
ಕೊಪ್ಪ (ಫೆ.26): ಹಾಸನದ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಚರ್ಚಿಸಲು ಭಾನುವಾರ ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ಹಾಸನ ಕ್ಷೇತ್ರದ ಕಾರ್ಯಕರ್ತರ ಸಭೆ ಕರೆದಿದ್ದೇನೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಇಂದಿನ ಸಭೆ ರದ್ದಾಗಿದೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಟಿಕೆಟ್ ವಿಚಾರದಲ್ಲಿ ನನ್ನ ತೀರ್ಮಾನವೇ ಅಂತಿಮ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಹಾಸನದ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಚರ್ಚಿಸಲು ಭಾನುವಾರ ಕರೆದಿರುವ ಸಭೆ ರದ್ದಾಗಿದೆ ಎಂಬ ಸುದ್ದಿ ಹಬ್ಬಿತ್ತು. ಈ ಸಂಬಂಧ ದೇವರಾಜ್ ಎಂಬುವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ ಎನ್ನಲಾಗಿತ್ತು.
ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಎಚ್‌ಡಿಕೆ, ದೇವರಾಜ್ ಯಾರು ಎಂಬುದು ನನಗೆ ಗೊತ್ತಿಲ್ಲ. ಸಭೆ ರದ್ದಾಗಿರುವ ಬಗ್ಗೆಯೂ ಮಾಹಿತಿಯಿಲ್ಲ. ಸಭೆ ರದ್ದಾಗಿದ್ದರೂ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ. ಹಾಸನದಲ್ಲಿ ಬಿಜೆಪಿ ವಿರುದ್ಧ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವ ಸಾಮರ್ಥ್ಯ ಪಕ್ಷಕ್ಕಿದೆ ಅನ್ನೋದನ್ನು ತೋರಿಸಬೇಕು. ಟಿಕೆಟ್ ವಿಚಾರದಲ್ಲಿ ನನ್ನ ತೀರ್ಮಾನವೇ ಅಂತಿಮ. ನಾನು ಇಷ್ಟು ದಿನ ಹಾಸನ ಕ್ಷೇತ್ರದ ವಿಷಯದಲ್ಲಿ ಎಂಟ್ರಿ ಆಗಿರಲಿಲ್ಲ. ಈಗ ಎಂಟ್ರಿ ಆಗಿದ್ದೇನೆ. ಸಭೆ ಮುಂದು ಹಾಕಲು ಪಕ್ಷದವರೇ ಯಾರೋ ಯತ್ನಿಸಿರಬಹುದು, ಗೊತ್ತಿಲ್ಲ ಎಂದು ಕಿಡಿ ಕಾರಿದರು. 15-20 ವರ್ಷಗಳಿಂದ ನನಗೆ ಇಷ್ಟವಿಲ್ಲದಿದ್ದರೂ ಪಕ್ಷದಲ್ಲಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಅಂತಹ ತಪ್ಪು ಮತ್ತೆ ಮಾಡುವುದಿಲ್ಲ ಎಂದೂ ಕುಮಾರಸ್ವಾಮಿ ಹೇಳಿದರು.
ರಾಜಕೀಯ ಪಕ್ಷಗಳಿಗೆ ದೇಶದ ನಿಜವಾದ ಬಡತನದ ಬಗ್ಗೆ ಅರಿವಿಲ್ಲ: ಎಚ್.ಡಿ.ಕುಮಾರಸ್ವಾಮಿ
ಇಂದು ಸಭೆ ಇದೆಯೋ ಇಲ್ಲವೋ, ಕುತೂಹಲ: ಭವಾನಿ ರೇವಣ್ಣ ಹಾಗೂ ಸ್ವರೂಪ್ ನಡುವೆ ಪೈಪೋಟಿ ಇರುವ ಹಾಸನದ ಜೆಡಿಎಸ್ ಟಿಕೆಟ್ ಗೊಂದಲ ಬಗೆಹರಿಸಲು ಭಾನುವಾರ ಕ್ಷೇತ್ರದ 300 ಮುಖಂಡರ ಸಭೆ ನಡೆಸಿ ನಿರ್ಧರಿಸುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ಶನಿವಾರ ಸಂಜೆ ದಿಢೀರ್ ಆ ಸಭೆ ರದ್ದಾಗಿರುವ ಪ್ರಕಟಣೆ ಬಂದಿತು. ಆ ನಿರ್ಧಾರ ಯಾರು ಕೈಗೊಂಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಹೀಗಾಗಿ ಹಾಸನದ ವಿಷಯದಲ್ಲಿ ದೇವೇಗೌಡರ ಕುಟುಂಬದಲ್ಲಿ ಮಾಹಿತಿ ವಿನಿಮಯದ ಕೊರತೆಯಿರುವುದು ಸ್ಪಷ್ಟವಾಗಿದೆ.
ಇಂದು ತುರ್ತು ಸಭೆ: ಕಾರ್ಯಕರ್ತರೇ ಜೆಡಿಎಸ್ ಕುಟುಂಬ. ಹಾಸನ ಟಿಕೆಟ್ ವಿಚಾರ ಕಾರ್ಯಕರ್ತರ ಅಭಿಪ್ರಾಯವೇ ಅಂತಿಮ. ಭಾನುವಾರ ಬೆಂಗಳೂರಿನಲ್ಲಿ ತುರ್ತು ಸಭೆ ಕರೆದಿದ್ದೇನೆ. ಅಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಪಂಚರತ್ನ ರಥಯಾತ್ರೆಯ ಅಂಗವಾಗಿ ಶೃಂಗೇರಿಗೆ ಶನಿವಾರ ಆಗಮಿಸಿದ್ದ ಅವರು ವೈಕುಂಠಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸನದಲ್ಲಿ ಸಾಮಾನ್ಯ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಿ, ಬಿಜೆಪಿಯನ್ನು ಸೋಲಿಸುವ ತಾಕತ್ತು ನಮಗಿದೆ ಎಂದರು.
ಜೆ.ಪಿ.ನಡ್ಡಾ ಬೆನ್ನಲ್ಲೇ ಶೃಂಗೇರಿ ಮಠಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ
ಹಾಸನದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಅಲ್ಲಿನ ಜನ ನಿರ್ಧರಿಸುತ್ತಾರೆ. ನಮ್ಮ ಕಾರ್ಯಕರ್ತರು ಸಹ ನಮ್ಮ ಕುಟುಂಬದವರು ಎಂದುಕೊಂಡಿರುವೆ, ದೇವೇಗೌಡರ ಆಸೆಯಂತೆ ಸ್ವತಂತ್ರವಾಗಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಜನರು ರೈತರ ಸಮಸ್ಯೆ ಬಗೆಹರಿಸಬೇಕಿದೆ, ಇದಕ್ಕಾಗಿ ನಾನು ಹೋರಾಟ ಮಾಡುತ್ತಿರುವೆ ಎಂದ ಅವರು, ಹಾಸನ ರಾಜಕೀಯಕ್ಕೆ ಸಂಬಂಧಿಸಿದಂತೆ ಸಮಾನ ಮನಸ್ಕರ ಅಭಿಪ್ರಾಯ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.