
ಬೆಂಗಳೂರು(ಮೇ.16): ‘ಮುಂದಿನ ಮುಖ್ಯಮಂತ್ರಿ ಆಯ್ಕೆ ಕುರಿತು ನಡೆದ ರಹಸ್ಯ ಮತದಾನದ ವೇಳೆ ಬಹುತೇಕ ಶಾಸಕರು ನನ್ನ ಪರ ಮತ ಚಲಾಯಿಸಿದ್ದಾರೆ. ನನ್ನನ್ನು ಮುಖ್ಯಮಂತ್ರಿ ಮಾಡುವುದರ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದು ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಹೇಳಿಕೆ ನೀಡಿದ್ದಾರೆ. ಅಲ್ಲದೆ, ‘ನಾನು ಮತ್ತು ಡಿ.ಕೆ. ಶಿವಕುಮಾರ್ ಮಾತ್ರವೇ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಗಳು’ ಎಂದು ಹೇಳುವ ಮೂಲಕ ಬೇರೆ ಯಾರೂ ಸ್ಪರ್ಧೆಯಲ್ಲಿಲ್ಲ ಎಂಬ ಸಂದೇಶವನ್ನೂ ರವಾನಿಸಿದರು.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದರೆ ನೀವು ಸಹಕಾರ ನೀಡುತ್ತೀರಾ? ಎಂಬ ಪ್ರಶ್ನೆಗೆ, ‘ಇದು ಊಹಾತ್ಮಕ ಪ್ರಶ್ನೆ’ ಎನ್ನುವ ಮೂಲಕ ಅಂತಹ ಪರಿಸ್ಥಿತಿಯೇ ಉದ್ಭವಿಸುವುದಿಲ್ಲ ಎಂದು ಹೇಳುವ ಮೂಲಕ ತಾವೇ ಮುಖ್ಯಮಂತ್ರಿಯಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ದಿಲ್ಲಿಯಲ್ಲಿ ಸಿದ್ದು, ಬೆಂಗಳೂರಲ್ಲಿ ಡಿಕೆಶಿ, ಸಿಎಂ ಸ್ಥಾನಕ್ಕೆ ಹೆಚ್ಚಾಯ್ತು ಜಟಾಪಟಿ!
ಮುಖ್ಯಮಂತ್ರಿ ಆಯ್ಕೆ ಸಂಬಂಧ ನಿರ್ಧಾರ ತೆಗೆದುಕೊಳ್ಳಲು ಹೈಕಮಾಂಡ್ ಬುಲಾವ್ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ಎಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ವಿಶೇಷ ವಿಮಾನದಲ್ಲಿ ದೆಹಲಿಗೆ ಹಾರಿದ ಅವರು, ಅದಕ್ಕೂ ಮೊದಲು ಆಂಗ್ಲ ಸುದ್ದಿವಾಹಿನಿಗೆ ಸಂದರ್ಶನ ನೀಡಿ ಮಾತನಾಡಿದರು.
(ಭಾನುವಾರ ನಡೆದ ಶಾಸಕಾಂಗ ಪಕ್ಷದ ಸಭೆ) ಪರಿಸ್ಥಿತಿ ಅವಲೋಕಿಸಿದರೆ ಕಾಂಗ್ರೆಸ್‌ನ ಬಹುತೇಕ ಶಾಸಕರು ನನ್ನ ಪರ ಮತ ಚಲಾಯಿಸಿದ್ದಾರೆ. ರಹಸ್ಯ ಮತದಾನದ ಮೂಲಕ ಶಾಸಕರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದು, ಬಹುತೇಕರು ನನ್ನನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಬೆಂಬಲ ಸೂಚಿಸಿದ್ದಾರೆ ಎಂಬುದು ನನ್ನ ಭಾವನೆ’ ಎಂದು ಹೇಳಿದರು.
‘ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಪ್ರಜಾಪ್ರಭುತ್ವ ಪ್ರಕ್ರಿಯೆಯಂತೆ ಮತ ಚಲಾವಣೆ ಮೂಲಕ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುತೇಕರು ನನ್ನ ಪರ ಮತ ಚಲಾಯಿಸಿದ್ದಾರೆ ಎಂಬುದು ಪರಿಸ್ಥಿತಿ ಅವಲೋಕಿಸಿದರೆ ತಿಳಿದು ಬರುತ್ತದೆ’ ಎಂದರು.
ನೀವು ಮುಖ್ಯಮಂತ್ರಿಯಾದರೆ ಡಿ.ಕೆ. ಶಿವಕುಮಾರ್ ಸಹಕಾರ ನೀಡುತ್ತಾರೆಯೇ ಎಂಬ ಪ್ರಶ್ನೆಗೆ, ‘ಇನ್ನು ನನ್ನ ಹಾಗೂ ಶಿವಕುಮಾರ್ ನಡುವೆ ಉತ್ತಮ ಸಂಬಂಧವಿದೆ. ಜನರಿಗೆ ಕಾಂಗ್ರೆಸ್ ಕೊಟ್ಟಿರುವ ಗ್ಯಾರಂಟಿ ಯೋಜನೆ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿರಲಿದೆ. ವರಿಷ್ಠರು ಕರೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿದ್ದು, ನನಗೆ ಹಾಗೂ ಶಿವಕುಮಾರ್ ಅವರಿಗೆ ಮಾತ್ರ ಆಹ್ವಾನ ಬಂದಿದೆ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.