
ಬೆಂಗಳೂರು (ಏ.18) ಕರ್ನಾಟಕದ ಮುಸ್ಲಿಂ ಸಮುದಾಯ ಮತ್ತು ಅದರ ನಾಯಕರನ್ನು ಕಾಂಗ್ರೆಸ್ ಪಕ್ಷವು ನಡೆಸಿಕೊಳ್ಳುತ್ತಿರುವ ರೀತಿಯನ್ನು ರಾಜ್ಯದ ವಿವಿಧ ಮುಸ್ಲಿಂ ಸಂಘಟನೆಗಳು, ಒಕ್ಕೂಟಗಳು ಮತ್ತು ಪ್ರಮುಖ ಪ್ರತಿನಿಧಿಗಳು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪ್ರಮುಖ ಮುಖಂಡರು ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯದ ಒಗ್ಗಟ್ಟಿನ ಬೆಂಬಲವೇ ಪ್ರಮುಖ ಕಾರಣ. ಆದರೆ ಅಧಿಕಾರಕ್ಕೆ ಬಂದ ಮೇಲೆ ಸಮುದಾಯಕ್ಕೆ ರಾಜಕೀಯ ನೇಮಕಾತಿ ಹಾಗೂ ಅಧಿಕಾರಶಾಹಿಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದೆ ಅವಮಾನಿಸಲಾಗುತ್ತಿದೆ ಎಂದು ಸಂಘಟನೆಗಳು ಆಕ್ರೋಶ ಹೊರಹಾಕಿವೆ.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿ ಬರಲು ಇಲ್ಲಿನ ಮುಸ್ಲಿಮರು ಅದಕ್ಕೆ ನೀಡಿರುವ ಒಗ್ಗಟ್ಟಿನ ಬೆಂಬಲ ಪ್ರಮುಖ ಕಾರಣ. ಆದರೆ ಕಾಂಗ್ರೆಸ್ ಪಕ್ಷ ಮತ್ತು ಅದರ ಸರಕಾರ ಮುಸ್ಲಿಮರನ್ನು ಘನತೆಯೊಂದಿಗೆ ನಡೆಸಿಕೊಳ್ಳುತ್ತಿಲ್ಲ ಎಂಬುದು ಅದರ ಇತ್ತೀಚಿನ ನಡೆಗಳಿಂದ ಸ್ಪಷ್ಟವಾಗಿದೆ. ತನ್ನನ್ನು ಬೆಂಬಲಿಸಿ ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಕೊಡುಗೆ ನೀಡಿರುವ ಮುಸ್ಲಿಮ್ ಸಮುದಾಯಕ್ಕೆ ರಾಜಕೀಯ ನೇಮಕಾತಿಗಳಲ್ಲಿ ಹಾಗೂ ಅಧಿಕಾರ ಶಾಹಿಯ ಪ್ರಮುಖ ಹುದ್ದೆಗಳಲ್ಲೂ ಸೂಕ್ತ ಪ್ರಾತಿನಿಧ್ಯ ನೀಡದ ಕಾಂಗ್ರೆಸ್ ಈಗ ಮುಸ್ಲಿಮ್ ಸಮುದಾಯವನ್ನು ಮತ್ತೆ ಮತ್ತೆ ಅವಮಾನಿಸುತ್ತಿದೆ ಎಂಬ ನೋವಿನ ಭಾವನೆ ಸಮುದಾಯದಲ್ಲಿ ತೀವ್ರವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ದಾವಣಗೆರೆ ಉಪ ಚುನಾವಣೆ ಹಾಗೂ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಕಾಂಗ್ರೆಸ್ ಪಕ್ಷವು ಮುಸ್ಲಿಮರಿಗೆ ಒಂದು ಸ್ಪಷ್ಟ ಸಂದೇಶ ನೀಡಿದಂತಿದೆ. ಅದೇನೆಂದರೆ, 'ವು ನಮಗೆ ಒಂದು ವೋಟ್ ಬ್ಯಾಂಕ್ ಮಾತ್ರ. ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕುವುದು ಮಾತ್ರ ನಿಮ್ಮ ಕೆಲಸ. ಕ್ಷದಲ್ಲಿ ಹುದ್ದೆ, ಸ್ಥಾನಮಾನ, ಪ್ರಾತಿನಿಧ್ಯ, ಅವಕಾಶ ನಾವು ನೀಡುವ ಭಿಕ್ಷೆ. ಒಂದೊಮ್ಮೆ ನಿಮ್ಮ ಹಕ್ಕು ಅಥವಾ ನಿಮಗಾದ ಅನ್ಯಾಯದ ಕುರಿತು ಪ್ರಶ್ನೆ ಕೇಳಿದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂಬುದು ಈ ಪಕ್ಷಪಾತಿ ಧೋರಣೆಯನ್ನು ಕರ್ನಾಟಕದ ಮುಸ್ಲಿಮ್ ಸಮುದಾಯ ಇನ್ನು ಮುಂದೆ ಸಹಿಸುವುದಿಲ್ಲ ಎಂದು ಎಚ್ಚರಿಸಿದೆ.
