'ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಗೌರವವನ್ನೇ ಹಾಳು ಮಾಡುತ್ತಿದ್ದಾರೆ'

Suvarna News   | Asianet News
Published : Jul 31, 2020, 12:40 PM ISTUpdated : Jul 31, 2020, 02:53 PM IST
'ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಗೌರವವನ್ನೇ ಹಾಳು ಮಾಡುತ್ತಿದ್ದಾರೆ'

ಸಾರಾಂಶ

ಡಿಕೆ ಶಿವಕುಮಾರ್ ಗಂಭೀರ ಆರೋಪಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಿರುಗೇಟು| ಹೊಟ್ಟೆ ಕಿಚ್ಚು ಅಸಹನೆ ಇತರರು ಬೆಳೆಯುವುದನ್ನು ನೋಡುವ ವ್ಯವಧಾನವಿಲ್ಲ| ತಮ್ಮ ನೀಚತನವನ್ನು ಮತ್ತೆ ಮತ್ತೆ ಪ್ರದರ್ಶಿಸುವ ಮೂಲಕ ತಾವು ಈ ಹಿಂದಿನ ಶಿವಕುಮಾರ್ ಎಂಬುದನ್ನು ಅವರೇ ಪದೇ ಪದೇ ಸಾಬೀತುಪಡಿಸಿ ಕೊಳ್ಳುತ್ತಿದ್ದಾರೆ|

ಬೆಂಗಳೂರು(ಜು.31): ಬಿಜೆಪಿ ಪಕ್ಷ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ತಮಗೆ ವಿಧಾನಪರಿಷತ್ ಸ್ಥಾನ ಹಾಗೂ ಸಚಿವ ಸ್ಥಾನ ನೀಡುವ ಬಗ್ಗೆ ಆರು ತಿಂಗಳ ಹಿಂದೆಯೇ ದೆಹಲಿ ಹಾಗೂ ರಾಜ್ಯದ ವರಿಷ್ಠರು ಸ್ಪಷ್ಟ ಭರವಸೆ ನೀಡಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ. 

"

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಂಭೀರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಪಿ. ಯೋಗೇಶ್ವರ್ ಅವರು, ಮೂರು ತಿಂಗಳ ಹಿಂದೆಯೇ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಮನೆಗೆ ಕರೆದು ಹೇಳಿದ್ದರು. ನಾನು ಕಳೆದ ಬಾರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಿ ಪರಾಜಿತನಾಗಿದ್ದೇನೆ. ನಾನು ಬಿಜೆಪಿ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದ್ದೇನೆ. ಡಿ. ಕೆ. ಶಿವಕುಮಾರ್ ಸಹೋದರರು ಬಿಜೆಪಿ ಪಕ್ಷ ಹಾಗೂ ನನ್ನ ನಡುವೆ ವಿಷ ಬೀಜ ಬಿತ್ತುವ ವಿಫಲ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರು ಅದರಲ್ಲಿ ಯಶಸ್ವಿಯಾಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. 

 ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಲು ಬಂದಿದ್ದು ನಿಜ; MLC ನಾರಾಯಣ ಸ್ವಾಮಿ!

ವಿಧಾನಸಭೆ ಉಪ ಚುನಾವಣೆ  ಮತ್ತು ಲೋಕಸಭಾ ಚುನಾವಣಾ ಕಾರ್ಯತಂತ್ರಗಳಲ್ಲಿ ಹಾಗೂ ಪಕ್ಷ ಸಂಘಟನೆಯಲ್ಲಿ ನನ್ನದೇ ಆದ ಕೊಡುಗೆಯನ್ನು ಬಿಜೆಪಿ ಪಕ್ಷಕ್ಕೆ ನೀಡುತ್ತಾ ಬಂದಿದ್ದೇನೆ. ಆದರೆ ನಾನು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ ಮಾಧ್ಯಮಗಳ ಮುಂದೆ ಬರುತ್ತಿರಲಿಲ್ಲ. ಇಷ್ಟೆಲ್ಲಾ ಇರುವಾಗ 30 ತಿಂಗಳ ನಂತರ ಬರಲಿರುವ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವಂತೆ ನಾನು ಈಗಲೇ ಏಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆಗೆ ಹೋಗಿ ಟಿಕೆಟ್ ಕೇಳಲಿ. ಡಿ.ಕೆ. ಶಿವಕುಮಾರ್ ಅವರ ಹಸಿ ಸುಳ್ಳನ್ನು ಮೂರ್ಖರು ನಂಬುವುದಿಲ್ಲ ಇನ್ನು ಜನಸಾಮಾನ್ಯರು ನಂಬುವ ಪ್ರಶ್ನೆ ಉದ್ಭವಿಸುವುದೇ ಇಲ್ಲ ಎಂದು ಹೇಳಿದ್ದಾರೆ.

