
ನಾಗಮಂಗಲ (ಜು.05): ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅಧಿಕಾರವಿಲ್ಲದೆ ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಜರಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಬಗ್ಗೆ ಯಾಕೆ ನನ್ನನ್ನು ಪ್ರಶ್ನೆ ಮಾಡ್ತೀರಪ್ಪಾ. ಅವರನ್ನು ಸ್ವಲ್ಪ ಸಮಾಧಾನದಿಂದ ಇರಲು ಹೇಳಿ. ಅಧಿಕಾರವಿಲ್ಲವೆಂಬ ಕಾರಣಕ್ಕೆ ಕುಮಾರಸ್ವಾಮಿ ಅವರು ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಿದ್ದಾರೆ ಎಂದರು.
ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ತಂದೆಯೂ ಸಹ ಸಿಎಂ ಮತ್ತು ಪ್ರಧಾನಮಂತ್ರಿಯೂ ಆಗಿದ್ದಾರೆ. ಅನಾವಶ್ಯಕವಾಗಿ ಮಾತನಾಡುತ್ತಾರೆ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಇವರ ಕುಟುಂಬದವರು ಏನೂ ಮಾಡುತ್ತಿರಲಿಲ್ಲವೇ. ಯತೀಂದ್ರ ಹಿಂದೆ ಶಾಸಕರಾಗಿದ್ದವರು. ಈಗ ರಾಜಕೀಯದಲ್ಲಿ ಸಕಿಯವಾಗಿ ತೊಡಗಿಸಿಕೊಂಡಿದ್ದಾರೆ. ಯತೀಂದ್ರ ಮಂತ್ರಿಗಳಿಗೆ ಸಲಹೆ ಕೊಡಬಾರದು. ನಮ್ಮ ಜೊತೆ ತೊಡಗಿಸಿಕೊಳ್ಳಬಾರದು ಎನ್ನುವುದು ತಪ್ಪು ಎಂದು ಹೇಳಿದರು.
ಮಾಡಲು ಕೆಲಸವಿಲ್ಲದೆ ಅನಗತ್ಯವಾಗಿ ಬಿಜೆಪಿ ಪ್ರತಿಭಟನೆ: ಡಿ.ಕೆ.ಶಿವಕುಮಾರ್
ಪಕ್ಷ ವಿಸರ್ಜನೆ ಮಾಡ್ತೀನಿ ಎಂದಿದ್ದರು: ಮಾಜಿ ಸಿಎಂ ಕುಮಾರಸ್ವಾಮಿ ಅವರು 123 ಸ್ಥಾನ ಗೆದ್ದು ಸರ್ಕಾರ ರಚನೆ ಮಾಡುತ್ತೇನೆ. ಒಮ್ಮೆ ಸರ್ಕಾರ ರಚನೆ ಮಾಡದಿದ್ದರೆ ಪಕ್ಷವನ್ನೇ ವಿಸರ್ಜನೆ ಮಾಡುವುದಾಗಿ ಹೇಳಿದ್ದರು. ಕುಮಾರಸ್ವಾಮಿ ಅವರ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ. ಅವರ ಬಗ್ಗೆ ಟೀಕೆ ಮಾಡಲು ಇಷ್ಟಪಡುವುದಿಲ್ಲ ಎಂದರು.
ದಾಖಲೆ ಬಿಡುಗಡೆ ಮಾಡಲಿ: ವರ್ಗಾವಣೆ ದಂಧೆ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಅವರು ತಮ್ಮಲ್ಲಿರುವ ದಾಖಲೆ ಬಿಡುಗಡೆ ಮಾಡಲಿ, ಯಾರು ಬೇಡ ಅಂತಾರೆ. ಮೊದಲೇ ಅವರು ದಾಖಲೆಗಳನ್ನು ದೊಡ್ಡದಾಗಿ ಇಟ್ಟುಕೊಳ್ಳುವವರು. ಈಗ ಒಂದು ದಾಖಲೆಯನ್ನೂ ಬಿಡುಗಡೆ ಮಾಡಿಲ್ಲ. ಹಿಂದೆ ಮುಂಬೈನಲ್ಲಿ ಹಾವು ಇಲ್ಲಿದೆ ನೋಡಿ ಹೆಬ್ಬಾವು ಬರುತ್ತೆ ಎಂದು ಚಿಕ್ಕಮಕ್ಕಳಿಗೆ ಬೊಂಬೆ ತೋರಿಸಿ ಮನರಂಜನೆ ನೀಡುತ್ತಿದ್ದರು. ಹಾಗೆ ಕುಮಾರಸ್ವಾಮಿ ನಾನು ಬಿಡುಗಡೆ ಮಾಡ್ತೇನೆ ಅಂತಾರೆ. ಆದರೆ, ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ನಾನು ಕುಮಾರಸ್ವಾಮಿ ಅವರನ್ನು ಜೊತೆಯಲ್ಲಿದ್ದು ನೋಡಿದ್ದೀನಿ. ದೂರದಲ್ಲಿದ್ದೂ ನೋಡಿದ್ದೀನಿ. ಅವರು ಬಿಡುಗಡೆ ಮಾಡೋದನ್ನು ಯಾರೂ ತಡೆಯಲು ಆಗೋಲ್ಲ. ನಾಳೆಯೇ ಅವರು ದಾಖಲೆಗಳನ್ನು ಬಿಡುಗಡೆ ಮಾಡಲಿ. ಅದಕ್ಕೆ ನಾವೂ ಉತ್ತರ ಕೊಡುತ್ತೇವೆ ಎಂದು ಹೇಳಿದರು. ವರ್ಗಾವಣೆ ದಂಧೆ ಸಂಬಂಧ ದಾಖಲೆ ಬಿಡುಗಡೆ ಮಾಡಿದರೆ ಸರ್ಕಾರ ಉಳಿಯಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಚಲುವರಾಯಸ್ವಾಮಿ, ನಗುವಿನೊಂದಿಗೆ ಪತ್ರಕರ್ತರಿಗೆ ಕೈ ಮುಗಿದು ದಯಮಾಡಿ ದಾಖಲೆ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ತಪ್ಪು ಮಾಡಿದವರ ವಿರುದ್ಧ ಕ್ರಮ: ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಕಾಂಗ್ರೆಸ್ ಪಕ್ಷ ಮಾತ್ರ. ಬಿಜೆಪಿ ಅಥವಾ ಜೆಡಿಎಸ್ ಪಕ್ಷದಲ್ಲಿ ಆ ರೀತಿ ಇಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಬಗ್ಗೆ ಕುಮಾರಸ್ವಾಮಿ ಅವರು ಮಾತನಾಡುವ ಅಗತ್ಯವಿಲ್ಲ. 5 ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಅದಕ್ಕೆ ವಿಲವಿಲ ಅಂತ ಒದ್ದಾಡುತ್ತಿದ್ದಾರೆ ಎಂದರು. ಎಚ್‌ಡಿಕೆ ಹೋರಾಟಕ್ಕೆ ಬಿಎಸ್‌ವೈ ಸಂಪೂರ್ಣ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿಆರ್‌ಎಸ್, ಹೌದು, ಅವರು ಸಪೋರ್ಟ್ ಕೊಡಬೇಕಲ್ಲವೇ. ಬಿಜೆಪಿಯವರಿಗೆ ಅದು ಬಿಟ್ಟು ಬೇರೆ ಏನು ದಾರಿಯಿದೆ. ಯಡಿಯೂರಪ್ಪಗೆ ಕುಮಾರಸ್ವಾಮಿ, ಕುಮಾರಸ್ವಾಮಿಗೆ ಯಡಿಯೂರಪ್ಪ ಸಪೋರ್ಟ್ ಮಾಡದೆ ಬೇರೆ ದಾರಿಯೇ ಇಲ್ಲ. ಇಬ್ಬರೂ ಮೈತ್ರಿ ಆಗುತ್ತಾರೋ, ವಿಲೀನ ಆಗುವರೋ ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಸಿಎಂ ಸ್ಥಾನಕ್ಕೆ ಡಿಕೆಶಿ ಟವಲ್ ಹಾಕಿದ್ದಾರೆಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಅವರೇನಾದರೂ ಟವಲ್ ಹಾಕಿದ್ದೀನಿ ಅಂತ ಹೇಳಿದ್ದಾರಾ. ಸಿದ್ದರಾಮಯ್ಯ ಮತ್ತು ಡಿಕೆಶಿ ಬಹಳ ಅನ್ಯೋನ್ಯವಾಗಿದ್ದಾರೆ. ಯಾವುದೇ ಪಕ್ಷದಲ್ಲಿ ಇಷ್ಟೊಂದು ಅನ್ಯೋನ್ಯತೆ ಕಾಣಲಾಗುವುದಿಲ್ಲ ಎಂದರು. ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿರ್ತಾರ ಎಂದ ಸುದ್ದಿಗಾರರ ಪ್ರಶ್ನೆಗೆ, ಆ ವಿಚಾರ ನಿಮಗೇಕೆ. ನೀವೇನಾದ್ರೂ ಆಡಿಟಿಂಗ್ ಮಾಡ್ತೀರಾ ಅಂದ್ರೆ ಹೇಳ್ತೇನೆ. ವಿರೋಧ ಪಕ್ಷಕ್ಕೂ ಆ ವಿಚಾರವೇಕೆ. ಅವರಿಗೂ ಅದು ಸಂಬಂಧವಿಲ್ಲ. 5 ವರ್ಷವೂ ಕಾಂಗ್ರೆಸ್ ಪಕ್ಷ ಅಧಿಕಾರಲ್ಲಿದ್ದು ಸರ್ಕಾರ ನಡೆಸುತ್ತದೆ ಎಂದು ಹೇಳಿದರು.
Belagavi: ಗ್ರೇಡ್-2 ತಹಶೀಲ್ದಾರ್ ಅಶೋಕ್ ಮಣ್ಣಿಕೇರಿ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್; ಡೆತ್‌ನೋಟ್ ಪತ್ತೆ!
ವಿಪಕ್ಷ ನಾಯಕನನ್ನೇ ಆಯ್ಕೆ ಮಾಡಲಾಗಲಿಲ್ಲ: ವಿರೋಧ ಪಕ್ಷದ ನಾಯಕರ ಆಯ್ಕೆಯಲ್ಲಿ ಬಿಜೆಪಿ ತಡಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಸಿ.ಟಿ.ರವಿ ಪಂಚೆ ಬಿಚ್ತೀವಿ ಅಂದಿದ್ರು. ಅದಕ್ಕೆ ನಾನು ಹೇಳಿದ್ದು ಮೊದಲು ನಿಮ್ಮ ಪಂಚೆ ಸರಿಮಾಡಿಕೊಳ್ಳಿ ಅಂತಾ. ಒಂದು ತಿಂಗಳಲ್ಲೇ ಪೂರ್ಣಪ್ರಮಾಣದ ಕ್ಯಾಬಿನೆಟ್ ಆಗಿದೆ. ಆದರೆ ಒಂದು ರಾಷ್ಟ್ರೀಯ ಪಕ್ಷ ಇಲ್ಲಿವರೆಗೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ ಎಂದರೆ ಎಷ್ಟರ ಮಟ್ಟಿಗೆ ಆ ಸ್ಥಾನದ ಕೆಲಸ ಮಾಡುತ್ತೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ರಾಜ್ಯಪಾಲರ ಭಾಷಣ ಮಾಡುವ ಮುನ್ನ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಈವರೆಗೂ ಅವರು ಮಾಡಿಲ್ಲ. ಇದು ದುರಂತವೇ ಸರಿ ಎಂದು ಬಿಜೆಪಿ ನಾಯಕರನ್ನು ಕುಟುಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.