ತಮ್ಮ ಸರ್ಕಾರ ಇದ್ದಾಗ ಬೊಮ್ಮಾಯಿ, ಅಶೋಕ ಏನ್ಮಾಡ್ತಿದ್ರು?: ಪ್ರಿಯಾಂಕ್‌ ಖರ್ಗೆ

By Kannadaprabha NewsFirst Published Jan 7, 2024, 8:48 PM IST
Highlights

ಈ ಹಿಂದೆ ಯಾರು ಹೇಗೆ ಸಿಎಂ ಹಾಗೂ ಪ್ರಧಾನಿ ಆಗಿದ್ದರು ಎಂದು ಅವರು ನೋಡಲಿ, ಅದೆಲ್ಲ ಎಲ್ಲರಿಗೂ ಗೊತ್ತಿದೆ, ಅದನ್ನೆಲ್ಲ ಬಿಟ್ಟು ಈಗ ಕಾಂಗ್ರೆಸ್‌ ಪಕ್ಷದ ನಾಶ ಮಾಡುವ ಮಾತನ್ನಾಡುತ್ತಿದ್ದಾರೆ. ಇಂತಹ ಮಾತನ್ನಾಡಿದವರು ಇತಿಹಾಸದ ಪುಟ ಸೇರಿದ್ದಾರೆಂದು ಟಾಂಗ್ ಕೊಟ್ಟ ಪ್ರಿಯಾಂಕ್ ಖರ್ಗೆ

ಕಲಬುರಗಿ(ಜ.07): ಕಾಂಗ್ರೆಸ್ ಪಕ್ಷದ ಅಳಿವು-ಉಳಿವಿನ ಕುರಿತು ಮಾತನಾಡುವ ಮೊದಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈಗಾಗಲೇ ತೂತಾಗಿರುವ ಹಡಗಿನಂತಿರುವ ಜೆಡಿಎಸ್ ಪಕ್ಷ ಉಳಿಸಿಕೊಳ್ಳಲು ಯತ್ನ ಮಾಡಲಿ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ದೇವೇಗೌಡರ ಮಾತಿಗೆ ತಿರುಗೇಟು ನೀಡಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯಾರು ಹೇಗೆ ಸಿಎಂ ಹಾಗೂ ಪ್ರಧಾನಿ ಆಗಿದ್ದರು ಎಂದು ಅವರು ನೋಡಲಿ, ಅದೆಲ್ಲ ಎಲ್ಲರಿಗೂ ಗೊತ್ತಿದೆ, ಅದನ್ನೆಲ್ಲ ಬಿಟ್ಟು ಈಗ ಕಾಂಗ್ರೆಸ್‌ ಪಕ್ಷದ ನಾಶ ಮಾಡುವ ಮಾತನ್ನಾಡುತ್ತಿದ್ದಾರೆ. ಇಂತಹ ಮಾತನ್ನಾಡಿದವರು ಇತಿಹಾಸದ ಪುಟ ಸೇರಿದ್ದಾರೆಂದು ಪ್ರಿಯಾಂಕ್ ಟಾಂಗ್ ಕೊಟ್ಟರು.

ಯುವನಿಧಿಗೆ ಜ.12ಕ್ಕೆ ಶಿವಮೊಗ್ಗದಲ್ಲಿ ಚಾಲನೆ: ಸಚಿವ ಪ್ರಿಯಾಂಕ್‌ ಖರ್ಗೆ

ಕಾಂಗ್ರೆಸ್‌ ಪಕ್ಷದ ನೂರಾರು ವರ್ಷದ ಸುದೀರ್ಘ ಇತಿಹಾಸವಿರುವ ಪಕ್ಷ. ಜನಸೇವೆಯೇ ಕಾಯಕವಾಗಿರುವ ಕಾಂಗ್ರೆಸ್‌ ಅಳಿವು- ಉಳಿವು ಈ ದೇಶದ ಜನ ನಿರ್ಧರಿಸುತ್ತಾರೆ. ದೇವೇಗೌಡರಂತಹ ಅನೇಕರು ನಾಶ ಮಾಡುವ ಮಾತನ್ನಾಡಿದ್ದಾರೆ, ಇಂದೂ ಲೆಕ್ಕಕ್ಕಿಲ್ಲವೆಂದು ಲೇವಡಿ ಮಾಡಿದರು.

ಬೊಮ್ಮಾಯಿ, ಅಶೋಕ ಏನ್‌ ಕತ್ತೆ ಕಾಯ್ತಿದ್ರ?: ಬಾಬಾಬುಡನಗಿರಿ ವಿಚಾರದಲ್ಲಿ ಭಕ್ತರ ಮೇಲೆ‌ ಕೇಸು ದಾಖಲಿಸಿದ್ದು, ಈಗಿನ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ. ರಾಮಭಕ್ತರ ಮೇಲೆ ಕರಸೇವಕರ ಮೇಲೆ ನಾವು ಕೇಸ್‌ ದಾಖಲು ಮಾಡಿಲ್ಲ. ಆದರೆ, ಬಹಳ ದಿನ ಬಾಕಿ ಇರುವ ವಾರಂಟ್ ಕೇಸ್ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಸೂಚಿಸಿದ್ದರಿಂದ ರಾಜ್ಯ ಸರ್ಕಾರ ಕ್ರಮವಹಿಸುತ್ತಿದೆ. ಈ ಹಿಂದೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಅಶೋಕ ಅವರೇಕೆ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯಲಿಲ್ಲ‌? ಆವಾಗ ಇ‍ವರೇನು ಕತ್ತೆ ಕಾಯ್ತಿದ್ರಾ? ಎಂದು ಖಾರವಾಗಿ ಪ್ರಶ್ನಿಸಿದರು.

