'ನಿಮಿಷಕ್ಕೊಂದು ತೀರ್ಮಾನ, ಮಂತ್ರಿಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಸೋಂಕು ಹೆಚ್ಚಳ'

By Kannadaprabha NewsFirst Published Jul 15, 2020, 7:57 AM IST
Highlights

ಮಂತ್ರಿಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಸೋಂಕು ಹೆಚ್ಚಳ| ನಿಮಿಷಕ್ಕೊಂದು ತೀರ್ಮಾನ: ಡಿಕೆಶಿ ವಾಗ್ದಾಳಿ|

 

ಬೆಂಗಳೂರು(ಜು.15): ರಾಜ್ಯ ಸರ್ಕಾರದ ಮಂತ್ರಿಗಳ ನಡುವೆ ಹೊಂದಾಣಿಕೆ ಇಲ್ಲ. ಗಳಿಗೆಗೊಂದು ಹೇಳಿಕೆ, ನಿಮಿಷಕ್ಕೊಂದು ತೀರ್ಮಾನ ಮಾಡಿ ಜನಸಾಮಾನ್ಯರನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ. ಮಿತಿಮೀರಿ ಸೋಂಕು ಹೆಚ್ಚಲು ರಾಜ್ಯ ಸರ್ಕಾರವೇ ಕಾರಣ.

ಹೀಗೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಸೋಂಕು ನಿಯಂತ್ರಿಸಲು ಸರ್ಕಾರಕ್ಕೆ ಯಾರಾದರೂ ಅಡ್ಡಿ ಬಂದಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇದಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್‌ ಮಾಡುತ್ತಿದ್ದು, ಇತರೆ ಜಿಲ್ಲೆಗಳ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಸರ್ಕಾರ ಕೊರೋನಾ ನಿಯಂತ್ರಿಸಲು ವಿಫಲವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಕೋವಿಡ್‌-19 ನಿರ್ವಹಣೆಗೆ ರಾಜ್ಯಕ್ಕೆ ನಾಲ್ಕು ಉಸ್ತುವಾರಿ ಮಂತ್ರಿಗಳು ಹಾಗೂ ಬೆಂಗಳೂರಿಗೆ ಏಳು ಉಸ್ತುವಾರಿಗಳು ಮತ್ತು ಮಂತ್ರಿ ಅಲ್ಲದವರೂ ಹೊಣೆ ಹೊತ್ತಿದ್ದಾರೆ. ಮಂತ್ರಿಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಸೋಂಕು ಎಲ್ಲೆಡೆ ಮಿತಿಮೀರಿ ಹರಡುವಂತಾಗಿದೆ. ರಾಜ್ಯ ಸರ್ಕಾರ ಇಷ್ಟಬಂದ ತೀರ್ಮಾನ ತೆಗೆದುಕೊಳ್ಳಲಿ, ನಾವು ಪ್ರಶ್ನಿಸುವುದಿಲ್ಲ. ಆದರೆ ಜನರನ್ನು ಉಳಿಸಿ ಬದುಕಿಸಿ ಎಂದು ಒತ್ತಾಯಿಸಿದರು.

ಸತ್ತ ಮೇಲೆ ಪರಿಹಾರ ಕೊಡ್ತೀರಾ:

ಸರ್ಕಾರ ಘೋಷಿಸಿದ 1600 ಕೋಟಿ ಪ್ಯಾಕೇಜ್‌ನಲ್ಲಿ ಶೇ.25ರಷ್ಟುಜನರಿಗೆ ಪರಿಹಾರ ತಲುಪಿಲ್ಲ. ಜನ ಸತ್ತ ಮೇಲೆ ಅವರಿಗೆ ದುಡ್ಡು ಕೊಡುತ್ತೀರಾ? ಕೇಂದ್ರ ಸರ್ಕಾರದ 20 ಲಕ್ಷ ಕೋಟಿಯಲ್ಲಿ ನಮ್ಮ ರಾಜ್ಯಕ್ಕೆ ಕೋವಿಡ್‌ ಪರಿಹಾರ ಎಷ್ಟುಬಂದಿದೆ ಎಂದ ಬಗ್ಗೆ ಮಾಹಿತಿ ಕೊಡಿ ಎಂದು ಆಗ್ರಹಿಸಿದರು.

ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ:

ಮಂತ್ರಿಗಳು ಪಿಪಿಇ ಕಿಟ್‌ ಹಾಕಿಕೊಂಡು ಕೋವಿಡ್‌ ಆಸ್ಪತ್ರೆಗಳಿಗೆ ಹೋಗಿ ಅವರ ಕಷ್ಟಗಳನ್ನು ಆಲಿಸಬೇಕು. ಕಷ್ಟದ ಸಮಯದಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಕರ್ತವ್ಯ. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಸರಿಯಾದ ವ್ಯವಸ್ಥೆ ಇಲ್ಲ. ನಾಯಿಗೆ ಅನ್ನ ಹಾಕುವಂತೆ ಅವರಿಗೆ ಊಟ ನೀಡಲಾಗುತ್ತಿದೆ. ಈ ಪರಿಸ್ಥಿತಿ ಪರಿಶೀಲಿಸಲು ಜುಲೈ 15ರಂದು ಬೆಳಗ್ಗೆ 8ಕ್ಕೆ ನಾನು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.

click me!