ಕರ್ನಾಟಕದಲ್ಲಿ ಕಮಲ ಅರಳಿಸಲು ಬರುತ್ತಿದ್ದಾರೆ ನಮೋ..!

By Web DeskFirst Published Jan 31, 2019, 9:10 PM IST
Highlights

2019ರ ಲೋಕಸಭೆ ಚುನಾವಣೆಗೆ ರಣಕಹಳೆ ಊದಿದ ಕರ್ನಾಟಕ ಬಿಜೆಪಿ! ರಾಜ್ಯದಲ್ಲಿ ಕಮಲ ಅರಳಿಸಲು ಬರುತ್ತಿದ್ದಾರೆ ನಮೋ! ಹುಬ್ಬಳ್ಳಿಯಲ್ಲಿ ಮೋದಿ ಭಾಷಣ!

ಬೆಂಗಳೂರು, [ಜ.31]: 2019ರ ಲೋಕಸಭೆ ಚುನಾವಣೆಗೆ ಕರ್ನಾಟಕ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, 3 ಬೃಹತ್ ಸಮಾವೇಶ ಹಮ್ಮಿಕೊಂಡಿದೆ.

ಈ ಮೂರು ಸಮಾವೇಶಗಳ ಪೈಕಿ ಎರಡು ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಟೈಮ್ಸ್‌ ನೌ ಸಮೀಕ್ಷೆ ಅಚ್ಚರಿ: ಕೇಂದ್ರದಲ್ಲಿ ಯಾರಿಗೆಷ್ಟು? ಕರ್ನಾಟಕದ ಕತೆ ಏನು?

ಬೆಂಗಳೂರಿನ ಮಲ್ಲೇಶ್ವರಂನಲ್ಲಿರವ ಬಿಜೆಪಿ ಕಚೇರಿಯಲ್ಲಿ ಇಂದು [ಗುರುವಾರ] ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯ ಬಳಿಕ ಯಡಿಯೂರಪ್ಪ ಅವರು ಪ್ರಧಾನಿಗಳ ಕರ್ನಾಟಕ ಭೇಟಿ ಬಗ್ಗೆ ತಿಳಿಸಿದರು.

ಮಾರ್ಚ್‌ನಲ್ಲೇ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಆಗಬಹುದು. ಪ್ರಧಾನಿ ನರೇಂದ್ರ ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡೋದು ನಮ್ಮ ಉದ್ದೇಶ. ಹೀಗಾಗಿ ನಾವು ನಮ್ಮ ರಾಜ್ಯದಿಂದ 22 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದು, ಮೋದಿಯವರ ಕೈ ಬಲಪಡಿಸಬೇಕಿದೆ. 

ಈ ಹಿನ್ನೆಲೆ ರಾಜ್ಯ ಬಿಜೆಪಿ ಮೂರು ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಫೆಬ್ರವರಿ 10ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಇನ್ನು  ಫೆಬ್ರವರಿ 19 ರಂದು ಕೂಡಾ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದು, ರ್ಯಾಲಿಯ ಸ್ಥಳ ಮಾತ್ರ ನಿಗದಿಯಾಗಬೇಕಿದೆ ಎಂದು ಯಡಿಯೂರಪ್ಪ ಹೇಳಿದರು.

 ಫೆಬ್ರವರಿ 14 ಹಾಗೂ 21 ರಂದು ಅಮಿತ್ ಶಾ ರಾಜ್ಯಕ್ಕೆ ಬರಲು ಒಪ್ಪಿದ್ದಾರೆ. ಒಟ್ಟಿನಲ್ಲಿ ಏಪ್ರಿಲ್ 15ರವರೆಗೆ ಸಂಪೂರ್ಣ ಸಮಯ ಕೊಟ್ಟು ಲೋಕಸಭಾ ಚುನಾವಣೆ ಗೆಲ್ಲಲು ಶ್ರಮಿಸಲಿದ್ದೇವೆ ಎಂದರು. 

ಇದೇ ವೇಳೆ, ಫೆಬ್ರವರಿ 28ರಂದು “ಮೇರಾ ಬೂತ್ -ಸಬ್ ಸೆ ಮಜುಬೂತ್” ಕಾರ್ಯಕ್ರಮ. ಫೆಬ್ರವರಿ 26 ರಂದು ಪ್ರತಿಯೊಬ್ಬರ ಮನೆಯಲ್ಲಿ “ಕಮಲ ಜ್ಯೋತಿ” ಬೆಳಗಿಸುವ ಕಾರ್ಯಕ್ರಮ ಹಾಗೂ ಮಾರ್ಚ್ 2 ರಂದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ “ಕಮಲ ಸಂಕಲ್ಪ” ರ‍್ಯಾಲಿ ನಡೆಸಲಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.

click me!