
ಚಿಕ್ಕಬಳ್ಳಾಪುರ (ಮಾ.06): ಎಚ್‌ಎನ್ ವ್ಯಾಲಿ ಹಾಗೂ ಕೆಸಿ ವ್ಯಾಲಿಯಿಂದ ಬರುವ ನೀರನ್ನು ಹೆಚ್ಚು ಶುದ್ಧ ಮಾಡಲು 3ನೇ ಹಂತದ ಸಂಸ್ಕರಣೆ ಯೋಜನೆ ಜಾರಿ ಮಾಡದೇ ಇದ್ದಲ್ಲಿ ದೊಡ್ಡಮಟ್ಟದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು. ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿಯ ಸರ್.ಎಂ. ವಿಶ್ವೇಶ್ವರಯ್ಯ ಸಂಭಾಗಣದಲ್ಲಿ ನಡೆದ ದಿಶಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೂರನೇ ಹಂತದ ಸಂಸ್ಕರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಕ್ರಮ ವಹಿಸಬೇಕಿದೆ. ಸುಮಾರು 70-80 ಲಕ್ಷ ಜನರು ಈ ನೀರನ್ನು ಬಳಸುತ್ತಿದ್ದಾರೆ. ಇಲ್ಲಿನ ಶಾಸಕರು ಹಾಗೂ ಸಚಿವರು ಈ ಬಗ್ಗೆ ಹಿಂದೆ ಮಾತಾಡುತ್ತಿದ್ದರು. ಚುನಾಯಿತ ಪ್ರತಿನಿಧಿಗಳಿಗೆ ಕನಿಷ್ಠ ಬದ್ಧತೆ ಇರಬೇಕಾಗುತ್ತದೆ. ಆದ್ದರಿಂದ ಈ ಯೋಜನೆಯನ್ನು ಜಾರಿ ಮಾಡಬೇಕು ಎಂದರು.
2ನೇ ಹಂತದಲ್ಲಿ ಸಂಸ್ಕರಣೆಯಾಗುವ ನೀರು ಕುಡಿಯಲು ಯೋಗ್ಯವಲ್ಲ ಎಂದು ವಿಜ್ಞಾನಿಗಳೇ ಹೇಳಿದ್ದಾರೆ. ಯಾವುದೇ ದೇಶದಲ್ಲಿ ಎರಡನೇ ಹಂತದಲ್ಲಿ ಸಂಸ್ಕರಣೆಯಾಗುವ ನೀರುವ ಕುಡಿಯಲು ಅಥವಾ ಕೃಷಿಗೆ ಬಳಸುವುದಿಲ್ಲ. ಬಿಜೆಪಿ ಸರ್ಕಾರವಿದ್ದಾಗಲೇ ಮೂರನೇ ಹಂತದ ಶುದ್ಧೀಕರಣ ಯೋಜನೆ ಘೋಷಣೆಯಾಗಿತ್ತು. ನನಗೆ ಬದ್ಧತೆ ಇದ್ದಿದ್ದರಿಂದಲೇ ನಾನು ಆ ಯೋಜನೆ ಬಜೆಟ್‌ನಲ್ಲಿ ಬರುವಂತೆ ಮಾಡಿದ್ದೆ. ಈಗ ಕಾಂಗ್ರೆಸ್ ಸರ್ಕಾರ ಅದನ್ನು ಜಾರಿ ಮಾಡಿದರೆ ಅಭಿನಂದಿಸುತ್ತೇನೆ ಎಂದರು.
