ಬೀಗರಿಗೆ ಟಿಕೆಟ್ ತಪ್ಪಿಸಿದ ಶೆಟ್ಟರ್ ಸ್ವಾರ್ಥ ರಾಜಕಾರಣಿ ಎಂಬ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಸಂಸದೆ ಮಂಗಲಾ ಅಂಗಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ (ಏ.01): ಬೀಗರಿಗೆ ಟಿಕೆಟ್ ತಪ್ಪಿಸಿದ ಶೆಟ್ಟರ್ ಸ್ವಾರ್ಥ ರಾಜಕಾರಣಿ ಎಂಬ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಸಂಸದೆ ಮಂಗಲಾ ಅಂಗಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಹಿರಿಯರಾದ ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ ಅವರಿಂದ ಸಚಿವ ಸ್ಥಾನ ಕಿತ್ತುಕೊಂಡವರು ನೀವು. ನಮ್ಮ ಬೀಗರೂ ಆಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕುರಿತು ಕೀಳು ಹೇಳಿಕೆ ನೀಡುವುದನ್ನು ನೀವು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಪಕ್ಷದ ಹೈಕಮಾಂಡ್ ತೀರ್ಮಾನದಂತೆ ಮಾಜಿ ಶೆಟ್ಟರ್ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ನಮ್ಮ ಬೀಗರ ಕುರಿತು ಹೆಬ್ಬಾಳ್ಕರ್ ಹಗುರವಾಗಿ ಮಾತನಾಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ದಿ.ಸುರೇಶ ಅಂಗಡಿ ಅವರು ಬಿಜೆಪಿ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ನಡೆದುಕೊಂಡವರು. ಅವರ ಅಕಾಲಿಕ ನಿಧನದಿಂದ ಬಿಜೆಪಿ ನನಗೆ ಟಿಕೆಟ್ ನೀಡಿತ್ತು. ಆದರೆ, ಈ ಬಾರಿ ಶೆಟ್ಟರ್ ಅವರಿಗೆ ಟಿಕೆಟ್ ನೀಡುತ್ತೇವೆ ಎಂದಾಗ ಸಂತೋಷದಿಂದ ಒಪ್ಪಿಕೊಂಡಿದ್ದೇನೆ. ಹೀಗಾಗಿ ಅಂಗಡಿ ಕುಟುಂಬಕ್ಕೆ ಟಿಕೆಟ್ ತಪ್ಪಿಸಿ ಶೆಟ್ಟರ್ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ಎನ್ನುವ ಹೇಳಿಕೆಯನ್ನು ಹೆಬ್ಬಾಳ್ಕರ್ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಎರಡನೇ ಬಾರಿ ಶಾಸಕಿಯಾಗಿದ್ದರೂ ಜಿಲ್ಲೆಯಲ್ಲಿ ಸಾಕಷ್ಟು ಹಿರಿಯ ಕಾಂಗ್ರೆಸ್ ಶಾಸಕರನ್ನು ಬದಿಗೊತ್ತಿ ಸಚಿವ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ನಾನು ಈ ವಿಚಾರ ಎಲ್ಲೂ ಪ್ರಸ್ತಾಪಿಸಿರಲಿಲ್ಲ. ಹೆಬ್ಬಾಳ್ಕರ್ ವೈಯಕ್ತಿಕ ಹೇಳಿಕೆ ಬಿಟ್ಟು ರಾಜಕಾರಣ ಮಾಡುವುದು ಸೂಕ್ತ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
undefined
ಎನ್‌ಡಿಆರ್‌ಎಫ್ ಹಣಕ್ಕಾಗಿ ಸುಪ್ರೀಂಗೆ ಹೋಗಿರುವುದು ರಾಜಕೀಯ ತಂತ್ರಗಾರಿಕೆ: ಬೊಮ್ಮಾಯಿ
