ನಾಗೇಂದ್ರ ರಾಜೀನಾಮೆ ಹಿನ್ನಲೆ: ಎಸ್‌ಟಿ ಕಲ್ಯಾಣ ಖಾತೆ ಸಚಿವ ಶಿವರಾಜ್‌ ತಂಗಡಗಿ ಹೆಗಲಿಗೆ?

By Kannadaprabha News  |  First Published Jun 9, 2024, 10:22 AM IST

ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತೆರವಾದ ಖಾತೆಯ ಹೆಚ್ಚುವರಿ ಹೊಣೆ ತೆಗೆದುಕೊಳ್ಳಲು ದಲಿತ ಸಚಿವರಲ್ಲಿ ಪೈಪೋಟಿ ಶುರುವಾಗಿದ್ದು, ಖಾತೆಯ ಹೊಣೆ ಸಚಿವ ಶಿವರಾಜ್‌ ತಂಗಡಗಿ ಅವರಿಗೆ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.
 


ಬೆಂಗಳೂರು (ಜೂ.09): ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತೆರವಾದ ಖಾತೆಯ ಹೆಚ್ಚುವರಿ ಹೊಣೆ ತೆಗೆದುಕೊಳ್ಳಲು ದಲಿತ ಸಚಿವರಲ್ಲಿ ಪೈಪೋಟಿ ಶುರುವಾಗಿದ್ದು, ಖಾತೆಯ ಹೊಣೆ ಸಚಿವ ಶಿವರಾಜ್‌ ತಂಗಡಗಿ ಅವರಿಗೆ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ. ಲೋಕಸಭೆ ಚುನಾವಣೆ ಈಗಷ್ಟೇ ಮುಗಿದಿರುವುದರಿಂದ ಸಚಿವ ಸಂಪುಟ ಪುನರ್‌ರಚನೆಗೆ ಇನ್ನೂ 2-3 ತಿಂಗಳು ಕಾಲಾವಕಾಶ ತೆಗೆದುಕೊಳ್ಳಬಹುದು. ಈಗ ಖಾಲಿಯಾಗಿರುವ ಒಂದು ಹುದ್ದೆಯನ್ನು ಹೊಸಬರಿಗೆ ನೀಡಲು ಮುಂದಾದರೆ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಹಾಲಿ ಸಚಿವರಿಗೆ ಹೆಚ್ಚುವರಿ ಹೊಣೆ ನೀಡಲು ಚಿಂತನೆ ನಡೆಸಲಾಗಿದೆ.

ಈ ಹಿನ್ನೆಲೆಯಲ್ಲಿ ದಲಿತ ಸಚಿವರಲ್ಲಿ ಭಾರಿ ಪೈಪೋಟಿ ಉಂಟಾಗಿದ್ದು, ಮುಖ್ಯವಾಗಿ ಸಹಕಾರ ಸಚಿವರ ಕೆ.ಎನ್‌. ರಾಜಣ್ಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರ ಶಿವರಾಜ್‌ ತಂಗಡಗಿ ನಡುವೆ ಪೈಪೋಟಿ ಕಂಡು ಬಂದಿದೆ. ರಾಜಣ್ಣ ಅವರ ಬಳಿ ಸಹಕಾರದಂತಹ ಪ್ರಮುಖ ಖಾತೆ ಇರುವುದರಿಂದ ಶಿವರಾಜ್‌ ತಂಗಡಗಿ ಜವಾಬ್ದಾರಿ ನೀಡಲು ಕೆಲ ಹಿರಿಯ ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಜತೆಗೆ ಈ ಹಿಂದೆ ಮುಖ್ಯಮಂತ್ರಿಗಳು ಶಿವರಾಜ್ ತಂಗಡಗಿ ಅವರಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆಯನ್ನು ನೀಡಲು ತೀರ್ಮಾನಿಸಿದ್ದರು. 

Tap to resize

Latest Videos

ಆದರೆ ನಾಗೇಂದ್ರ ಅವರು ಭಾಷೆ ಸಮಸ್ಯೆಯಿಂದ ಕನ್ನಡ ಮತ್ತು ಸಂಸ್ಕೃತಿ ಖಾತೆ ಒಪ್ಪದ ಹಿನ್ನೆಲೆಯಲ್ಲಿ ತಂಗಡಗಿ ಅವರಿಗೆ ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ನೀಡಲಾಗಿತ್ತು. ಇದೀಗ ಶಿವರಾಜ್‌ ತಂಗಡಗಿ ಅವರು ಖಾಲಿ ಸ್ಥಾನದ ಮೇಲೆ ಒಲವು ಹೊಂದಿರುವುದರಿಂದ ಅವರನ್ನು ಪರಿಗಣಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಶಿವರಾಜ್‌ ತಂಗಡಗಿ ಅವರಿಗೆ ನೀಡಿದರೆ  ಹೈದರಾಬಾದ್‌ ಕರ್ನಾಟಕದ (ಬಳ್ಳಾರಿ) ಬಿ.ನಾಗೇಂದ್ರ ಅವರಿಂದ ತೆರವಾದ ಸ್ಥಾನ ನೀಡಿದರೆ ಹೈದರಾಬಾದ್‌ ಕರ್ನಾಟಕದ ಸಚಿವರ ಬಳಿಯೇ ಉಳಿಯಲಿದೆ ಎಂಬ ಮಾತೂ ಕೇಳಿಬರುತ್ತಿದೆ.

ರಾಜ್ಯದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಜವಾಬ್ದಾರಿ ನಿಖಿಲ್‌ ಕುಮಾರಸ್ವಾಮಿ ಹೆಗಲಿಗೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಪರಿಶಿಷ್ಟ ಜಾತಿಯ ಡಾ.ಜಿ. ಪರಮೇಶ್ವರ್‌, ಪ್ರಿಯಾಂಕ್‌ ಖರ್ಗೆ, ಕೆ.ಎಚ್. ಮುನಿಯಪ್ಪ, ಡಾ.ಎಚ್.ಸಿ.ಮಹಾದೇವಪ್ಪ, ಆರ್‌.ಬಿ. ತಿಮ್ಮಾಪುರ, ಶಿವರಾಜ್‌ ತಂಗಡಗಿ ಸೇರಿ ಆರು ಮಂದಿ ಪರಿಶಿಷ್ಟ ಜಾತಿಯ ಸಚಿವರು ಹಾಗೂ ಕೆ.ಎನ್‌.ರಾಜಣ್ಣ, ಬಿ.ನಾಗೇಂದ್ರ, ಸತೀಶ್ ಜಾರಕಿಹೊಳಿ ಸೇರಿ ಮೂರು ಮಂದಿ ಪರಿಶಿಷ್ಟ ಪಂಗಡಗಳ ಸಚಿವರು ಇದ್ದರು. ಒಟ್ಟು ಒಂಬತ್ತು ಮಂದಿಯ ದಲಿತ ಮಂತ್ರಿಗಳ ಸಂಖ್ಯೆ ಇದೀಗ 8ಕ್ಕೆ ಇಳಿಕೆಯಾಗಿದೆ. ಹೀಗಾಗಿ ತಕ್ಷಣ ಹೆಚ್ಚುವರಿ ಹೊಣೆಯನ್ನು ಬೇರೊಬ್ಬ ಸಚಿವರಿಗೆ ವಹಿಸುವ ಸಾಧ್ಯತೆಯಿದೆ.   

click me!