ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯು ಶಾಸಕ ಸಿ.ಎನ್.ಬಾಲಕೃಷ್ಣರವರ ಅಧ್ಯಕ್ಷತೆಯಲ್ಲಿ ಜರುಗಿತು.
ಚನ್ನರಾಯಪಟ್ಟಣ (ಡಿ.29): ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯು ಶಾಸಕ ಸಿ.ಎನ್.ಬಾಲಕೃಷ್ಣರವರ ಅಧ್ಯಕ್ಷತೆಯಲ್ಲಿ ಜರುಗಿತು. ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಶಾಸಕ ಸಿ.ಎನ್.ಬಾಲಕೃಷ್ಣ, ರಾಜ್ಯ ಸರ್ಕಾರ (ಉಚಿತ ಭಾಗ್ಯ) ಗ್ಯಾರಂಟಿ ಯೋಜನೆಗಳಿಗೆ ಎಸಿಪಿ ಮತ್ತು ಟಿಎಸ್ಪಿ ಹಣವನ್ನು ವರ್ಗಾವಣೆ ಮಾಡಿರುವುದು ಸರಿಯಾದ ನಿರ್ಧಾರವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಈ ನಡೆಯಿಂದ ನಮಗೆ ನೆಮ್ಮದಿ ಇಲ್ಲಂತಾಗಿದೆ ಎಂದರು.
ಚನ್ನರಾಯಪಟ್ಟಣ ತಾಲೂಕಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ನೀಡುವ ಸಾಲ ಸೌಲಭ್ಯದ ಫಲಾನುಭವಿಗಳ ಪಟ್ಟಿ ಮಾಡುವ ಸಂದರ್ಭದಲ್ಲಿ ಪರಿಶಿಷ್ಟ ಸಮಾಜದ ೨೦ ಜನ ಫಲಾನುಭವಿಗಳನ್ನು ಆಯ್ಕೆ ಮಾಡುವ ಜಾಗದಲ್ಲಿ ಕೇವಲ ಐದು ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಿ ಎಂದರೆ, ಅದನ್ನು ಹೇಗೆ ಆಯ್ಕೆ ಮಾಡುವುದು ? ಇಂತಹ ಇಕ್ಕಟ್ಟಿನ ಸನ್ನಿವೇಶದಲ್ಲಿ ನಾವಿದ್ದೇವೆ ಎಂದರು.
ಚನ್ನರಾಯಪಟ್ಟಣ ತಾಲೂಕಿನಲ್ಲಿ ಎಸ್‌ಸಿ, ಎಸ್ಟಿ ಸಮಾಜದ ಬೇಡಿಕೆ ಹೆಚ್ಚಾಗಿದೆ. ಇಂತಹ ಸನ್ನಿವೇಶದಲ್ಲಿ ಎಸ್ಸಿ, ಎಸ್ಟಿ ಸಮಾಜದ ಅನುದಾನವನ್ನು ಉಚಿತ ಯೋಜನೆಗಳಿಗೆ ವರ್ಗಾವಣೆಗೊಳಿಸುವ ಮೂಲಕ ಯಾವುದೇ ಇಲಾಖೆಯಲ್ಲಿ ಎಸ್ ಸಿ ಎಸ್ ಟಿ ಅನುದಾನಗಳಿಲ್ಲದಂತಾಗಿದೆ, ಇಂತಹ ಸಂದರ್ಭದಲ್ಲಿ ನಮ್ಮ ಮನೆಯ ಹತ್ತಿರ ಬಂದು ನಮಗೆ ಸರ್ಕಾರಿ ಸೌಲಭ್ಯಗಳನ್ನು ನೀಡಿ ಎಂದು ಮನವಿ ಮಾಡುವ ದಲಿತ ಸಮಾಜದ ಬಂಧುಗಳಿಗೆ ಏನೆಂದು ಉತ್ತರಿಸುವುದು ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.
ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿಗೆ ಸರ್ಕಾರದಿಂದ ನೆರವು: ಸಚಿವ ಮುನಿಯಪ್ಪ
ಸಭೆಯಲ್ಲಿ ತಾಲೂಕಿನ ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಮಾರ್ಗದರ್ಶನ ನೀಡಲಾಯಿತು. ತಾಪಂ ಆಡಳಿತ ಅಧಿಕಾರಿ ಪ್ರಭು ಈರಣ್ಣಗೌಡ, ತಾಲೂಕು ದಂಡಾಧಿಕಾರಿ ಬಿ.ಎಂ. ಗೋವಿಂದರಾಜು, ತಾಪಂ ನಿರ್ವಹಣಾಧಿಕಾರಿ ಜಿ. ಆರ್. ಹರೀಶ್, ಪೊಲೀಸ್ ವೃತ್ತ ನಿರೀಕ್ಷಕ ವಸಂತ್, ಪುರಸಭೆ ಮುಖ್ಯ ಅಧಿಕಾರಿ ಹೇಮಂತ್ ಕುಮಾರ್, ಹಾಗೂ ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.