
ಮಂಗಳೂರು (ಅ.14): ಭಾರತ ಮಾತ್ರವಲ್ಲ ವಿಶ್ವದ ನಂ.1 ದೇಶಭಕ್ತ ಸಂಘಟನೆ ಆರೆಸ್ಸೆಸ್‌ನ್ನು ಹೀಯಾಳಿಸಿ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸರ್ಕಾರ ತಕ್ಷಣ ಸಚಿವ ಸ್ಥಾನದಿಂದ ಕಿತ್ತುಹಾಕಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ದೇಶಾದ್ಯಂತ ಸಾವಿರಾರು ಶಾಖೆಗಳ ಮೂಲಕ ಪ್ರತಿನಿತ್ಯ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಪ್ರಾಕೃತಿಕ ವಿಕೋಪಗಳು, ಅವಘಡಗಳ ಸಂದರ್ಭ ಆರೆಸ್ಸೆಸ್‌ನ ಲಕ್ಷಾಂತರ ಮಂದಿ ನಿಸ್ವಾರ್ಥವಾಗಿ ಜನಸೇವೆಯಲ್ಲಿ ತೊಡಗುತ್ತಾರೆ. ಈ ಬಗ್ಗೆ ಲವಲೇಶವೂ ಗೌರವವಿಲ್ಲದೆ ಮಾತನಾಡುತ್ತಿರುವ ಪ್ರಿಯಾಂಕ್ ಖರ್ಗೆ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಅಜ್ಞಾನದ ಅಂಧಕಾರದಿಂದ, ಅಧಿಕಾರದ ಅಹಂಕಾರ ನೆತ್ತಿಗೇರಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನುಮತಿ ಪಡೆದೇ ಪಥಸಂಚಲನ: ಆರೆಸ್ಸೆಸ್ ಪೊಲೀಸರ ಅನುಮತಿ ಪಡೆದೇ ಪಥಸಂಚಲನ ನಡೆಸುತ್ತಿದೆ. ಪ್ರಿಯಾಂಕ್ ಖರ್ಗೆ ಅವರ ಅನುಮತಿ ಪಡೆಯಬೇಕಾ? ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲೇ ಆರೆಸ್ಸೆಸ್ ಗೀತೆ ಹಾಡಿದ್ದಾರೆ. ಅವರನ್ನು ಪಕ್ಷದಿಂದ ತೆಗೆಯುತ್ತೀರಾ ಎಂದು ಪ್ರಶ್ನಿಸಿದ ರವಿಕುಮಾರ್, ಪ್ರಿಯಾಂಕ್ ಖರ್ಗೆ ಅವರು ಶಾಖೆಗೆ ಭೇಟಿ ನೀಡಿ ಆರೆಸ್ಸೆಸ್ ಬಗ್ಗೆ ತಿಳಿದುಕೊಳ್ಳಲಿ, ಸಂಸ್ಕಾರವನ್ನೂ ಕಲಿಯಲಿ ಎಂದು ಆಹ್ವಾನಿಸಿದರು. ವಾಜಪೇಯಿ, ನರೇಂದ್ರ ಮೋದಿ ಅವರಂತಹ ಶ್ರೇಷ್ಠ ಪ್ರಧಾನ ಮಂತ್ರಿಗಳನ್ನು ಆರೆಸ್ಸೆಸ್ ದೇಶಕ್ಕೆ ನೀಡಿದೆ. ವಾಜಪೇಯಿ ಕುರಿತು ಕಾಂಗ್ರೆಸ್ ಹೊಗಳಿದ್ದನ್ನು ಪ್ರಿಯಾಂಕ್ ಖರ್ಗೆ ಅವರು ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ತಿಳಿದುಕೊಳ್ಳಲಿ ಎಂದರು.
ರಾಜ್ಯದ ವಿವಿಧೆಡೆ ಟಿಪ್ಪು ಜಯಂತಿಯಲ್ಲಿ ಕತ್ತಿ ಮೆರವಣಿಗೆ ಮಾಡಿದರೆ ಸಮಾಜಕ್ಕೆ ಭಯ ಆಗುವುದಿಲ್ಲವೇ? ಆರೆಸ್ಸೆಸ್ ಸ್ವಯಂಸೇವಕರು ಸ್ವರಕ್ಷಣೆಗಾಗಿ ದಂಡ ಹಿಡಿದರೆ ಮಾತ್ರ ಭಯ ನಿರ್ಮಾಣವಾಗುವುದೇ ಎಂದು ಪ್ರಶ್ನಿಸಿದ ರವಿಕುಮಾರ್, ಆರೆಸ್ಸೆಸ್ ಬಗ್ಗೆ ನೆಹರೂ, ಇಂದಿರಾಗಾಂಧಿ ಏನು ಹೇಳಿದ್ದಾರೆ ಎಂಬುದನ್ನು ಪ್ರಿಯಾಂಕ್ ಖರ್ಗೆ ತಿಳಿದುಕೊಳ್ಳಲಿ. ಗಾಂಧೀಜಿ, ಅಂಬೇಡ್ಕರ್ ಕೂಡ ಆರೆಸ್ಸೆಸ್ ಶಾಖೆಗೆ ಭೇಟಿ ನೀಡಿ ಅಧ್ಯಯನ ಮಾಡಿದ್ದರು. ನಿತ್ಯ ಸಾಮಾಜಿಕ ಕಾರ್ಯ ಮಾಡುತ್ತಿರುವ, ಚಾರಿತ್ರ್ಯ ನಿರ್ಮಾಣ ಮಾಡುವ ಸಂಘಟನೆ ಬಗ್ಗೆ ಹಗುರ ಮಾತು ಸರಿಯಲ್ಲ ಎಂದರು.
ಬಿ.ಕೆ. ಹರಿಪ್ರಸಾದ್ ಅವರೂ ಆರೆಸ್ಸೆಸ್ ವಿರುದ್ಧ ಮಾತನಾಡುತ್ತಿದ್ದಾರೆ. ಎಷ್ಟೇ ಮಾತನಾಡಿದರೂ ಅವರನ್ನು ಮಂತ್ರಿ ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ, ಪ್ರತಾಪಸಿಂಹ ನಾಯಕ್, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರು, ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂರ್ಣಿಮಾ, ಪೂಜಾ ಪೈ, ದೇವಪ್ಪ ಪೂಜಾರಿ ಬಂಟ್ವಾಳ, ಸುನೀಲ್ ಆಳ್ವ, ಸಂಜಯ ಪ್ರಭು, ಶಾಂತಿಪ್ರಸಾದ್ ಹೆಗ್ಡೆ, ಸೀತಾರಾಮ ಬೆಳಾಲು, ದಯಾನಂದ ಶೆಟ್ಟಿ, ದಿನೇಶ್ ಪುತ್ರನ್ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.