ಮೋಸದ ವಿರುದ್ಧ ಜನ ಮತ ಹಾಕುತ್ತಾರೆ: ಡಿ.ಕೆ.ಸುರೇಶ್‌

By Kannadaprabha NewsFirst Published Nov 2, 2020, 8:38 AM IST
Highlights

ಬಿಜೆಪಿಯವರು ಮನೆ-ಮನೆಗೆ ಹಣ ಹಂಚಲು ಪೊಲೀಸರೇ ಹತ್ತಿರವಿದ್ದು ವ್ಯವಸ್ಥೆ ಮಾಡುತ್ತಿದ್ದಾರೆ| ನಂದಿನಿ ಬಡಾವಣೆಯಲ್ಲಿ ಎಸಿಪಿ ವೆಂಕಟೇಶ್‌ ನಾಯ್ಡು ಅವರೇ ಮುನಿರತ್ನ ಪರ ಚುನಾವಣಾ ಏಜೆಂಟ್‌ ರೀತಿ ಕೆಲಸ| ಕಾಂಗ್ರೆಸ್ ಅಭ್ಯರ್ಥಿ ಕುಸುಮಾರೊಂದಿಗೆ ಸುದ್ದಿಗೋಷ್ಠಿಯಲ್ಲಿ ಸಂಸದ ಡಿ.ಕೆ.ಸುರೇಶ್‌| 

ಬೆಂಗಳೂರು(ನ.02): ಮಾತೆತ್ತಿದರೆ ಆಣೆ-ಪ್ರಮಾಣ ಮಾಡುವ ರಾಜರಾಜೇಶ್ವರಿನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ತಾವು ಮತದಾರರ ಗುರುತಿನ ಚೀಟಿ ಪ್ರಕರಣದಲ್ಲಿ ತಪ್ಪು ಮಾಡಿಲ್ಲ ಎಂದು ತಿರುಪತಿಗೆ ಹೋಗಿ ಆಣೆ ಮಾಡಲಿ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ ಸವಾಲು ಹಾಕಿದ್ದಾರೆ.

"

ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಬೇರೆಯವರನ್ನು ಆಣೆಗೆ ಕರೆಯುವ ಮುನ್ನ ನೀವು ಹೋಗಿ ತಿರುಪತಿ ತಿಮ್ಮಪ್ಪನ ಸನ್ನಿದಿಯಲ್ಲೇ ಆಣೆ ಮಾಡಿ. ಬೇಕಾದರೆ ನಿಮ್ಮ ಜತೆ ನಿಂತಿರುವ ಚಾನೆಲ್‌ನವರನ್ನೇ ಕರೆದುಕೊಂಡು ಹೋಗಿ ಅವರ ಎದುರಿನಲ್ಲೇ ಆಣೆ ಪ್ರಮಾಣ ಮಾಡಿ. ನಿಮ್ಮ ಇನ್ನೊಂದು ಸಿನಿಮಾನ ಜನರಿಗೆ ತೋರಿಸಿ ಎಂದರು.

ಮುನಿರತ್ನ ಅವರ ಬೆಂಬಲಿಗರು ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಹೀಗಿದ್ದರೂ ಪೊಲೀಸ್‌ ಅಧಿಕಾರಿಗಳು ಕ್ರಮ ಕೈಗೊಳ್ಳುವ ಬದಲು ಬಿಜೆಪಿ ಚುನಾವಣಾ ಏಜೆಂಟ್‌ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಉಪ ಚುನಾವಣೆ ಗೆಲುವಿಗೆ ಡಿಕೆ ಶಿವಕುಮಾರ್ ಭರ್ಜರಿ ಪ್ಲಾನ್: ಹಿಂದುತ್ವ ಜಪ..!

ಈ ಚುನಾವಣೆಯಲ್ಲಿ ಮುನಿರತ್ನ ಅವರು ಮಾಡುವ ಎಲ್ಲ ನಾಟಕ, ಅಕ್ರಮಗಳು ಜನರಿಗೆ ಗೊತ್ತಿದೆ. ಈ ಚುನಾವಣೆ ಫಲಿತಾಂಶದಿಂದ ಮೋದಿ, ಯಡಿಯೂರಪ್ಪ ಅವರ ಸರ್ಕಾರಕ್ಕೆ ಧಕ್ಕೆ ಇಲ್ಲ. ಆದರೆ ಚುನಾವಣೆಯು ಒಬ್ಬ ವ್ಯಕ್ತಿಯ ಹಣ, ಅಧಿಕಾರದ ಆಸೆಯಿಂದ ನಡೆಯುತ್ತಿರುವ ಚುನಾವಣೆ. ಹೀಗಾಗಿ ಜನರು ತಮಗೆ ಆದ ಮೋಸದ ವಿರುದ್ಧ ನ.3ರಂದು ಮತ ಚಲಾಯಿಸಲಿದ್ದಾರೆ ಎಂದರು. ಕ್ಷೇತ್ರದಲ್ಲಿ ನಾನು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುವ ಮುನಿರತ್ನ ಅವರು, ಸಿದ್ದರಾಮಯ್ಯ ಅವರು ಹಣ ನೀಡದಿದ್ದರೆ ಅಭಿವೃದ್ಧಿ ಮಾಡುತ್ತಿದ್ದರಾ ಎಂದು ಪ್ರಶ್ನಿಸಿದರು.

