ಸಚಿವ ಸ್ಥಾನವೂ ಸಿಗದಿದ್ದರೆ ಹೇಗೆ ಮುಖ ತೋರಿಸಲಿ?: ಸಿಎಂ ರೇಸ್‌ನಲ್ಲಿದ್ದ ಶಾಸಕ

By Kannadaprabha NewsFirst Published Aug 3, 2021, 8:55 AM IST
Highlights
  • ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಕೆಲಕಾಲ ಮುಂಚೂಣಿಯಲ್ಲಿದ್ದ ಶಾಸಕ ಅರವಿಂದ್‌ ಬೆಲ್ಲದ
  • ತಮಗೆ ಸಚಿವ ಸ್ಥಾನವನ್ನಾದರೂ ನೀಡಿ ಎಂದು ಪಕ್ಷದ ವರಿಷ್ಠರ ಮೊರೆ 

ಬೆಂಗಳೂರು (ಆ.03):  ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಕೆಲಕಾಲ ಮುಂಚೂಣಿಯಲ್ಲಿದ್ದ ಶಾಸಕ ಅರವಿಂದ್‌ ಬೆಲ್ಲದ ಅವರು ಇದೀಗ ತಮಗೆ ಸಚಿವ ಸ್ಥಾನವನ್ನಾದರೂ ನೀಡಿ ಎಂದು ಪಕ್ಷದ ವರಿಷ್ಠರ ಮೊರೆ ಹೋಗಿದ್ದಾರೆ.

ಪದೇಪದೇ ದೆಹಲಿಗೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ಲಾಬಿ ನಡೆಸಿದ ಬೆಲ್ಲದ ಅವರು ಈ ಬಾರಿ ಸಚಿವ ಸ್ಥಾನಕ್ಕೆ ಪ್ರಯತ್ನ ತೀವ್ರಗೊಳಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಬಲವಾಗಿ ಹೆಸರು ಕೇಳಿಬಂದಿದ್ದರಿಂದ ಅಂತಿಮವಾಗಿ ಸಚಿವ ಸ್ಥಾನವನ್ನೂ ನೀಡದಿದ್ದರೆ ನಾನು ಕ್ಷೇತ್ರದ ಜನತೆಗೆ ಹೇಗೆ ಮುಖ ತೋರಿಸುವುದು ಎಂದು ಪಕ್ಷದ ರಾಜ್ಯ ಹಾಗೂ ಕೇಂದ್ರದ ನಾಯಕರ ಬಳಿ ಬೆಲ್ಲದ ಅವರು ಅಲವತ್ತುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ರೇಸ್‌ನಲ್ಲಿದ್ದ ಅರವಿಂದ್ ಬೆಲ್ಲದ್ ದಿಢೀರ್ ಬಸವರಾಜ ಬೊಮ್ಮಾಯಿ ಭೇಟಿ

ಧಾರವಾಡ ಜಿಲ್ಲೆ ಪ್ರತಿನಿಧಿಸುತ್ತಿದ್ದ ಜಗದೀಶ್‌ ಶೆಟ್ಟರ್‌ ಅವರು ತಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಮುಂದುವರೆಯುವುದಿಲ್ಲ ಎಂದು ಸ್ಪಷ್ಟಪಡಿಸಿರುವುದರಿಂದ ಅವರಿಂದ ತೆರವಾಗುವ ಸ್ಥಾನಕ್ಕಾಗಿ ಬೆಲ್ಲದ ಅವರು ಪಕ್ಷದ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ. ಇದಕ್ಕಾಗಿ ಅದೇ ಜಿಲ್ಲೆಯವರಾದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ನೆಚ್ಚಿಕೊಂಡಿದ್ದಾರೆ. ಜೋಶಿ ಅವರೂ ಬೆಲ್ಲದ ಪರವಾಗಿ ಶಿಫಾರಸು ಮಾಡಬಹುದು ಎನ್ನಲಾಗುತ್ತಿದೆ.

ಆದರೆ, ಶೆಟ್ಟರ್‌ ಅವರಿಂದ ತೆರವಾದ ಸ್ಥಾನವನ್ನು ತಮಗೆ ನೀಡಬೇಕು ಎಂದು ಧಾರವಾಡ ಜಿಲ್ಲೆಯ ಮತ್ತೊಬ್ಬ ಹಿರಿಯ ಶಾಸಕ ಶಂಕರ್‌ ಮುನೇನಕೊಪ್ಪ ಅವರೂ ಬಲವಾದ ಬೇಡಿಕೆಯನ್ನು ಪಕ್ಷದ ನಾಯಕರ ಮುಂದಿಟ್ಟಿದ್ದಾರೆ. ಹೀಗಾಗಿ, ಅಂತಿಮವಾಗಿ ಬೆಲ್ಲದ ಅಥವಾ ಮುನೇನಕೊಪ್ಪ ಅವರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ಒಲಿಯಬಹುದು ಎಂದು ಮೂಲಗಳು ತಿಳಿಸಿವೆ.

click me!