ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿ, (ಅ.25): ಕೊರೋನಾ ಸೋಂಕಿನಿಂದ ಸಾವನ್ನಪ್ಪಿರುವ ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಬದುಕಿದ್ದರೆ 2-3 ತಿಂಗಳಲ್ಲಿ ದೊಡ್ಡ ಹುದ್ದೆ ಸಿಗುತ್ತಿತ್ತು ಎಂದು ಸಚಿವ ರಮೇಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಇಂದು (ಭಾನುವಾರ) ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸುರೇಶ್ ಅಂಗಡಿಯವರಿಗೆ ಬಹಳ ದೊಡ್ಡ ಭವಿಷ್ಯವಿತ್ತು. ಎರಡ್ಮೂರು ತಿಂಗಳು ಬದುಕಿದ್ದರೆ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದರು ಎಂದು ಹೇಳಿದರು.
'ಸಿಎಂ ರೇಸ್‌ನಲ್ಲಿ ಸುರೇಶ್ ಅಂಗಡಿ ಹೆಸರಿತ್ತು'
ಸುರೇಶ್ ಅಂಗಡಿ ಒಳ್ಳೆಯ ನಾಯಕರು ನಮ್ಮನ್ನು ಅಗಲಿದ್ದಾರೆ, ಅವರಿಗೆ ಒಂದು ವಿಚಿತ್ರ ಹುದ್ದೆ ಸಿಗುತ್ತಿತ್ತು. ದುರ್ದೈವ ನಮ್ಮನ್ನಗಲಿದರು. ಒಳ್ಳೆಯವರನ್ನು ಆ ದೇವರು ಬೇಗ ಕರೆದುಕೊಳ್ಳುತ್ತಾನೆ ಎಂದು ಬೇಸರ ವ್ಯಕ್ತಪಡಿಸಿದರು.
ಸುರೇಶ್ ಅಂಗಡಿ ಸಿಎಂ ಆಗುತ್ತಿದ್ರು ಅಂತಾ ಪರೋಕ್ಷವಾಗಿ ಹೇಳಿಕೆ ಕೊಟ್ರಾ ಸಾಹುಕಾರ್ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಇನ್ನು ಇತ್ತೀಚೆಗಷ್ಟೇ ಸುರೇಶ್ ಅಂಗಡಿ ಸಿಎಂ ಆಗ್ತಿದ್ರು ಎಂದು ಸೋದರ ಮಾವ ಲಿಂಗರಾಜ ಪಾಟೀಲ್ ಹೇಳಿಕೆ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.