ಪೊಲೀಸರು ಬಿಜೆಪಿ ಚುನಾವಣಾ ಏಜೆಂಟ್‌:

ಬಿಜೆಪಿಯವರು ಮನೆ-ಮನೆಗೆ ಹಣ ಹಂಚಲು ಪೊಲೀಸರೇ ಹತ್ತಿರವಿದ್ದು ವ್ಯವಸ್ಥೆ ಮಾಡುತ್ತಿದ್ದಾರೆ. ನಂದಿನಿ ಬಡಾವಣೆಯಲ್ಲಿ ಎಸಿಪಿ ವೆಂಕಟೇಶ್‌ ನಾಯ್ಡು ಅವರೇ ಮುನಿರತ್ನ ಪರ ಚುನಾವಣಾ ಏಜೆಂಟ್‌ ರೀತಿ ಕೆಲಸ ಮಾಡುತ್ತಿದ್ದಾರೆ. ಮುನಿರತ್ನ ನಾನೇ ಮುಂದಿನ ಗೃಹ ಸಚಿವನಾಗಿ ಬರುತ್ತೇನೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಬಿ.ಎಸ್‌.ಯಡಿಯೂರಪ್ಪ ಅವರು ಹಾಲಿ ಗೃಹ ಸಚಿವರನ್ನು ಖಾಲಿ ಮಾಡಿಸುತ್ತಾರಾ ಎಂದು ಪ್ರಶ್ನಿಸಿದರು.

ಈ ಕ್ಷೇತ್ರಕ್ಕೆ ಡಿ.ಕೆ ಸುರೇಶ್‌ ಕೊಡುಗೆ ಏನು ಎಂದು ಚಕ್ರವರ್ತಿಗಳಾದ ಆರ್‌. ಅಶೋಕ್‌ ಕೇಳಿದ್ದಾರೆ. ನೀವು ನಿಮಗಾಗಿ ಹಗಲಿರುಳು ದುಡಿದ ನಿಮ್ಮ ಶಿಷ್ಯ ತುಳಸಿ ಮುನಿರಾಜುಗೌಡ ಅವರ ಕತ್ತು ಹಿಸುಕಿ ಕೊಂದಿದ್ದೀರಿ. ಮುನಿರತ್ನ ಅವರೊಂದಿಗೆ ಗುತ್ತಿಗೆದಾರರಾಗಿ ಹೊಂದಿದ್ದ ಅನುಬಂಧಕ್ಕಾಗಿ ಮುನಿರಾಜುಗೌಡ ಅವರನ್ನು ಬಲಿ ನೀಡಿದ್ದೀರಿ. ನಿಮಗೆ ಧಮ್‌, ತಾಕತ್ತು ಇದ್ದಿದ್ದರೆ ಮುನಿರಾಜುಗೌಡ ಪರ ನಿಲ್ಲಬೇಕಿತ್ತು ಎಂದು ಡಿ.ಕೆ. ಸುರೇಶ್‌ ಸವಾಲು ಹಾಕಿದರು.

ಹೆಣ್ಣಿನ ಬಗ್ಗೆ ಅಷ್ಟು ಕೀಳು ಮಾತು ಯಾಕೆ?

ನಮ್ಮ ಅಭ್ಯರ್ಥಿ ಬಗ್ಗೆ ನೀವು ಮನೆ, ಮನೆಗೆ ಹೋಗಿ ಎಷ್ಟುತೀಕ್ಷ್ಣವಾಗಿ ಮಾತನಾಡಿದ್ದೀರಿ ಎಂಬುದರ ಬಗ್ಗೆ ನಮಗೆ ಗೊತ್ತಿದೆ. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಈ ಪರಿಸ್ಥಿತಿ ಬಂದಿದ್ದರೆ ಇದೇ ಮಾತನ್ನು ಹೇಳುತ್ತಿದ್ದಿರಾ? ನಮ್ಮ ಅಭ್ಯರ್ಥಿ ರಾಜಕೀಯಕ್ಕೆ ಬಂದು ಏನು ತಪ್ಪು ಮಾಡಿದ್ದಾರೆ? ಹೆಣ್ಣಿನ ಬಗ್ಗೆ ಅಷ್ಟುಕೀಳು ಮಾತು ಏಕೆ ಎಂದು ಡಿ.ಕೆ.ಸುರೇಶ್‌ ಮುನಿರತ್ನ ಅವರನ್ನು ಪ್ರಶ್ನಿಸಿದರು.
 

click me!