ಮಹತ್ವದ ಸುಳಿವು: ಚುನಾವಣೆ ಹೊತ್ತಲ್ಲಿ ಜಿಟಿ ದೇವೇಗೌಡ ಪೊಲಿಟಿಕಲ್ ಟರ್ನ್!

By Ramesh BFirst Published Aug 26, 2022, 4:15 PM IST
Highlights

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಲೇ ಇವೆ. ಅದರಲ್ಲೂ ಸದ್ದಿಲ್ಲದೇ ಪಕ್ಷಾಂತರ ಪರ್ವ ಶುರುವಾಗಿದೆ.  ಇನ್ನು ಈ ಸನ್ನಿವೇಶದಲ್ಲಿ ಜಿಟಿ ದೇವೇಗೌಡ ಮನಸ್ಸು ಬದಲಿಸಿದಂತಿದೆ.

ಮೈಸೂರು, (ಆಗಸ್ಟ್.26): ಜೆಡಿಎಸ್‌ನಿಂದ ಅಂತ ಕಾಯ್ದುಕೊಂಡಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಮನಸ್ಸು ಬದಲಿಸಿದಂತಿದ್ದು, ಅವರು ಜೆಡಿಎಸ್‌ನಲ್ಲೇ ಉಳಿಯುವ ಸುಳಿವು ಸಹ ಕೊಟ್ಟಿದ್ದಾರೆ. 

ಹೌದು...ಇದಕ್ಕೆ ಪೂರಕವೆಂಬಂತೆ ಇಂದು(ಶುಕ್ರವಾರ) ಹುಣಸೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಬಗ್ಗೆ ಜಿಟಿ ದೇವೇಗೌಡ ಕೊಟ್ಟಿರುವ ಹೇಳಿಕೆ. ನಾನು ಕುಮಾರಸ್ವಾಮಿ ಅವರ ಜೊತೆ ಮಾತಾಡಿರಲಿಲ್ಲ. ಹುಣಸೂರಿನ ಜನ ನಮ್ಮನ್ನು ಒಂದು ಮಾಡಿದ್ದಾರೆ ಎನ್ನುವ ಮೂಲಕ ಶಾಸಕ ಜಿ.ಟಿ.ದೇವೇಗೌಡ ಅವರು ಜೆಡಿಎಸ್‌ನಲ್ಲೇ ಉಳಿಯುವ ಬಗ್ಗೆ ಪರೋಕ್ಷವಾಗಿ ಸೂಚನೆ ಕೊಟ್ಟಂತಿದೆ.

ಮನಸ್ಸು ಬದಲಾಯಿಸಿದ ಜೆಟಿ ದೇವೇಗೌಡ, ರಾಜಕೀಯ ಭವಿಷ್ಯಕ್ಕಾಗಿ ಪ್ಲಾನ್ ಚೇಂಜ್?

ಮೈತ್ರಿ ಸರ್ಕಾರದ ಪತನದ ಬಳಿಕ ದೂರ-ದೂರವಾಗಿದ್ದ ಕುಮಾರಸ್ವಾಮಿ ಹಾಗೂ ಜಿಡಿ ದೇವೇಗೌಡ ಕಳೆದ ಮೂರು ವರ್ಷಗಳಿಂದ ಎಲ್ಲೂ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ. ಆದ್ರೆ, ಇದೀಗ ಹುಣಸೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಅಲ್ಲದೇ ಹೆಚ್‌ಡಿಕೆ, ಜಿಟಿಡಿ ಹಾಗೂ ಸಾ.ರಾ.ಮಹೇಶ್‌ ಮೂವರು ಪರಸ್ಪರರ ಕೈ ಹಿಡಿದು ಕಾರ್ಯಕ್ರಮದ ದೀಪ ಬೆಳಗಿದರು. ಜಿ.ಟಿ.ದೇವೇಗೌಡರ ನಂತರ ಅವರ ಪುತ್ರ ಜಿ.ಡಿ.ಹರೀಶ್‌ ಗೌಡ ಜೊತೆ ಹೆಚ್‌ಡಿಕೆ ಮಾತುಕತೆ ನಡೆಸಿ ಅಚ್ಚರಿ ಮೂಡಿಸಿದರು.