ರಾಮಮಂದಿರ ಉದ್ಘಾಟನೆ ನಡೆಯುತ್ತಿರುವ ವೇಳೆ ರಾಮ ಭಕ್ತರನ್ನ ರಾಜ್ಯ ಸರ್ಕಾರ ಜೈಲಿಗೆ ಹಾಕುತ್ತಿದೆ ಎಂದು ಬಿಜೆಪಿ ಗುಲ್ಲೆಬ್ಬಿಸುತ್ತಿದೆ. ಕೋರ್ಟ್‌ ಸೂಚನೆಯಂತೆ ಕ್ರಮಗಳಾಗುತ್ತಿವೆ. ರಾಜ್ಯದಲ್ಲಿ 600 ಇಂತಹ ಬಂಧನಗಳಾಗಿವೆ. ಹುಬ್ಬಳ್ಳಿಯಲ್ಲಿ 30ಕ್ಕೂ ಹೆಚ್ಚು ಬಂಧನವಾಗಿವೆ. ಅವನ್ನೆಲ್ಲ ಬಿಟ್ಟು ಬಿಜೆಪಿ ಪೂಜಾರಿ ಬಂಧನವನ್ನೇ ಯಾಕೆ ಎತ್ತಿ ತೋರಿಸುತ್ತಿದೆ ಎಂದು ಪ್ರಿಯಾಂಕ್‌ ಪ್ರಶ್ನಿಸಿದರು.

ಶ್ರೀಕಾಂತ ಪೂಜಾರಿ ಸಾಚಾ ಏನಲ್ಲ, ಅವರ ಮೇಲೆ 16 ಕೇಸು ಇವೆ, ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು, ಜೂಜು ಆಡಿಸುವವರು, ಅಕ್ರಮ ಸಾರಾಯಿ ಮಾರಾಟ ಮಾಡುವವರು ರಾಮಭಕ್ತರಾ? ಎಂದು ಮಣಣಿಕಂಠ ರಾಠೋಡ, ಸೈಲಂಟ್‌ ಸುನೀಲ್‌, ಸ್ಯಾಂಟ್ರೊ ರವಿ ಸೇರಿ ಹಲವರ ಹೆಸರನ್ನು ಪ್ರಸ್ತಾಪಿಸುತ್ತ ಇವರೆಲ್ಲರೂ ಬಿಜೆಪಿಗೆ ಗಂಟು ಬಿದ್ದಿದ್ದಾರೆ. ಹೀಗಿದ್ದರೂ ಬಿಜೆಪಿ ವಿಷಯ ಅರಿಯದೆ ಅನ್ಯರತ್ತ ಬೆರಲು ತೋರಿಸುತ್ತದೆ ಎಂದು ತಿವಿದರು.
ಕಲಬುರಗಿ ಜಿಲ್ಲೆಯಲ್ಲಿಯೇ ಹಲವಾರು ಕೇಸು ಹಾಕಿಸಿಕೊಂಡಿರುವವರು, ಅಪಘಾತ ಹಲ್ಲೆ ಯತ್ನ ಎಂದು ಬಿಂಬಿಸಿದವರು ರಾಮಭಕ್ತರೇ? ಈ ವಿಚಾರದಲ್ಲಿ ಆರ್.ಅಶೋಕ್, ವಿಜಯೇಂದ್ರ ಅವರು ನನ್ನ ರಾಜೀನಾಮೆ ಕೇಳಿದ್ದರು. ಈಗ ಅರೆಸ್ಟ್ ಮಾಡಿ ಎಂದು ಅಭಿಯಾನ ಮಾಡುತ್ತಿದ್ದಾರೆ. ಅಶೋಕಣ್ಣ ನೀವು ಯಾರ ಪರವಾಗಿ ಪ್ರತಿಭಟನೆ ಮಾಡುತ್ತಿದ್ದೀರಾ? ಎಂದು ಯೋಚಿಸಿ ಎಂದು ಕುಟುಕಿದರು.