17ನೇ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶುಭಾಶಯ ಕೋರುತ್ತೇನೆ. ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಎಂದು ಅವರು ಅನ್ನಿಸಿಕೊಳ್ಳುವುದು ಬೇಡ. ಸಾಲವನ್ನು ಕಡಿಮೆ ಮಾಡಿ ಜನರ ಮೇಲಿನ ಆರ್ಥಿಕ ಹೊರೆಯನ್ನು ಇಳಿಸಬೇಕು. ಆರ್‌ಬಿಐ ಹೇಳಿರುವ ಪ್ರಕಾರ, ರಾಜ್ಯದ ಸಾಲ ಆರ್ಥಿಕ ಶಿಸ್ತನ್ನು ಮೀರಲಿದೆ. ಆದರೆ ಇದನ್ನು ರಾಜ್ಯ ಸರಕಾರ ಅಲ್ಲಗಳೆದು ಸಮರ್ಥಿಸಿಕೊಳ್ಳುವುದು ವಿತಂಡವಾದವಾಗುತ್ತದೆ. ಕರ್ನಾಟಕ ಇಂದು ಆರ್ಥಿಕ ಅಶಿಸ್ತಿನಿಂದ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದೇ ಪ್ರಮಾಣದಲ್ಲಿ ಸಾಲ ಮಾಡಿದರೆ ಮುಂದೆ ಬಡ್ಡಿ ಕಟ್ಟಲು ಕೂಡ ಹಣ ಇರುವುದಿಲ್ಲ. ಅಧಿಕಾರಿಗಳು ಹಾಗೂ ನೌಕರರಿಗೂ ಸಂಬಳ ಕೊಡುವುದು ಕಷ್ಟವಾಗುತ್ತದೆ. ಈಗಾಗಲೇ ಅಭಿವೃದ್ಧಿ ಕುಂಠಿತವಾಗಿದೆ ಎಂದರು.
ಈ ಬಾರಿಯ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸಲು ಕೂಡಲೇ ಸಿದ್ಧತೆ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದ ಜಲಜೀವನ್ ಮಿಷನ್‌ನಡಿ ಗುಣಮಟ್ಟದ ಕಾಮಗಾರಿ ನಡೆಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 2019 ರಿಂದ 2025 ರವರೆಗೆ 350 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬಂದಿದೆ. ಈ ಪೈಕಿ 150 ರಿಂದ 170 ಗ್ರಾಮಗಳಲ್ಲಿ ತೀವ್ರ ಕೊರತೆ ಎಂದು ಗುರುತಿಸಲಾಗಿದೆ. 30 ರಿಂದ 40 ಗ್ರಾಮಗಳಿಗೆ ಟ್ಯಾಂಕರ್ ಅಥವಾ ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಡಾ.ಕೆ.ಸುಧಾಕರ್, ಈ ಬಾರಿಯ ಬೇಸಿಗೆಯಲ್ಲಿ ಯಾವುದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬರದಂತೆ ಕ್ರಮ ವಹಿಸಬೇಕಿದೆ. ನೀರು ಕೊರತೆಯಾದ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಸೂಚನೆ ನೀಡಿದರು.
ಜಲಜೀವನ್ ಮಿಷನ್ ಯೋಜನೆಯಡಿ 800 ಕ್ಕೂ ಅಧಿಕ ಗ್ರಾಮಗಳಲ್ಲಿ ಕಾಮಗಾರಿ ಆರಂಭವಾಗಿದೆ. 25 ಗ್ರಾಮಗಳಲ್ಲಿ ಪರಿಶೀಲನೆ ನಡೆದಿದ್ದು, 22 ಕಡೆ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟಾರೆಯಾಗಿ 983 ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, 310 ಕಡೆ ಕಾಮಗಾರಿ ಪ್ರಗತಿಯಲ್ಲಿದೆ. 22 ಕಡೆ ಇನ್ನೂ ಆರಂಭವಾಗಬೇಕಿದೆ. ಕೆಲವೆಡೆ ಅನುದಾನದ ಸಮಸ್ಯೆ, ಟೆಂಡರ್ ವಿಳಂಬವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಎಲ್ಲ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಹಾಗೂ ಕಾಮಗಾರಿ ವಿಳಂಬವಾದರೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಬೇಕು. ಎಲ್ಲ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಂಸದ ಡಾ.ಕೆ.ಸುಧಾಕರ್ ಸಭೆಗೆ ಸೂಚಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು, ಜಿಪಂ ಸಿಇಒ ಡಾ.ವೈ.ನವೀನ್ ಭಟ್, ಎಸ್‌ಪಿ ಕುಶಲ್ ಚೌಕ್ಸೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಮೆಡಿಕಲ್ ಕಾಲೇಜಿನ ಡೀನ್ ಡಾ.ಎಂ.ಎಲ್.ಮಂಜುನಾಥ್ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.