ಒಂದು ವೇಳೆ ಡಿಕೆಶಿ ಮಾಧ್ಯಮಗಳ ಎದುರು ಹೇಳಿರುವುದು ನಿಜವಾದರೆ ಅದನ್ನು ಸಾಬೀತು ಮಾಡಲು ಅವರ ಮನೆ ತುಂಬ ಹಾಗೂ ರಸ್ತೆಯಲ್ಲಿ ಸಿಸಿ ಕ್ಯಾಮರಾಗಳನ್ನು ಹಾಕಲಾಗಿದೆ ದಯವಿಟ್ಟು ಅವರು ಸಾಕ್ಷಿಯನ್ನು ರಾಜ್ಯದ ಜನತೆ ಮುಂದೆ ಇಡಲಿ ಎಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಹಲವಾರು ಬಾರಿ ಹಣ ಆಸ್ತಿ ಅಧಿಕಾರ ಪಕ್ಷ ಸಂಘಟನೆ ಸೇರಿದಂತೆ ವಿವಿಧ ರೀತಿಯ ಅನುಕೂಲಗಳಿಗಾಗಿ ಡಿ.ಕೆ. ಶಿವಕುಮಾರ್ ಅವರು ನನ್ನ ಕಾಲಿಗೆ ಹಲವಾರು ಬಾರಿ ಬಿದ್ದಿರುವ ವಿಡಿಯೋ ದೃಶ್ಯಗಳು ಇವೆ ಅವರು ಬೇಕೆಂದರೆ ರಾಜ್ಯದ ಜನತೆ ಮುಂದೆ ವಿಡಿಯೋ ದೃಶ್ಯಗಳನ್ನು ಪ್ರದರ್ಶಿಸುವೆ ಎಂದು ಯೋಗೇಶ್ವರ್ ಇದೇ ವೇಳೆ ಸವಾಲು ಹಾಕಿದ್ದಾರೆ.

ಯೋಗೇಶ್ವರ್‌ಗೆ ತಿರುಗೇಟು ನೀಡಿದ ಸಂಸದ DK ಸುರೇಶ್

ಇನ್ನು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಸಂಪುಟವನ್ನು ವಿಸ್ತರಣೆ ಮಾಡಲಿದ್ದಾರೆ ಎಂಬ ಸುಳಿವನ್ನು ಅರಿತಿರುವ ಡಿ.ಕೆ. ಶಿವಕುಮಾರ್ ಬಿಜೆಪಿ ಮುಖಂಡರು ನನಗೆ ಸಚಿವ ಪದವಿ ನೀಡುವುದನ್ನು ತಪ್ಪಿಸಲು ದುರುದ್ದೇಶದಿಂದ ಈ ರೀತಿಯ ನಿರಾಧಾರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿರುವ ಡಿ.ಕೆ ಶಿವಕುಮಾರ್ ಇಂತಹ ನಿರಾಧಾರ ಆರೋಪಗಳನ್ನು ಮಾಡಿರುವುದರಿಂದ ಆ ಸ್ಥಾನಕ್ಕೆ  ಹಾಗೂ ಕುರ್ಚಿಗೆ ಕಳಂಕ ಬಂದಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಗೌರವವನ್ನೇ ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. 

ಹೊಟ್ಟೆ ಕಿಚ್ಚು ಅಸಹನೆ  ಇತರರು ಬೆಳೆಯುವುದನ್ನು ನೋಡುವ ವ್ಯವಧಾನವಿಲ್ಲ, ತಮ್ಮ ನೀಚತನವನ್ನು ಮತ್ತೆ ಮತ್ತೆ ಪ್ರದರ್ಶಿಸುವ ಮೂಲಕ ತಾವು ಈ ಹಿಂದಿನ ಶಿವಕುಮಾರ್ ಎಂಬುದನ್ನು ಅವರೇ ಪದೇ ಪದೇ ಸಾಬೀತುಪಡಿಸಿ ಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಇನ್ನು ಮುಂದೆ ಇಂತಹದೇ ಆರೋಪಗಳನ್ನು ಮಾಡುವುದು ಮುಂದುವರಿಸಿದರೆ ಬೆಂಗಳೂರು ಹಾಗೂ ರಾಮನಗರದಲ್ಲಿ ಸುದ್ದಿಗೋಷ್ಠಿ ಕರೆದು ಅವರ ರಾಜಕೀಯ ಜೀವನದ ಬಗ್ಗೆ ರಾಜ್ಯದ ಜನತೆ ಮುಂದೆ ಹೇಳಬೇಕಾಗುತ್ತದೆ ಎಂದು ಯೋಗೇಶ್ವರ್ ಎಚ್ಚರಿಕೆ ನೀಡಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