ಕೇಸರಿ ಶಾಲು ಹಾಕಿದ ತಕ್ಷಣ ಬಿಡಬೇಕೆ?: ಕೇಸರಿ ಶಾಲು ಹಾಕಿಕೊಂಡು ಅಕ್ರಮ ಚಟುವಟಿಕೆ‌ ನಡೆಸಿದರೆ ಸುಮ್ಮನಿರಬೇಕೆ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಕಾನೂನು ಬಾಹಿರ ಚಟುವಟಿಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ನಾನು ಕರಸೇವಕ ನನ್ನನ್ನು ಬಂಧಿಸಿ ಎಂದು ದೊಡ್ಡ ಬೋರ್ಡ್‌ ಹಿಡಿದು ಬಿಜೆಪಿಯ ಹಲವರು ಧರಣಿ ಮಾಡುತ್ತಿದ್ದಾರೆ. ಇದು ಕಾಮನ್‌ ಸೆನ್ಸ್‌ ಇರೋರು ಮಾಡೋ ಕೆಲಸವಂತೂ ಅಲ್ಲವೇ ಅಲ್ಲ, ಇ‍ವರೂ ಕಾನೂನು ಬಾಹಿರವಾಗಿ ವರ್ತಿಸಿದರೆ ಕ್ರಮ ನಿಶ್ಚಿತ ಎಂದರು.

ನಾನು ಸಂವಿಧಾನ ಭಕ್ತ. ನನಗೆ ಆಹ್ವಾನ ನೀಡಲು ಬಿಜೆಪಿಗರು ಯಾರು? : ಪ್ರಿಯಾಂಕ್ ಖರ್ಗೆ

ಹೈಕಮಾಂಡ್‌ ಸೂಚಿಸಿದರೆ ಸ್ಪರ್ಧಿಸಲು ಸಚಿವರು ಸಿದ್ಧ: ಹೈಕಮಾಂಡ್ ಸೂಚಿಸಿದರೆ ಸಚಿವರು‌ಗಳು ಮುಂಬರುವ ಎಂಪಿ ಚುನಾವಣೆಗೆ ನಿಲ್ಲಲು ರೆಡಿಯಾಗಿರುವುದಾಗಿ ಹೇಳಿದ ಸಚಿವರು, ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದರು. ನಾನಷ್ಟೇ ಅಲ್ಲ, ನಾವೆಲ್ಲಾ ಸಚಿವರು ಸೂಕ್ತ ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿ ಎಂದು ಹೈಕಮಾಂಡ್‌ ಸೂಚಿದರೆ ಸಾಕು, ನಾವೆಲ್ಲಾರೂ ಕಣಕ್ಕಿಳಿಯಲು ಸಿದ್ಧವಾಗಿದ್ದೇವೆ. ವರಿಷ್ಠರು ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆಂದರು.

ನಾನು ಸಂವಿಧಾನ ಭಕ್ತ ಎಂದ ಪ್ರಿಯಾಂಕ್‌ ಖರ್ಗೆ: ನೀವು ರಾಮಭಕ್ತರೇ? ರಾಮಮಂದಿರ ಉದ್ಘಾಟನೆಗೆ ಬರುವಂತೆ ಆಹ್ವಾನ ನೀಡಿದರೆ ಹೋಗುತ್ತೀರಾ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾನು ಸಂವಿಧಾನ ಭಕ್ತ. ನನಗೆ ಆಹ್ವಾನ ನೀಡಲು ಬಿಜೆಪಿಯರು ಯಾರು? ಬಿಜೆಪಿಯವರ ಸೂಚನೆಯಂತೆ ಟ್ರಸ್ಟ್ ಆಹ್ವಾನ ನೀಡುತ್ತಿದೆ. ಅಲ್ಲಿ ನಡೆಯುತ್ತಿರುವುದು ಒನ್ ಮ್ಯಾನ್ ಶೋ ಎಂದರು. ಖಾಸಗಿ ಮಂದಿರವಾದಲ್ಲಿ ಆಹ್ವಾನ ಬಯಸೋದು ಸಹಜ, ಸಾರ್ವಜನಿಕ ಮಂದಿರವಾದಲ್ಲಿ ಯಾರ್‍ಯಾಕೆ ಆಹ್ವಾನ ನೀಡಬೇಕು. ನನಗೆ ಆಮಂತ್ರಿಸಲು ಬಿಜೆಪಿಯವರು ಯಾರು? ಟ್ರಸ್ಟ್‌ ಹಿಂದೆ ನಿಂತು ಇಂತಹವರಿಗೆ ಆಹ್ವಾನಿಸಿರೆಂದು ಹೇಳುತ್ತಿರೋರು ಯಾರು? ಎಲ್ಲರಿಗೂ ಗೊತ್ತಿದೆ ಎಂದು ಖರ್ಗೆ ಹೇಳಿದರು. ಜಾತಿಗೊಬ್ಬ ಡಿಸಿಎಂ ನೇಮಿಸುವ ಕುರಿತಂತೆ ಕೂಗೆದ್ದಿದೆ ಎನ್ನುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಈ ವಿಚಾರದಲ್ಲಿ ತಮ್ಮ ಅಭಿಪ್ರಾಯ ಹೇಳಲು ಪಕ್ಷದಲ್ಲಿ ಆಂತರಿಕ‌ ಸ್ವಾತಂತ್ರ್ಯವಿದೆ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇರೋದರಿಂದ ಹೀಗೆಲ್ಲ ಅಭಿಮತ ಕೇಳಿ ಬರುತ್ತವೆ,‌ ಹೈಕಮಾಂಡ್ ಈ‌ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದರು.

click me!