ಈ ವೇಳೆ  ಮಾತನಾಡಿದ ಜಿಟಿಡಿ, ನೀವು ಗಟ್ಟಿಯಾಗಿ ಜೊತೆಯಾಗಿ ಇರಿ. ಜಯಶಾಲಿಯಾಗಿ ಬನ್ನಿ ಅಂತಾ ಸ್ವಾಮೀಜಿ ಹೇಳಿದ್ದಾರೆ. ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ನಾನು ಎಂದೂ ಕುಮಾರಣ್ಣನ ಕೇಳಿಲ್ಲ ಎಂದು ತಿಳಿಸಿದರು.

ಜನತಾ ಪರಿವಾರ ಜಯಪ್ರಕಾಶ ನಾರಾಯಣ್ ಕಟ್ಟಿದ ಆಸ್ತಿ. ಈ ಪಕ್ಷ ಉಳಿಸುವ ಜವಾಬ್ದಾರಿ ಕುಮಾರಸ್ವಾಮಿ ಮೇಲಿದೆ. ಹೆಚ್‌.ಡಿ.ದೇವೇಗೌಡರು ಶ್ರಮದಿಂದ ಕಟ್ಟಿರುವ ಪಕ್ಷವನ್ನು ಬೆಳೆಸುವ ಜವಾಬ್ದಾರಿ ಕುಮಾರಸ್ವಾಮಿ ಅವರ ಮೇಲಿದೆ. ಜನರು ಮತ್ತು ಸ್ವಾಮೀಜಿಗಳ ಆಶೀರ್ವಾದ ನಿಮ್ಮ ಮೇಲಿದೆ ಎಂದು ಹೆಚ್‌ಡಿಕೆಗೆ ಹಾರೈಸಿದರು. 

ಪಕ್ಷದ ಆಂತರಿಕ ವಿಚಾರವಾಗಿ ಸಾ.ರಾ.ಮಹೇಶ್‌ ಹಾಗೂ ಕುಮಾರಸ್ವಾಮಿ ಅವರೊಂದಿಗೆ ಜಿ.ಟಿ.ದೇವೇಗೌಡ ಅವರು ಮುನಿಸಿಕೊಂಡಿದ್ದರು. ಅನೇಕ ಬಾರಿ ಹೆಚ್‌ಡಿಕೆ ಭಾಗವಹಿಸುತ್ತಿದ್ದ ಕಾರ್ಯಕ್ರಮಗಳಿಗೆ ಗೈರಾಗಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪುತ್ರನಿಗೂ ಟಿಕೆಟ್‌ ಕೊಡಿಸಬೇಕು ಎಂದು ಜಿ.ಟಿ.ದೇವೇಗೌಡ ಯತ್ನಿಸುತ್ತಿದ್ದಾರೆ. ಈ ಸಂಬಂಧ ಕಾಂಗ್ರೆಸ್‌  ಹಾಗೂ ಬಿಜೆಪಿ ಜೊತೆಗೂ ಮಾತುಕತೆ ನಡೆಸಿರುವುದು ಗೊತ್ತಿರುವ ವಿಚಾರವೇ.

ಆದರೆ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ 2 ಟಿಕೆಟ್‌ ಕೊಡುವ ಭರವಸೆ ಸಿಕ್ಕಿಲ್ಲವೆನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಿಟಿಡಿ ಕಾಂಗ್ರೆಸ್‌ ಸೇರುವ ನಿರ್ಧಾರದಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ. ಇದೀಗ ಕುಮಾರಸ್ವಾಮಿ ಜೊತೆ ವೇದಿಕೆ ಹಂಚಿಕೊಂಡು ಸಮಾಲೋಚನೆ ಮಾಡಿರುವುದು ತೀವ್ರ ಕುತೂಹಲಕ್ಕೆ  ಮೂಡಿಸಿದೆ. ಅಲ್ಲದೇ ಜಿಟಿಡಿ ಹಳೆಯದನ್ನು ಮರೆತಯ ಮತ್ತೆ ಕುಮಾರಸ್ವಾಮಿ ಜೊತೆ ಕೈಜೋಡಿಸುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ.