ಮುಸ್ಲಿಮ್ ಸಮುದಾಯದ ಕೆಲ ನಾಯಕರನ್ನು ಪಕ್ಷ ವಿರೋಧಿ ಚಟುವಟಿಕೆಯ ಕಟಕಟೆಯಲ್ಲಿ ನಿಲ್ಲಿಸಿ, ಶಿಸ್ತಿನ ಪಾಠ ಹೇಳುತ್ತಿರುವ ಕಾಂಗ್ರೆಸ್ ಪಕ್ಷ, ಈ ಹಿಂದೆ ಇದೇ ರೀತಿಯ ಸಂದರ್ಭಗಳಲ್ಲಿ ಪಕ್ಷದಿಂದ ತಗೆದುಕೊಳ್ಳಲಾದ ಶಿಸ್ತು ಕ್ರಮಗಳೇನು ಎಂಬುದನ್ನು ಸ್ಪಷ್ಟಪಡಿಸಬೇಕು. ಇಲ್ಲದಿದ್ದಲ್ಲಿ , ಪಕ್ಷದ ಶಿಸ್ತು ನಿಯಮಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಅನ್ವಯವಾಗುತ್ತಿವೆಯೇ ಎಂಬ ಗಂಭೀರ ಪ್ರಶ್ನೆ ಉದ್ಭವಿಸುತ್ತದೆ. ಇದು ಕೇವಲ ಕೆಲವು ವ್ಯಕ್ತಿಗಳ ವಿಚಾರವಲ್ಲ. ಇಡೀ ಮುಸ್ಲಿಮ್ ಸಮುದಾಯದ ಘನತೆಯ ವಿಷಯವಾಗಿದೆ. ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ಇದನ್ನು ಕೇವಲ ರಾಜಕೀಯ ನಿರ್ಧಾರವೆಂದು ಸಮರ್ಥಿಸಲು ಸಾಧ್ಯವಿಲ್ಲ ಎಂದಿರುವ ಸಂಘಟನೆಗಳು.
ಸ್ವಾರ್ಥಿ ಮುಸ್ಲಿಂ ನಾಯಕರಿಗೂ ಎಚ್ಚರಿಕೆ
ಮುಸ್ಲಿಮರು ಪ್ರಾತಿನಿಧ್ಯ ಕೇಳಿದ್ದೇ ತಪ್ಪು ಎಂಬಂತೆ ಕಾಂಗ್ರೆಸ್ ನಲ್ಲಿ ಬಿಂಬಿಸಲಾಗುತ್ತಿದೆ. ನ್ಯಾಯಯುತವಾಗಿ ನೀಡಲೇಬೇಕಿದ್ದ ಟಿಕೆಟ್ ನೀಡದೆ ಪಕ್ಷದ ಪರವಾಗಿ ಪ್ರಚಾರ ಮಾಡಲು ಹೇಳಿ, ನಂತರ ಕ್ಷುಲ್ಲಕ ಕಾರಣಗಳನ್ನು ನೀಡಿ ಶಿಸ್ತು ಕ್ರಮ ಕೈಗೊಳ್ಳುವುದು ನ್ಯಾಯಸಮ್ಮತವಲ್ಲ. 'ನೀವು ನಾವು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು' ಎಂಬ ಕಾಂಗ್ರೆಸ್ ಪಕ್ಷದ ಈ ಧೋರಣೆ ತೀವ್ರ ಖಂಡನೀಯವಾಗಿದೆ. ಸಾಲದ್ದಕ್ಕೆ ಪಕ್ಷದಲ್ಲಿರುವ ಸಮುದಾಯದ ನಾಯಕರನ್ನೇ ಒಬ್ಬರ ವಿರುದ್ಧ ಒಬ್ಬರನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಮಾಡುತ್ತಿದ್ದಾರೆ ಎಂಬ ಅನುಮಾನವೂ ಸಮುದಾಯವನ್ನು ಕಾಡುತ್ತಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ಕೆಲವು ಮುಖಂಡರೂ ತಮ್ಮ ಸಮುದಾಯದ ಜೊತೆಗಿನ ಪಕ್ಷದ ತಾರತಮ್ಯ ನೀತಿಯನ್ನು ವಿರೋಧಿಸದೆ, ಸಮುದಾಯದ ಪರವಾಗಿ ಪಕ್ಷದ ವೇದಿಕೆಯಲ್ಲಿ ಧ್ವನಿ ಎತ್ತಿದ ನಾಯಕರ ಬೆಂಬಲಕ್ಕೆ ಗಟ್ಟಿಯಾಗಿ ನಿಲ್ಲದೆ ತಮ್ಮ ಸ್ವಾರ್ಥ ಸಾಧನೆಗೆ ಮುಂದಾಗುವಂತಹ ನಡೆ ಅನುಸರಿಸಿರುವುದು ಖಂಡಿಸುತ್ತೇವೆ ಎಂದಿರುವ ಸಂಘಟನೆಗಳು.
ಕೆಲವು ಸಮುದಾಯಗಳ ನಾಯಕರು ಎಷ್ಟು ದೊಡ್ಡ ಪ್ರಮಾದ ಮಾಡಿದರೂ ಯಾವುದೇ ಕ್ರಮವಿಲ್ಲ, ನೇರವಾಗಿ ಪಕ್ಷ ವಿರೋಧಿ ಹೇಳಿಕೆ ಕೊಟ್ಟರೂ ಅವರಿಗೆ ಶಿಸ್ತು ಕ್ರಮದ ಬದಲಿಗೆ ಬಹುಮಾನ, ಇನ್ನಷ್ಟು ಗೌರವ, ಆದರೆ ಒಂದು ನಿರ್ದಿಷ್ಟ ಸಮುದಾಯದ ನಾಯಕರು ಪಕ್ಷದ ಫರ್ಮಾನು ಪಾಲಿಸುವಲ್ಲಿ ಒಂದಿಷ್ಟು ಹೆಚ್ಚು ಕಡಿಮೆಯಾದರೂ ಅವರ ತಲೆದಂಡ - ಇದು ನ್ಯಾಯವಲ್ಲ, ಇದು ಸ್ವೀಕಾರಾರ್ಹವಲ್ಲ. ಈ ರೀತಿಯ ತಾರತಮ್ಯದ ನಡೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾನಿಕಾರಿಯಾಗಲಿದೆ.
ಇದೇ ಧೋರಣೆ ಮುಂದುವರಿದರೆ ಮುಂದಾಗುವ ತೀವ್ರ ರಾಜಕೀಯ ಹಿನ್ನಡೆಗೆ ಪಕ್ಷದ ಈ ರೀತಿಯ ನಿರ್ಧಾರಗಳೇ ಕಾರಣವಾಗಬಹುದು. ರಾಜ್ಯದಲ್ಲಿ ಸಂವಿಧಾನದ ಮೌಲ್ಯಗಳ ಪ್ರಕಾರ ನಡೆಯುವ ಜಾತ್ಯತೀತ ಸರಕಾರ ಬರಬೇಕು, ಜನರನ್ನು ವಿಭಜಿಸುವ ಕೋಮುವಾದಿಗಳಿಗೆ ಅಧಿಕಾರ ಸಿಗಬಾರದು ಎಂಬ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಮುಸ್ಲಿಮರು ಒಗ್ಗಟ್ಟಾಗಿ ಬೆಂಬಲಿಸಿ ಮತ ನೀಡಿದ್ದಾರೆ. ದೇಶದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ಹಾಗು ಅವುಗಳನ್ನು ಬಲಪಡಿಸಲು ಮುಸ್ಲಿಮರು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಆದರೆ ಅದನ್ನೇ ಮುಸ್ಲಿಮರ ದೌರ್ಬಲ್ಯ, ಅವರಿಗೆ ಬೇರೆ ಆಯ್ಕೆಗಳೇ ಇಲ್ಲ ಎಂದು ಕಾಂಗ್ರೆಸ್ ತಿಳಿದುಕೊಂಡರೆ ಅದು ಮುಂದಿನ ದಿನಗಳಲ್ಲಿ ಆ ಪಕ್ಷಕ್ಕೆ ರಾಜಕೀಯವಾಗಿ ಬಹಳ ದುಬಾರಿಯಾಗಲಿದೆ ಎಂದು ಎಚ್ಚರಿಕೆ ನೀಡಿವೆ.
