ಕಳೆದ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಅಂದಿನ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು ಕೊಡಗಿನ ನೆಲದಲ್ಲಿ ನಿಂತು ಕೊಡವ ಅಭಿವೃದ್ಧಿ ನಿಗಮ ಘೋಷಿಸಿದ್ದರು. ಬಳಿಕ ಅದಕ್ಕೆ 10 ಕೋಟಿ ಅನುದಾನವನ್ನು ಕೊಡುವುದಾಗಿಯೂ ಹೇಳಿದ್ದರು.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಡಿ.01): ಕಳೆದ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಅಂದಿನ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು ಕೊಡಗಿನ ನೆಲದಲ್ಲಿ ನಿಂತು ಕೊಡವ ಅಭಿವೃದ್ಧಿ ನಿಗಮ ಘೋಷಿಸಿದ್ದರು. ಬಳಿಕ ಅದಕ್ಕೆ 10 ಕೋಟಿ ಅನುದಾನವನ್ನು ಕೊಡುವುದಾಗಿಯೂ ಹೇಳಿದ್ದರು. ಈಗ ಅದೇ ವಿಷಯ ಕೊಡಗಿನ ಶಾಸಕರು ಮತ್ತು ಸಂಸದರ ನಡುವೆ ರಾಜಕೀಯ ಕೆಸರು ಎರಚಾಟಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳ ಹಿಂದೆ ಕೊಡವ ಕಾರ್ಯಕ್ರಮವೊಂದರ ವೇದಿಕೆಯಲ್ಲಿದ್ದ ಸಂಸದ ಪ್ರತಾಪ್ ಸಿಂಹ ಅವರು ಕೊಡವ ಅಭಿವೃದ್ಧಿಯನ್ನು ಸ್ಥಾಪಿಸಿದ್ದು ನಮ್ಮ ಸರ್ಕಾರ, ಅದಕ್ಕೆ 10 ಕೋಟಿಯನ್ನು ನೀಡಿದೆ ಎಂದು ಹೇಳಿದ್ದರು.
undefined
ಅದೇ ವೇದಿಕೆಯಲ್ಲಿದ್ದ ವಿರಾಜಪೇಟೆ ಶಾಸಕ ಪೊನ್ನಣ್ಣ ಕೊಡವ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ ಸರ್ಕಾರ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ ಎಂದಿದ್ದಾರೆ. ಬುಧವಾರ ಮಡಿಕೇರಿಯಲ್ಲಿ ದಿಶಾ ಸಭೆ ನಡೆಸಿದ್ದ ಪ್ರತಾಪ್ ಸಿಂಹ ಅವರು ಶಾಸಕ ಪೊನ್ನಣ್ಣ ಅವರು ವಕೀಲರಾಗಿರುವವರು ಸುಳ್ಳು ಹೇಳಬಾರದು. ಸ್ಕೂಲ್ ಮಕ್ಕಳ ಹಾಗೆ ಒಂದು ರೂಪಾಯಿ ಕೊಟ್ಟಿಲ್ಲ, ಒಂದು ರೂಪಾಯಿ ಕೊಟ್ಟಿಲ್ಲ ಅಂತ ಹೇಳಬಾರದು ಎಂದು ವ್ಯಂಗ್ಯವಾಡಿದ್ದರು. ನಮ್ಮ ಸರ್ಕಾರ 10 ಕೋಟಿ ರೂಪಾಯಿ ಕೊಟ್ಟಿದೆ. ಅದು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇದೆ ಎಂದಿದ್ದರು. ಇವರ ಈ ಮಾತಿಗೆ ಕೆಂಡಾಮಂಡಲವಾಗಿರುವ ಕೊಡಗು ಕಾಂಗ್ರೆಸ್ ಪ್ರತಾಪ್ ಸಿಂಹ ಅವರಿಗೆ ನೀವು ಬಾಯಿ ಮುಚ್ಚಿಕೊಂಡಿರಬೇಕು ಎಂದು ಧಮ್ಕಿ ಹಾಕಿದೆ.