ಮನವೊಲಿಕೆಗೆ ಸಾಕಷ್ಟು ಪ್ರಯತ್ನ
ಯೆಸ್..ಈಗಾಗಲೇ ಜಿಟಿ ದೇವೇಗೌಡ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳು ಸಹ ನಡೆದಿವೆ. ಸ್ವತಃ ಕುಮಾರಸ್ವಾಮಿ ಪುತ್ರ ನಿಖಿಲ್, ಅನಿತಾ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಸಾ.ರಾ.ಮಹೇಶ್ ಅವರು ಜಿಟಿ ದೇವೇಗೌಡ ಅವರನ್ನ ಭೇಟಿ ಮಾಡಿ ಪಕ್ಷ ತೊರೆಯದಂತೆ ಮನವೊಲಿಸಿದ್ದುಂಟು. ಇದೀಗ ಸ್ವತಃ ಜಿಟಿಡಿ ಕುಮಾರಸ್ವಾಮಿ ಬಗ್ಗೆ ನೀಡುವ ಹೇಳಿಕೆ ದಳಪತಿಗಳಲ್ಲಿ ಸಂತಸ ಮೂಡಿಸಿದೆ.

ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕ
ಜಿಟಿ ದೇವೇಗೌಡ ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದು, ಅವರನ್ನು ಕಳೆದುಕೊಳ್ಳಲು ದಳಪತಿಗಳಿಗೆ ಇಷ್ಟ ಇಲ್ಲ. ಈಗಾಗಲೇ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕಾಂಗ್ರೆಸ್ ಹಾಗೂ ಬಿಜೆಪಿ ಭರ್ಜರಿ ತಯಾರಿಗಳನ್ನ ನಡೆಸಿವೆ. ಮುಖ್ಯವಾಗಿ ಜೆಡಿಎಸ್‌ನ ಕೆಲ ಪ್ರಭಾವಿ ಲೀಡರ್‌ಗಳನ್ನ ಪಕ್ಷಕ್ಕೆ ಸೆಳೆಯಲು ಎರಡು ರಾಷ್ಟ್ರೀಯ ಪಕ್ಷಗಳು ಪ್ಲಾನ್ ಮಾಡಿವೆ. ಇಂತಹ ಸಂದರ್ಭದಲ್ಲಿ ಜಿಟಿ ದೇವೇಗೌಡ ಸಹ ಪಕ್ಷದಿಂದ ಹೊರ ಹೋದರೆ ದೊಡ್ಡ ಹಿನ್ನೆಡೆಯಾಗುತ್ತದೆ ಎನ್ನುವುದನ್ನು ಜೆಡಿಎಸ್‌ ವರಿಷ್ಠರು ಅರಿತುಕೊಂಡಿದ್ದಾರೆ. ಆದ್ದರಿಂದ ಶತಾಯಗತಾಯವಾಗಿ ಜಿಟಿಡಿಯನ್ನು ಪಕ್ಷದಲ್ಲೇ ಹಿಡಿದಿಟ್ಟುಕೊಳ್ಳಲು ನಾನಾ ಕಸರತ್ತುಗಳು ನಡೆದಿವೆ..

ಒಟ್ಟಿನಲ್ಲಿ ಜಿಟಿ ದೇವೇಗೌಡ ಅವರು ಇದುವರೆಗೂ ಯಾವುದೇ ಒಂದು ಸ್ಪಷ್ಟ ತೀರ್ಮಾನ ಪ್ರಕಟಿಸಿಲ್ಲ. ಇದಿರಂದ
 ಇಂತಹ ಸನ್ನಿವೇಶದಲ್ಲಿ ಅವರ ರಾಜಕೀಯ ನಡೆ ಕುತೂಹಲಕ್ಕೆ ಕಾರಣವಾಗಿದೆ. 

click me!