ರಾಜಕೀಯ ಲೆಕ್ಕಾಚಾರದ ಹೆಸರಿನಲ್ಲಿ ಒಂದು ಸಮುದಾಯ ಮತ್ತು ಅದರ ನಾಯಕರನ್ನು ಈ ರೀತಿ ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮುಂದೆ ಇಂತಹ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳದಂತೆ ಹಾಗೂ ಈಗಿನ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾವು ಆಗ್ರಹಿಸುತ್ತೇವೆ.
ಪ್ರಮುಖ ಸಹಿದಾರರು:
ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ, ಅಧ್ಯಕ್ಷರು, ಮುಸ್ಲಿಮ್ ಮುತ್ತಹಿದಾ ಕೌನ್ಸಿಲ್, ವಿಜಯಪುರ.
ಅಬ್ದುಲ್ ಖದೀರ್ ಸಾಹೇಬ್, ಅಧ್ಯಕ್ಷರು, ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳು, ಬೀದರ್.
ಮೌಲಾನಾ ಶಬ್ಬೀರ್ ಅಹ್ಮದ್ ನದ್ವಿ, ಅಧ್ಯಕ್ಷರು, ವೆಲ್ಫೇರ್ ಆಫ್ ಹ್ಯುಮಾನಿಟಿ ಫೌಂಡೇಶನ್, ಬೆಂಗಳೂರು.
ಕೆ ಎಸ್ ಮೊಹಮ್ಮದ್ ಮಸೂದ್, ಅಧ್ಯಕ್ಷರು, ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ, ಮಾಜಿ ಅಧ್ಯಕ್ಷರು, ರಾಜ್ಯ ಅಲ್ಪಸಂಖ್ಯಾತ ಆಯೋಗ, ಮಾಜಿ ಮುಖ್ಯ ಸಚೇತಕರು, ವಿಧಾನ ಪರಿಷತ್.
ಹಾಜಿ ಮೊಹಮ್ಮದ್ ಹನೀಫ್, ಪ್ರಧಾನ ಕಾರ್ಯದರ್ಶಿ, ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ.
ಮುಹಮ್ಮದ್ ಮೌಲಾ, ಅಧ್ಯಕ್ಷರು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ.
ಯಾಸೀನ್ ಮಲ್ಪೆ, ನಿಕಟಪೂರ್ವ ಅಧ್ಯಕ್ಷರು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ.
ಮೌಲಾನಾ ಅಬ್ದುರ್ರಕೀಬ್ ನದ್ವಿ, ಪ್ರಧಾನ ಕಾರ್ಯದರ್ಶಿ, ಮಜ್ಲಿಸ್ ಎ ಇಸ್ಲಾಹ್ ವ ತಂಝೀಮ್, ಭಟ್ಕಳ.
ಅಶ್ರಫ್ ಅಲಿ ಬಶೀರ್, ಸಂಚಾಲಕರು, ಮುಸ್ಲಿಮ್ ವಾಯ್ಸ್ ಆಫ್ ಕರ್ನಾಟಕ. ಹುಬ್ಬಳ್ಳಿ.
ಡಾ. ಅಬ್ದುಲ್ ಕರೀಂ, ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ. ಹುಬ್ಬಳ್ಳಿ.
ಕೆ. ಅಶ್ರಫ್ ಅಧ್ಯಕ್ಷರು, ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ..
