Vijayanagara: ಜಿಲ್ಲೆಯವರು ಸಿಎಂ ಆಗಲ್ಲ, ಇಲ್ಲಿಯವರು ಶಾಸಕರಾಗಲ್ಲ: ಶಿವಾನಂದ ಪಾಟೀಲ

By Govindaraj S  |  First Published Oct 12, 2022, 11:58 PM IST

ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಭಾವಿ ಮುಖ್ಯಮಂತ್ರಿ ಆಗುತ್ತಾರೆ. ಬಸವನಬಾಗೇವಾಡಿ ಮತಕ್ಷೇತ್ರದಲ್ಲಿರುವ ಬಿಜೆಪಿ ನಾಯಕರೊಬ್ಬರನ್ನು ಮತಕ್ಷೇತ್ರದ ಭಾವಿ ಶಾಸಕ ಎಂದು ಹೇಳುತ್ತಿದ್ದಾರೆ. 


ಬಸವನಬಾಗೇವಾಡಿ (ಅ.12): ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಭಾವಿ ಮುಖ್ಯಮಂತ್ರಿ ಆಗುತ್ತಾರೆ. ಬಸವನಬಾಗೇವಾಡಿ ಮತಕ್ಷೇತ್ರದಲ್ಲಿರುವ ಬಿಜೆಪಿ ನಾಯಕರೊಬ್ಬರನ್ನು ಮತಕ್ಷೇತ್ರದ ಭಾವಿ ಶಾಸಕ ಎಂದು ಹೇಳುತ್ತಿದ್ದಾರೆ. ಜಿಲ್ಲೆಯ ಬಿಜೆಪಿ ನಾಯಕ ಮುಖ್ಯಮಂತ್ರಿಯಾಗಲ್ಲ. ಇಲ್ಲಿನ ಬಿಜೆಪಿ ನಾಯಕರೊಬ್ಬರು ಎಂದಿಗೂ ಶಾಸಕರಾಗಲ್ಲ. ಇಬ್ಬರಿಗೂ ಭಾವಿಯೇ ಗತಿಯಾಗಿದ್ದು, ಭಾವಿಯಾಗಿಯೇ ಉಳಿಯುತ್ತಾರೆ ಎಂದು ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ ವ್ಯಂಗ್ಯವಾಡಿದರು.

ಪಟ್ಟಣದ ಜಗದ್ಗುರು ಪಂಚಾಚಾರ್ಯ ಜನಕಲ್ಯಾಣ ಮಂಟಪದಲ್ಲಿ ಮಂಗಳವಾರ ಸಂಜೆ ಭಾರತ ಜೋಡೋ ಪಾದಯಾತ್ರೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಖಂಡಿತ ಬಸವನಬಾಗೇವಾಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಮತಕ್ಷೇತ್ರದಲ್ಲಿ ಕಾರ್ಯಕರ್ತರು, ಮುಖಂಡರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಖಂಡಿತ ಕಾಂಗ್ರೆಸ್‌ ಪಕ್ಷ ಆಡಳಿತಕ್ಕೆ ಬರುತ್ತದೆ. ಆಗ ಮತಕ್ಷೇತ್ರದಲ್ಲಿ ಇನ್ನಷ್ಟುಹೆಚ್ಚು ಅಭಿವೃದ್ಧಿಯಾಗುತ್ತದೆ. ಈಗಿರುವ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಗೆ ಮಂತ್ರಿಗೆ ಬರಗಾಲವಿದೆ ಎಂದು ಲೇವಡಿ ಮಾಡಿದರು.

Latest Videos

undefined

ಪ್ರಚಾರದಲ್ಲಿ ಕಾಂಗ್ರೆಸ್‌, ಬಿಜೆಪಿ ಹಿಂದಿಕ್ಕಿದ ಆಮ್‌ ಆದ್ಮಿ..!

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೋ ಪಾದಯಾತ್ರೆ ಈಗಾಗಲೇ ರಾಜ್ಯದಲ್ಲಿ ಅದ್ಧೂರಿಯಾಗಿ ಸಾಗುತ್ತಿದ್ದು, ಬಸವನಬಾಗೇವಾಡಿ ಮತಕ್ಷೇತ್ರದ ಕಾಂಗ್ರೆಸ್‌ ಪಕ್ಷದ ನಾಯಕರು, ಕಾರ್ಯಕರ್ತರು ಅ.15 ರಂದು ಬಳ್ಳಾರಿ ಜಿಲ್ಲೆಯಲ್ಲಿ ನಡೆಯಲಿರುವ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಪಾದಯಾತ್ರೆ ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಭಾರತ ಜೋಡೋ ಪಾದಯಾತ್ರೆ ಯಶಸ್ವಿಯಾಗುವುದಿಲ್ಲ ಎಂಬ ಟೀಕೆ ಕೇಳಿಬಂದಿತ್ತು. ಇದೀಗ ಪಾದಯಾತ್ರೆಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರತಿನಿತ್ಯ ರಾಹುಲ ಗಾಂಧಿಯವರೊಂದಿಗೆ ಕನಿಷ್ಠ 30 ಸಾವಿರ ಜನರು ಹೆಜ್ಜೆ ಹಾಕುತ್ತಿದ್ದಾರೆ. ಇದುವರೆಗೂ ರಾಹುಲ್‌ ಗಾಂಧಿ ಅವರು 700 ಕಿಮೀ ಪಾದಯಾತ್ರೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ದುರಾಡಳಿತವನ್ನು ಜನರಿಗೆ ತಿಳಿಸುವ ಉದ್ದೇಶ ಪಾದಯಾತ್ರೆ ಹೊಂದಿದೆ. ಇದೀಗ ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ, ನಿತ್ಯ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಅತಿವೃಷ್ಟಿಯಿಂದಾಗಿ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ದೇಶದಲ್ಲಿ ಅಶಾಂತಿ, ಜಾತಿ ಸಂಘರ್ಷ ಮಾಡುವ ಕಾರ್ಯ ನಡೆದಿದೆ ಹೊರತು ಜನರ ಸಮಸ್ಯೆ ಬಗೆ ಹರಿಸುವ ಕಾರ್ಯ ನಡೆಯುತ್ತಿಲ್ಲ. ರುಪಾಯಿ ಅಪಮೌಲ್ಯ ಆಗುತ್ತಿದೆ. ರಾಜ್ಯದಲ್ಲಿ ಬೇರೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಬಂದು ಹೋದರು ಹೊರತು ಅತಿವೃಷ್ಟಿಪ್ರದೇಶಕ್ಕೆ ಬರಲಿಲ್ಲ ಎಂದು ದೂರಿದರು.

