27 ಗ್ರಾಪಂಗೆ ಚುನಾವಣೆ ಕೈಬಿಟ್ಟಆಯೋಗ

By Kannadaprabha NewsFirst Published Dec 6, 2020, 9:05 AM IST
Highlights

ಒಟ್ಟು 27 ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ ಕೈಬಿಟ್ಟಿದೆ. ಇದರಿಂದಾಗಿ ರಾಜ್ಯದ 5762 ಗ್ರಾ.ಪಂ.ಗಳಿಗೆ ಚುನಾವಣೆ ನಡೆಯುವ ಬದಲು 5735 ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಲಿದೆ. 

ಬೆಂಗಳೂರು (ಡಿ.06):  ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿಸಿರುವ ಹಿನ್ನೆಲೆಯಲ್ಲಿ 26 ಗ್ರಾ.ಪಂ. ಹಾಗೂ ವಿಚಾರಣಾ ಹಂತದಲ್ಲಿರುವ ಒಂದು ಗ್ರಾ.ಪಂ. ಸೇರಿದಂತೆ ಒಟ್ಟು 27 ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ ಕೈಬಿಟ್ಟಿದೆ. ಇದರಿಂದಾಗಿ ರಾಜ್ಯದ 5762 ಗ್ರಾ.ಪಂ.ಗಳಿಗೆ ಚುನಾವಣೆ ನಡೆಯುವ ಬದಲು 5735 ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಲಿದೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯಿತಿಗೆ ಸೇನಾಪುರ ಗ್ರಾಮ ಸೇರ್ಪಡೆ ಪ್ರಶ್ನಿಸಿ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಲಾಗಿದೆ. ಇದರ ವಿಚಾರಣೆ ನಡೆಯುತ್ತಿರುವ ಕಾರಣ ಹೊಸಾಡು ಗ್ರಾ.ಪಂ. ಅನ್ನು ಚುನಾವಣೆಯಿಂದ ಕೈಬಿಡಲಾಗಿದೆ ಎಂದು ಆಯೋಗ ತಿಳಿಸಿದೆ.

ಗರಿಗೆದರಿದ ರಾಜಕೀಯ : ಸುಮಲತಾ ಆಯ್ಕೆಗೆ ಹೆಚ್ಚಿದ ಡಿಮ್ಯಾಂಡ್ ...

ಚುನಾವಣೆ ಕೈಬಿಟ್ಟಗ್ರಾ.ಪಂ.:  ಬೆಂಗಳೂರು ಉತ್ತರ ತಾಲೂಕಿನ ಸೋಮಶೆಟ್ಟಿಹಳ್ಳಿ, ಚಿಕ್ಕಬಾಣವಾರ, ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ, ಯಲಹಂಕ ತಾಲೂಕಿನ ಹುಣಸಮಾರನಹಳ್ಳಿ, ಸೊಣ್ಣಪ್ಪನಹಳ್ಳಿ, ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ, ಬೆಳಗಾವಿ ಜಿಲ್ಲೆ ಯರಗಟ್ಟಿತಾಲೂಕಿನ ಯರಗಟ್ಟಿ, ಅಥಣಿ ತಾಲೂಕಿನ ಕಾಗವಾಡ, ಬೆಳಗಾವಿ ತಾಲೂಕಿನ ಮಚ್ಚೆ ಮತ್ತು ಪೀರನವಾಡಿ, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ, ಚಿಂಚೋಡಿ, ಕರಡಿಗುಡ್ಡ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ನಿಗೋಳಿ, ಮನ್ನಬೆಟ್ಟು, ಕಟೀಲು, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಎಚ್‌.ಕಡದಕಟ್ಟೆ, ಹರಿಹರ ತಾಲೂಕಿನ ಗುತ್ತೂರು, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ (ಗುಳದಕೇರಿ), ಮಂದಿ-ಎ (ಹಳೆಮರ), ಮಂಕಿ-ಬಿ (ಅನಂತವಾಡಿ), ಮಂಕಿ-ಸಿ (ಚಿತ್ತಾರ), ಕೋಲಾರ ತಾಲೂಕಿನ ವೇಮಗಲ್‌, ಕುರುಗಲ್‌, ಶೆಟ್ಟಿಹಳ್ಳಿ, ಚೌಡದೇವನಹಳ್ಳಿ ಮತ್ತು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಾಡು.

ಒಂದೇ ಹಂತದಲ್ಲಿ ಚುನಾವಣೆ:  ಚಿಕ್ಕಮಗಳೂರು ಜಿಲ್ಲೆಯಲ್ಲಿ ಡಿ.27ರಿಂದ 29ರವರೆಗೆ ದತ್ತ ಜಯಂತಿ ನಡೆಯಲಿದೆ. ಹೀಗಾಗಿ ಈ ಜಿಲ್ಲೆಯಲ್ಲಿ ಎರಡು ಹಂತದ ಬದಲು ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಡಿ.22ರಂದು ಒಂದೇ ಹಂತದಲ್ಲಿ 209 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಈ ಮೊದಲು ಮೊದಲ ಹಂತದಲ್ಲಿ 97 ಮತ್ತು ಎರಡನೇ ಹಂತದಲ್ಲಿ 112 ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಸಲು ತೀರ್ಮಾನಿಸಲಾಗಿತ್ತು.

click me!