ಮುಹಮ್ಮದ್ ಹನೀಫ್, ಕಾರ್ಯದರ್ಶಿ, ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.
ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ.
ಮುಖಂಡರು, ಸುನ್ನಿ ಯುವಜನ ಸಂಘ ಕರ್ನಾಟಕ.
ಹಾಜಿ ಅಬೂಬಕರ್ ನೇಜಾರ್.ಜಿಲ್ಲಾಧ್ಯಕ್ಷರು,ಸುನ್ನಿ ಸಂಯುಕ್ತ ಜಮಾತ್,ಉಡುಪಿ ಜಿಲ್ಲೆ.
ಮೊಹಮ್ಮದ್ ರಫೀಕ್ಜಿ ಜಿಲ್ಲಾಧ್ಯಕ್ಷರು ಕರ್ನಾಟಕ ಮುಸ್ಲಿಂ ಜಮಾತ್ಉ ಡುಪಿ ಜಿಲ್ಲೆ
ರಫಿವುದ್ದೀನ್ ಕುದ್ರೋಳಿ, ಅಧ್ಯಕ್ಷರು, ಯುನಿವೆಫ್ ಮಂಗಳೂರು.
ಕಾಸಿಮ್ ಶುಐಬುರ್ರಹ್ಮಾನ್ ಖುರೇಷಿ, ಅಧ್ಯಕ್ಷರು, ಅಖಿಲ ಭಾರತ ಜಮೀಯತುಲ್ ಖುರೇಷಿ, ಕರ್ನಾಟಕ.
ಅಫ್ಝಲ ಮಹ್ಮೂದ್, ಕಾರ್ಯದರ್ಶಿ, ಕರ್ನಾಟಕ ಮುಸ್ಲಿಮ್ ಪೊಲಿಟಿಕಲ್ ಫೋರಮ್. ಗುಲ್ಬರ್ಗ.
ಜಬ್ಬಾರ್ ಕಲಬುರ್ಗಿ, ಅಧ್ಯಕ್ಷರು, ಕರ್ನಾಟಕ ಮುಸ್ಲಿಂ ಯುನಿಟಿ. ಬಾಗಲಕೋಟೆ.
ನಿಸಾರ್ ಅಹಮದ್, ರಾಜ್ಯ ಸಂಯೋಜಕರು, ಎದ್ದೇಳು ಕರ್ನಾಟಕ. ಮಂಗಳೂರು.
ನಕ್ವಾ ಯಾಹ್ಯ ಮಲ್ಪೆ ಅಧ್ಯಕ್ಷರು, ನಮ್ಮ ನಾಡ ಒಕ್ಕೂಟ, ಉಡುಪಿ ಜಿಲ್ಲೆ.
ಅಫ್ಸರ್, ಅಧ್ಯಕ್ಷರು, ಕರ್ನಾಟಕ ಸೌಹಾರ್ದ ಒಕ್ಕೂಟ. ರಿ. ಮಂಡ್ಯ.
ಅಡ್ವೋಕೇಟ್ ಅಬ್ದುಲ್ ಜಬ್ಬಾರ್ ಗೋಲ, ಉಪಾಧ್ಯಕ್ಷರು, ಜೋಯ್ಂಟ್ ಆಕ್ಷನ್ ಕಮಿಟಿ, ಗುಲ್ಬರ್ಗ..
ಅಡ್ವೋಕೇಟ್ ಅನ್ ಷಾದ್ ಪಾಳ್ಯ, ರಾಜ್ಯ ಸಮಿತಿ ಸದಸ್ಯರು, ಅಖಿಲ ಭಾರತ ವಕೀಲರ ಒಕ್ಕೂಟ, ಕರ್ನಾಟಕ. ಹಾಗೂ ಮುಖಂಡರು ಹಾಸನ ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ.
ಹಾಜಿ ಸುಲೇಮಾನ್ ಸಾಹೇಬ್ ಅಧ್ಯಕ್ಷರು. ತೀರ್ಥಹಳ್ಳಿ ತಾಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟ.
ಮುಜಾಹಿದ್ ಪಾಷ, ಅಲ್ ಜಮಾತುಲ್ ಖುರೈಷ್ ಟ್ರಸ್ಟ್, ಬಸವಕಲ್ಯಾಣ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.