ವಿಧಾನಸಭೆ ಅಧಿವೇಶನವನ್ನು 6 ತಿಂಗಳಿಗೊಮ್ಮೆ ಮಾಡಲಾಗುತ್ತಿದೆ. ಇದು ನಿಮಿತ್ತವಾಗಿ ನಡೆಯುತ್ತಿದೆ. ವಿಧಾನಸಭೆಯಲ್ಲಿ ಜನರ ಸಮಸ್ಯೆ ಕುರಿತು ಪ್ರಶ್ನೆ ಕೇಳಿದರೆ ಉತ್ತರಿಸಲು ಸಚಿವರು ಇರುವುದಿಲ್ಲ. ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಾರೆ. ಈ ಸರ್ಕಾರ ಶೇ.40 ಎಂದು ಗುತ್ತಿಗೆದಾರರ ಸಂಘವು ಎರಡು ಸಲ ಪ್ರಧಾನಿಗೆ ಪತ್ರ ಬರೆದಿರುವದನ್ನು ನೋಡಿದರೆ ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಜನರಿಗೆ ಗೊತ್ತಾಗುತ್ತಿದೆ ಎಂದರು.

ಸಭೆಯಲ್ಲಿ ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್‌ ಅಧ್ಯಕ್ಷ ಸುರೇಶ ಹಾರಿವಾಳ, ಪ್ರಧಾನ ಕಾರ್ಯದರ್ಶಿ ರವಿ ರಾಠೋಡ, ಮುಖಂಡರಾದ ಶೇಖರ ಗೊಳಸಂಗಿ,ಸುರೇಶಗೌಡ ಪಾಟೀಲ, ಸಿ.ಪಿ. ಪಾಟೀಲ, ರಮೇಶ ಸೂಳಿಭಾವಿ, ಕಲ್ಲು ದೇಸಾಯಿ, ರಫೀಕ ಪಕಾಲಿ, ಬಸಣ್ಣ ದೇಸಾಯಿ, ರುಕ್ಮಿಣಿ ರಾಠೋಡ, ಎ.ಎಂ.ಪಾಟೀಲ, ಪ್ರೇಮುಕುಮಾರ ಮ್ಯಾಗೇರಿ,ಸುರೇಶ ದಳವಾಯಿ, ಚಂದ್ರಶೇಖರಗೌಡ ಪಾಟೀಲ, ಬಸವರಾಜ ಹಾರಿವಾಳ, ಕಮಲಸಾಬ ಕೊರಬು, ದೇವೇಂದ್ರ ಚವ್ಹಾಣ, ರಾಜುಗೌಡ ಪಾಟೀಲ, ಹನೀಫ್‌ ಮಕಾನಾದರ ಸೇರಿದಂತೆ ಇತರರು ಇದ್ದರು. ರವಿ ರಾಠೋಡ ಸ್ವಾಗತಿಸಿ, ನಿರೂಪಿಸಿದರು. ರಮಜಾನ ಹೆಬ್ಬಾಳ ವಂದಿಸಿದರು.

ಭಾರತ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ ಬಣ್ಣ ಬಯಲು: ಬಸನಗೌಡ ಪಾಟೀಲ ಯತ್ನಾಳ

ರಾಜ್ಯದಲ್ಲಿಯೂ ಆಡಳಿತ ವ್ಯವಸ್ಥೆ ಮೇಲೆ ಸಂಪೂರ್ಣ ನಿಯಂತ್ರಣ ತಪ್ಪಿಹೋಗಿದೆ. ಪೊಲೀಸ್‌ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯಲ್ಲಿ ವರ್ಗಾವಣೆ ಆಗುತ್ತಿದೆ. ಬಸವನಬಾಗೇವಾಡಿ ತಹಸೀಲ್ದಾರ್‌ 6 ತಿಂಗಳಲ್ಲಿ ವರ್ಗಾವಣೆ ಆಗುತ್ತಾರೆ ಎಂದರೆ ರಾಜ್ಯ ಸರ್ಕಾರದ ಆಡಳಿತ ಹೇಗೆ ನಡೆದಿದೆ ಎಂದು ತಿಳಿದುಕೊಳ್ಳಬಹುದು. ಯಾವುದೇ ಕಚೇರಿಗೆ ಹೋದರೂ ಹಣ ಇಲ್ಲದೇ ಕೆಲಸ ಆಗುತ್ತಿಲ್ಲ.
- ಶಾಸಕ ಶಿವಾನಂದ ಪಾಟೀಲ ಮಾಜಿ ಸಚಿವರು.

click me!