ವಿಧಾನಸಭೆ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ಬರ ಪರಿಹಾರ ವಿಚಾರದಲ್ಲಿ ದ್ವೇಷ ನೀತಿ ಅನುಸರಿಸುತ್ತಿರುವ ಪ್ರಧಾನಿ ಮೋದಿ ಏ.28ಕ್ಕೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಮೋದಿಗೆ ಗೋ ಬ್ಯಾಕ್ ಹೇಳಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದರು.
ದಾವಣಗೆರೆ (ಏ.28): ವಿಧಾನಸಭೆ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ಬರ ಪರಿಹಾರ ವಿಚಾರದಲ್ಲಿ ದ್ವೇಷ ನೀತಿ ಅನುಸರಿಸುತ್ತಿರುವ ಪ್ರಧಾನಿ ಮೋದಿ ಏ.28ಕ್ಕೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಮೋದಿಗೆ ಗೋ ಬ್ಯಾಕ್ ಹೇಳಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಸೋಲಿನಿಂದಾಗಿ ಬರ ಪರಿಹಾರ ನೀಡುವ ವಿಷಯದಲ್ಲಿ ಮೋದಿ ಸರ್ಕಾರ ದ್ವೇಷ ನೀತಿ ಅನುಸರಿಸುತ್ತಿದೆ. ಆ ಸೋಲಿನ ಸೇಡನ್ನು ರಾಜ್ಯಕ್ಕೆ ಪರಿಹಾರದ ಹಣ ನೀಡದೇ ಸತಾಯಿಸುತ್ತಿದೆ.
ಈ ಹಿನ್ನೆಲೆ ಭಾನುವಾರರಿಂದ ಎರಡು ದಿನ ರಾಜ್ಯ ಪ್ರವಾಸಕ್ಕೆ ಬರುವ ಮೋದಿಗೆ ನಮ್ಮ ಕಾರ್ಯಕರ್ತರು ಗೋ ಬ್ಯಾಕ್ ಹೇಳುತ್ತಾರೆ ಎಂದರು. ಬರ ಪರಿಹಾರ ರೂಪದಲ್ಲಿ ರಾಜ್ಯಕ್ಕೆ ನೀಡಬೇಕಾದ 18,174 ಕೋಟಿ ರು. ಹಣದಲ್ಲಿ 3454 ಕೋಟಿ ರು. ಮಾತ್ರ ಕೇಂದ್ರ ಬಿಡುಗಡೆ ಮಾಡಿದೆ. ಇನ್ನೂ ಬಾಕಿ ಉಳಿದ 14,718 ಕೋಟಿ ರು. ಬರ ಪರಿಹಾರದ ಹಣ ನೀಡಲು ಮೋದಿ ಸರ್ಕಾರ ನಿರಾಕರಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದ ಕಾರಣಕ್ಕೆ ಮೋದಿ ಸರ್ಕಾರವು ಕರ್ನಾಟಕದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕದ ರೈತರ 18,172 ಕೋಟಿ ರು. ಬರ ಬರ ಪರಿಹಾರ ನಿರಾಕರಿಸಿ, ಸೇಡಿನ ರಾಜಕಾರಣಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ. ನರೇಂದ್ರ ಮೋದಿ ನೇತೃತ್ವದ ಡಿಎನ್‌ಎ ಕರ್ನಾಟಕ ಮತ್ತು ಕನ್ನಡ ವಿರೋಧಿ ಎಂಬುದಂತೂ ಇದರಿಂದಲೇ ಸ್ಪಷ್ಟವಾಗಿದೆ. ಕರ್ನಾಟಕಕ್ಕೆ ಬರಬೇಕಾದ ಬಾಕಿ ಬರ ಪರಿಹಾರದ ಹಣಕ್ಕಾಗಿ ಕಾಂಗ್ರೆಸ್ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದೆ. ರಾಜ್ಯಕ್ಕೆ ಬರ ಪರಿಹಾರದ ನ್ಯಾಯವನ್ನು ನ್ಯಾಯಾಲಯದಿಂದಲೇ ಪಡೆಯಲಿದೆ ಎಂದು ಅವರು ಕೇಂದ್ರಕ್ಕೆ ಎಚ್ಚರಿಸಿದರು.
ಸಿಎಂ ಸಿದ್ದರಾಮಯ್ಯ ಬದಲಿಸಲು ‘ಕಾಂಗ್ರೆಸ್’ ಚಿಂತನೆ: ಪ್ರಧಾನಿ ಮೋದಿ
ಕರ್ನಾಟಕಕ್ಕೆ ನ್ಯಾಯವಾಗಿ ಬರಬೇಕಾದ ಬರ ಪರಿಹಾರದ ಹಣ ಸಂಪೂರ್ಣವಾಗಿ ಬಿಡುಗಡೆ ಮಾಡುವವರೆಗೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಕರ್ನಾಟಕ್ಕೆ ಬರಬಾರದು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನರ ಬೆಂಬಲ ಕೇಳುವ ಯಾವುದೇ ನೈತಿಕ ಹಕ್ಕು ಹೊಂದಿಲ್ಲ. ಈ ಅನ್ಯಾಯ ನಮ್ಮ ಪಕ್ಷದ ಅಭ್ಯರ್ಥಿಗಳು, ಶಾಸಕರು, ವಿಧಾನಪರಿಷತ್ ಸದಸ್ಯರು ಜನತಾ ನ್ಯಾಯಾಲಯಕ್ಕೆ ಒಯ್ಯುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಏನು ಮಾಡಬೇಕೆಂಬುದನ್ನೂ ನಿರ್ಧರಿಸುತ್ತಾರೆ ಎಂದು ಹೇಳಿದರು.