11 ಮಂದಿಯ ಅವಧಿಯು ಮುಂದಿನ ತಿಂಗಳು 17ರಂದು ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆಯಾಗಿದೆ. ಸೋಮವಾರ ಅಧಿಸೂಚನೆ ಪ್ರಕಟವಾಗಿದ್ದು, ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಬೆಂಗಳೂರು(ಮೇ.28): ವಿಧಾನಸಭೆಯಿಂದ ವಿಧಾನಪರಿಷತ್‌ನ 11 ಸ್ಥಾನಗಳಿಗೆ ಘೋಷಣೆಯಾಗಿರುವ ದ್ವೈವಾರ್ಷಿಕ ಚುನಾವಣೆಗೆ ಚುನಾವಣಾ ಆಯೋಗವು ಸೋಮವಾರ ಅಧಿಸೂಚನೆ ಪ್ರಕಟಿಸಿದೆ. 11 ಮಂದಿಯ ಅವಧಿಯು ಮುಂದಿನ ತಿಂಗಳು 17ರಂದು ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆಯಾಗಿದೆ. ಸೋಮವಾರ ಅಧಿಸೂಚನೆ ಪ್ರಕಟವಾಗಿದ್ದು, ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಆಡಳಿತಾರೂಢ ಕಾಂಗ್ರೆಸ್‌ಗೆ ಏಳು ಸ್ಥಾನ, ಪ್ರತಿಪಕ್ಷಗಳಾದ ಬಿಜೆಪಿಗೆ ಮೂರು ಮತ್ತು ಜೆಡಿಎಸ್‌ಗೆ ಒಂದು ಸ್ಥಾನ ಲಭಿಸಲಿವೆ. ಇದುವರೆಗೆ ಯಾವುದೇ ಪಕ್ಷವೂ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ. ಲೋಕಸಭಾ ಚುನಾವಣೆ ಕೊನೆಯ ಹಂತದಲ್ಲಿರುವುದರಿಂದ ಮತ್ತು ಆಕಾಂಕ್ಷಿಗಳ ಸಂಖ್ಯೆ ತೀವ್ರವಾಗಿರುವುದರಿಂದ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ.
ವಿಧಾನ ಪರಿಷತ್ ಚುನಾವಣೆ 2024: ಅಭ್ಯರ್ಥಿ ಘೋಷಣೆಗೆ ಇಂದು ಸಿದ್ದು, ಡಿಕೆಶಿ ದಿಲ್ಲಿಗೆ
ಜೂ.3ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂ.4ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂ.6ರಂದು ನಾಮಪತ್ರಗಳನ್ನು ಹಿಂಪಡೆಯಲು ಕಡೆಯ ದಿನವಾಗಿದ್ದು, ಜೂ.13ರಂದು ಮತದಾನ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಜರುಗಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.
ಸಚಿವ ಎನ್.ಎಸ್.ಬೋಸರಾಜು ಸೇರಿದಂತೆ ಅರವಿಂದ ಕುಮಾರ ಅರಳಿ, ಕೆ.ಗೋವಿಂದರಾಜು, ತೇಜಸ್ವಿನಿ ಗೌಡ, ಪಿ.ಎಂ.ಮುನಿರಾಜುಗೌಡ, ಕೆ.ಪಿ.ನಂಜುಂಡಿ, ಬಿ.ಎಂ.ಫಾರೂಕ್, ರಘುನಾಥ್ ಮಲ್ಕಾಪುರೆ, ಎನ್.ರವಿಕುಮಾರ್, ಎಸ್. ರುದ್ರೇಗೌಡ ಮತ್ತು ಕೆ.ಹರೀಶ್ ಕುಮಾರ್ ಅವಧಿಯು ಜೂ.17ಕ್ಕೆ ಮುಕ್ತಾಯವಾಗಲಿದೆ. ಅವರಿಂದ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.