ರಾಜ್ಯ ಕ್ಯಾಬಿನೆಟ್‌ನಲ್ಲಿ ಕಳ್ಳರ ತಂಡವೇ ಕೂತಿದೆ: ಶೋಭಾ ಕರಂದ್ಲಾಜೆ
ನಿಮ್ಮ ಕಥೆ ಏನೆಂದು ನಮಗೂ ಗೊತ್ತಿದೆ. ನಮ್ಮ ವಿಷಯಕ್ಕೆ ಬಂದರೆ ಸುಮ್ಮನಿರಲ್ಲ. ನಾಲ್ಕು ವರ್ಷಗಳ ಹಿಂದೆ ನಿಮ್ಮ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಏನೆಲ್ಲಾ ವಿಡಿಯೋ, ಆಡಿಯೋಗಳು ಬಂದಿವೆ ಎನ್ನುವುದು ಗೊತ್ತಿದೆ. ಪೊನ್ನಣ್ಣ ಅವರು ರಾಜ್ಯದ ಎಜಿ ಆಗಿದ್ದವರು. ಅವರಿಗೆ ಅವರದೇ ಆದ ಗೌರವವಿದೆ. ನೀವು ಹೀಗೆಲ್ಲಾ ಮಾತನಾಡಬಾರದು ಎಂದು ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬರೀ ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟುಕೊಂಡು ಕಳೆದ ಹತ್ತು ವರ್ಷಗಳಿಂದ ಅಭಿವೃದ್ಧಿ ಕಾರ್ಯದಲ್ಲಿ ವಿಫಲರಾಗಿರುವ ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲೆಯ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲವೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ತಿರುಗೇಟು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಪೊನ್ನಣ್ಣ ನಾನು ಸುಳ್ಳು ಹೇಳುತ್ತಿಲ್ಲ. ನಾನು ನಿಜವನ್ನೇ ಹೇಳುತ್ತಿದ್ದೇನೆ. ಸುಳ್ಳು ಹೇಳುತ್ತಿರುವವರು ಯಾರು ಎನ್ನುವುದು ಜನರಿಗೆ ಗೊತ್ತಾಗಿದೆ. ಸಂಸದರೇ ಹೇಳಿರುವಂತೆ ಕೊಡವ ಅಭಿವೃದ್ಧಿ ನಿಗಮ ಕಂಪನಿ ಕಾನೂನು ಪ್ರಕಾರ ಇಂದಿಗೂ ನೋಂದಣಿಯೇ ಆಗಿಲ್ಲ. ಈಗಿರುವಾಗ ಅಭಿವೃದ್ಧಿ ನಿಗಮಕ್ಕೆ ಹಣ ಎಲ್ಲಿಂದ ಬರತ್ತದೆ ಎಂದು ಪ್ರಶ್ನಿಸಿದ್ದಾರೆ. 2018 ರಲ್ಲಿ ಈ ಹಿಂದಿನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಡಗು ಜಿಲ್ಲೆಯ ಕೊಡವ ಅಭಿವೃದ್ಧಿಗೆಂದು 15 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ 10 ಕೋಟಿ ರೂ.ಗಳ ಅನುದಾನವನ್ನು ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ಬಿಡುಗಡೆಗೊಳಿಸಲಾಗಿತ್ತು.
ಜೋಡೆತ್ತುಗಳಾದ ಸಿದ್ದು, ಡಿಕೆಶಿ ಈಗ ಪರಸ್ಪರ ಕಾಲೆಳೆಯುತ್ತಿದ್ದಾರೆ: ಆರ್.ಅಶೋಕ್
ಈ ಅನುದಾನ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ಅದನ್ನೂ ಕೂಡ ಹಿಂದಿನ ಶಾಸಕರು ಬಳಕೆ ಮಾಡದ ಹಿನ್ನೆಲೆಯಲ್ಲಿ ಆ ಹಣ ಪಿಡಿ ಖಾತೆಗೆ ವರ್ಗಾವಣೆಯಾಗಿದೆ. ಕೊಡವ ಅಭಿವೃದ್ಧಿ ನಿಗಮವೇ ಸ್ಥಾಪನೆಯಾಗಿಲ್ಲ. ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ ಎನ್ನುವುದೇ ಭೋಗಸ್ ಆಗಿರುವಾಗ ಅನುದಾನ ಬರುವುದಾದರೂ ಹೇಗೆಂದು ಸಂಸದ ಪ್ರತಾಪ್ ಸಿಂಹ ಅವರೇ ಉತ್ತರಿಸಬೇಕು ಎಂದು ಪೊನ್ನಣ್ಣ ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಕೊಡವ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಬಿಡುಗಡೆ ಮಾಡಲಾಗಿದೆ ಎನ್ನುವ ವಿಷಯ ಈಗ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿರುವುದಂತು ಸತ್ಯ.