ಮಂಗಲಾಗೆ ರಾಜಕೀಯ ಅನುಭವ ಕಡಿಮೆ: ಬಿಜೆಪಿ ಸಂಸದೆ ಮಂಗಲಾ ಅಂಗಡಿ ಅವರಿಗೆ ರಾಜಕೀಯ ಅನುಭವ ಕಡಿಮೆ ಇದೆ. ಜಿಲ್ಲಾ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಿ ನನು ಸಚಿವೆಯಾಗಿಲ್ಲ. ಮಹಿಳಾ ಕೋಟಾದಡಿ ಸಚಿವೆಯಾಗಿರುವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು ನೀಡಿದ್ದಾರೆ ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಲಾ ಅಂಗಡಿ ದಿ.ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದ ಬಳಿಕ ಉಪಚುನಾವಣೆಯಲ್ಲಿ ಕೇವಲ ಮೂರು ಸಾವಿರ ಮತಗಳಿಂದ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದರು. ಪಾಪ ಅವರಿಗೆ ರಾಜಕೀಯ ಅನುಭವ ಕಡಿಮೆ ಇದೆ.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುತ್ತಾರೆ. ಮಂಡ್ಯದಲ್ಲಿ ಸುಮಲತಾ ಹಾಗೂ ಬೆಳಗಾವಿಯಲ್ಲಿ ಮಂಗಲಾ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಬೀಗರೇ ಟಿಕೆಟ್ ತಪ್ಪಿಸಿದರು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ, ನಾನು ಹೇಳುತ್ತಿಲ್ಲ. ಮಂಗಲಾ ಅಕ್ಕನವರಿಗೆ ಯಾರೋ ಬರೆದುಕೊಟ್ಟಿದ್ದನ್ನು ಹೇಳಿರಬೇಕು ಎಂದು ಹೇಳಿದರು. ಬಿಜೆಪಿಯಲ್ಲಿ ಹಾಲಿ ಸಂಸದೆ ಮಂಗಲಾ ಅಂಗಡಿ ಅವರ ತರುವಾಯ ಬೇರೆಯವರಿಗೆ ಟಿಕೆಟ್ ಕೊಡುವುದಾಗಿದ್ದರೆ ಸ್ಥಳೀಯ ಬಿಜೆಪಿ ನಾಯಕರಿಗೆ ಕೊಡಬೇಕಿತ್ತು. ಅವರಿಗೆ ಸಹೋದರಿ ಮಂಗಲಾ ಬೆಂಬಲ ಸೂಚಿಸಬೇಕಿತ್ತು. ಆದರೆ, ಬೀಗರಾದ ಜಗದೀಶ ಶೆಟ್ಟರ್ ಅವರನ್ನೇ ಯಾಕೆ ಬೆಂಬಲಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ, ಸರ್ಕಾರಕ್ಕೇ ಗ್ಯಾರಂಟಿಯೂ ಇಲ್ಲ: ಪ್ರಲ್ಹಾದ್ ಜೋಶಿ
ಪಕ್ಷದಲ್ಲಿ ಎಷ್ಟೋ ಜನ ಆಕಾಂಕ್ಷಿಗಳಿದ್ದರು. ಅವರಿಗೆ ಬೆಂಬಲಿಸಿದ್ದರೆ ನಾನು ಶಹಬ್ಬಾಶ್ ಎನ್ನುತ್ತಿದ್ದೆ. ಆದರೆ, ಈಗ ಅವರು ನೀಡಿರುವ ಹೇಳಿಕೆ ಜನರ ದಿಕ್ಕು ತಪ್ಪಿಸುವುದಾಗಿದೆ ಎಂದು ಕಿಡಿಕಾರಿದರು. ಜಗದೀಶ ಶೆಟ್ಟರ್ ಬೆಳಗಾವಿ ನನ್ನ ಕರ್ಮಭೂಮಿ ಎಂದು ಹೇಳುತ್ತಿದ್ದಾರೆ. ಬೆಳಗಾವಿ ಜನರು ಅಷ್ಟೊಂದು ಮುಗ್ದರೆಂದು ತಿಳಿದಿದ್ದಾರಾ ಅವರು. ಇವರು ಎಲ್ಲೋ ಬಂದು ಏನೋ ಆಗಿ ಈಗ ಕರ್ಮಭೂಮಿ ಎನ್ನುವ ಮೊದಲು ಅವರ ವಿಳಾಸ ಎಲ್ಲಿದೆ ಎನ್ನುವುದನ್ನು ಹೇಳಲಿ. ಆ ಮೇಲೆ ಕರ್ಮಭೂಮಿ ಎಂದು ಹೇಳಲಿ ಎಂದು ವಾಗ್ದಾಳಿ ನಡೆಸಿದರು. ಗೋಕಾಕ, ಅರಬಾವಿಯಲ್ಲಿ ಈ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬರಲಿದೆ.