನವಿಸ್‌ ಉಪಮುಖ್ಯಮಂತ್ರಿ ಸ್ಥಾನಕ್ಕೆ.
ಜುಲೈ 3: ವಿಧಾನಸಭೆಯ ನೂತನ ಸ್ಪೀಕರ್ ಶಿಂಧೆ ಬಣಕ್ಕೆ ಸದನದಲ್ಲಿ ಮನ್ನಣೆ ನೀಡಿದರು. ಮರುದಿನ ಶಿಂಧೆ ವಿಶ್ವಾಸ ಮತ ಗೆದ್ದರು.
ಆಗಸ್ಟ್‌ 3: ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದ ಸುಪ್ರೀಂ ಕೋರ್ಟ್‌, ನಾವು ವಿಚಾರಣೆಯನ್ನು 10 ದಿನಗಳವರೆಗೆ ಮುಂದೂಡಿದ್ದೇವೆ ಅಷ್ಟರ ಒಳಗೆ ನೀವು (ಶಿಂಧೆ) ಸರ್ಕಾರ ರಚಿಸಿದ್ದೀರಿ ಎಂದು ಪ್ರಶ್ನೆ
ಆಗಸ್ಟ್‌ 4: ಸುಪ್ರೀಂ ಕೋರ್ಟ್‌ ಹೇಳಿಕೆ, ಇದರ ವಿಚಾರಣೆ ಇನ್ನೂ ಪ್ರಗತಿಯಲ್ಲಿದೆ. ತೀರ್ಪು ಬರುವವರೆಗೂ ಈ ಪಕ್ಷದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವಂತಿಲ್ಲ ಎಂದು ಚುನಾವಣಾ ಆಯೋಗಕ್ಕೆ ಸೂಚನೆ. ಇದಾದ ಬಳಿಕ ಸುಪ್ರೀಂ ಕೋರ್ಟ್‌ 3 ಬಾರಿ ವಿಚಾರಣೆಯನ್ನು ಮುಂದೂಡಿಕೆ ಮಾಡಿತ್ತು. 8, 12 ಹಾಗೂ 22 ರಂದು ನಡೆದ ವಿಚಾರಣೆಯ ವೇಳೆ ಯಾವುದೇ ತೀರ್ಮಾನ ನೀಡಿರಲಿಲ್ಲ.

click me!