ಸಚಿವ ಸ್ಥಾನ ವಂಚಿತರಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡರು ಒಬ್ಬರು. ಮುಂದೆ ನೂರಕ್ಕೆ ನೂರರಷ್ಟು ಅವರು ಸಚಿವರಾಗುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಹಾಸನ (ಫೆ.12): ಸಚಿವ ಸ್ಥಾನ ವಂಚಿತರಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರು ಒಬ್ಬರು. ಮುಂದೆ ನೂರಕ್ಕೆ ನೂರರಷ್ಟು ಅವರು ಸಚಿವರಾಗುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಜಿಲ್ಲಾಧಿಕಾರಿ ನಿವಾಸದ ಹಿಂಭಾಗದ ರಸ್ತೆಯಲ್ಲಿ ಗೃಹಮಂಡಳಿಗೆ ನೂತನ ಅದ್ಯಕ್ಷರಾಗಿ ಆಯ್ಕೆಗೊಂಡ ಕೆ.ಎಂ. ಶಿವಲಿಂಗೇಗೌಡರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಶಿವಲಿಂಗೇಗೌಡ ಸಚಿವ ಸ್ಥಾನ ವಂಚಿತ ಶಾಸಕರಲ್ಲಿ ಅವರೂ ಒಬ್ಬರು.
ಅವರ ಹೆಸರು ಕೂಡ ಪಟ್ಟಿಯಲ್ಲಿ ಇತ್ತು. ಕೊನೆಗಳಿಗೆಯಲ್ಲಿ ಕೈತಪ್ಪಿತು. ಆದರೆ ಮುಂದೆ ನೂರಕ್ಕೆ ನೂರರಷ್ಟು ಅವರು ಸಚಿವರಾಗ್ತಾರೆ. ನಂತರ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೂಡ ಬರ್ತಾರೆ’ ಎಂದು ಹೇಳಿದರು. ಶಾಸಕ ಶಿವಲಿಂಗೇಗೌಡರು ಮಾತನಾಡಿ, ‘ರಾಜ್ಯದಲ್ಲಿ ಬರ ಬಂದಿದೆ. ಇದುವರೆಗೆ ಹತ್ತು ರುಪಾಯಿ ಬರ ಪರಿಹಾರ ಕೊಟ್ಟಿಲ್ಲ. ರಾಜ್ಯ ಬಿಜೆಪಿ ನಾಯಕರು ರೈತರಿಗೆ ಪರಿಹಾರ ಕೊಡದೆ ಹೋದರೆ ಹೋರಾಟ ಮಾಡ್ತಿವಿ ಅಂತಾರೆ. ಅದನ್ನು ಬಿಟ್ಟು ಕೇಂದ್ರದ ಬಳಿ ಪರಿಹಾರ ಕೇಳಿ’ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಬಿಜೆಪಿಗರು ಉತ್ತರಿಸಲಿ: ಕೇಂದ್ರ ಸರ್ಕಾರದಿಂದ ನಮಗೆ ಅನ್ಯಾಯ ಆಗಿರುವ ಕುರಿತು ಸಿಎಂ ಸಿದ್ದರಾಮಯ್ಯನವರು ಅಂಕಿ-ಅಂಶಗಳ ಪ್ರಕಾರ ಹೇಳಿದ್ದಾರೆ. ಅದೆಲ್ಲಾ ಸುಳ್ಳು ಎಂದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದೂ ಅವರು ಸವಾಲು ಹಾಕಿದ್ದಾರೆ. ಈ ಬಗ್ಗೆ ಬಿಜೆಪಿಗರು ಉತ್ತರ ನೀಡಲಿ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ತಾಲೂಕಿನ ಅಗಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆಯನ್ನು ರಾಜಕೀಯ ಡೊಂಬರಾಟ ಎಂಬ ಮಾಜಿ ಸಿಎಂ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಕ್ಕೆ ಅನ್ಯಾಯ ಆದಾಗ ನೋಡಿಕೊಂಡು ಸುಮ್ನೆ ಕೂರಬೇಕು ಅನ್ನೋದಕ್ಕೆ ಯಡಿಯೂರಪ್ಪ ಬೆಂಬಲ ಇದೆಯಾ ಎಂದು ಪ್ರಶ್ನಿಸಿದರು.
ಈ ಬಾರಿ ಮುಖ್ಯಮಂತ್ರಿಗಳಿಂದ ಜನಪರ ಬಜೆಟ್ ಮಂಡನೆ: ಸಚಿವ ಚಲುವರಾಯಸ್ವಾಮಿ
ಸಿದ್ದರಾಮಯ್ಯನವರು ಹೇಳಿದಂತೆ ಈಶ್ವರಪ್ಪನವರ ಮೆದುಳು-ಬಾಯಿಗೂ ಸಂಬಂಧ ಕಟ್ಟಾಗಿದೆ. ಮಾಧ್ಯಮಗಳಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎಂದರು. ಬಳಿಕ ಹಾಗೆ ಹೇಳಿಲ್ಲ ಅಂದರು ಎಂದು ವ್ಯಂಗ್ಯವಾಡಿದರು. ದೇಶ ವಿಭಜನೆ ಕುರಿತು ಸಂಸದ ಡಿ.ಕೆ. ಸುರೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇಶ ಒಗ್ಗಟ್ಟಾಗಿ ಇರಬೇಕು ಎಂಬ ಕಾರಣಕ್ಕೆ ರಾಜೀವ್ ಗಾಂಧಿ ಜೀವತ್ಯಾಗ ಮಾಡಿದ್ದರು. ಆಪರೇಷನ್ ಬ್ಲ್ಯೂ ಸ್ಟಾರ್ ಮಾಡಿದ್ದು ಯಾರು, ಮಾಡದಿದ್ದರೆ ಪಂಜಾಬ್ ರಾಜ್ಯ ನಮ್ಮಲ್ಲಿ ಇರುತ್ತಿರಲಿಲ್ಲ, ಅದಕ್ಕಾಗಿ ಇಂದಿರಾಗಾಂಧಿ ಹತ್ಯೆ ಆಯಿತು. ದೇಶಕ್ಕೋಸ್ಕರ ಬಿಜೆಪಿಯವರ ಕೊಡುಗೆ ಏನು?, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲ್ಲ ಅಂತಾ ಬ್ರಿಟಿಷರಿಗೆ ಬರೆದುಕೊಟ್ಟು ಬಂದವರ ಸಂತತಿಯೇ ಈ ಬಿಜೆಪಿಯದು ಹರಿಹಾಯ್ದರು.